Teachers injured during survey duty: ರಾಜ್ಯ ಸರ್ಕಾರದ ವಿವಾದಾತ್ಮಕ ಸಾಮಾಜಿಕ ಸಮೀಕ್ಷೆಯು ಶಿಕ್ಷಕರಿಗೆ ಅಪಾಯಕಾರಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಗಣತಿ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಇಬ್ಬರು ಶಿಕ್ಷಕರು ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ (ಅ.15): ರಾಜ್ಯ ಸರ್ಕಾರದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಭಾರೀ ವಿವಾದಕ್ಕೆ ಗುರಿಯಾಗಿರುವುದಲ್ಲದೆ ,ಸಮೀಕ್ಷೆ ಕರ್ತವ್ಯದಲ್ಲಿರುವ ಶಿಕ್ಷಕರ ಸಾವು, ಅಪಘಾತ ಪ್ರಕರಣಗಳು ಹೆಚ್ಚಿರುವುದು ಆಘಾತ ಮೂಡಿಸಿದೆ.

ಸಮೀಕ್ಷೆ ಪ್ರಾರಂಭದಲ್ಲಿಂದಲೂ ಹೃದಯಾಘಾತ, ಅಪಘಾತ, ನಾಯಿ ದಾಳಿ, ಸೂಪರ್‌ವೈಸರ್‌ಗಳ ಕಿರುಕುಳದಂತೆ ಶಿಕ್ಷಕರು ಹೈರಾಣಾಗಿದ್ದರೆ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಈ ನಡುವೆ ಚಿತ್ರದುರ್ಗದಲ್ಲಿ ಜಾತಿಗಣತಿಗೆ ತೆರಳಿದ್ದ ಸಿಬ್ಬಂದಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಇದನ್ನೂ ಓದಿ: ಕೋಲಾರ: ಶಿಕ್ಷಕಿ ಅಕ್ತರ್ ಬೇಗಂ ನಿಗೂಢ ಸಾವು, ಸಮೀಕ್ಷೆ ಒತ್ತಡಕ್ಕೆ ಸಂಬಂಧವಿಲ್ಲ: ಜಿಲ್ಲಾಧಿಕಾರಿ

ಚಿತ್ರದುರ್ಗ ಜಿಲ್ಲೆಯಲ್ಲಿ ಜಾತಿಗಣತಿ ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಶಿಕ್ಷಕರಿಗೆ ಭೀಕರ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಘಟನೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಬಳಿ ನಡೆದಿದೆ. ಈ ಅಪಘಾತದಲ್ಲಿ ಶಿಕ್ಷಕ ಹೇಮಂತ್ ರಾಜು, ಪ್ರವೀಣ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇಂದು ಮಲ್ಲಸಂದ್ರ ಗ್ರಾಮದಲ್ಲಿ ಜಾತಿ ಗಣತಿ ಕಾರ್ಯ ಮುಗಿಸಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ಮತ್ತೊಂದು ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.