ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ವಿಜಯ್ ಗುರೂಜಿ ಎಂಬ ನಕಲಿ ಸ್ವಾಮಿಯನ್ನು ಜ್ಞาน ಭಾರತಿ ಪೊಲೀಸರು ಬಂಧಿಸಿದ್ದಾರೆ. ಈತ ಟೆಕ್ಕಿಯೊಬ್ಬರಿಗೆ ₹48 ಲಕ್ಷ ವಂಚಿಸಿದ್ದು, ರಾಜ್ಯದ ಹಲವೆಡೆ ಇದೇ ರೀತಿ ವಂಚನೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು (ಡಿ.2): ಲೈಂಗಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ 'ಗುರೂಜಿ'ಯೊಬ್ಬನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಟೆಕ್ಕಿಯೊಬ್ಬರಿಗೆ ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತಾ ಬರೋಬ್ಬರಿ ₹48 ಲಕ್ಷ ವಂಚಿಸಿರುವುದು ತನಿಖೆ ವೇಳೆ ಟೆಂಟ್ ಬಾಬನ ಕಥೆಗಳು ಬಯಲಾಗಿವೆ.

ಬಂಧಿತ ಆರೋಪಿಯನ್ನು ವಿಜಯ್ ಗುರೂಜಿ ಎಂದು ಗುರುತಿಸಲಾಗಿದೆ. ಈತನಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸ್ತೆ ಬದಿ ಟೆಂಟ್ ಹಾಕಿ ವಂಚನೆ:

ಆರೋಪಿ ವಿಜಯ್ ಗುರೂಜಿ ರಸ್ತೆ ಬದಿ ಟೆಂಟ್ ಹಾಕಿಕೊಂಡು ಆಯುರ್ವೇದ ಔಷಧಗಳನ್ನು ಮಾರಾಟ ಮಾಡುತ್ತಿದ್ದ. ಮಂಡಿನೋವು, ಚರ್ಮದ ಕಾಯಿಲೆ ಹಾಗೂ ವಿಶೇಷವಾಗಿ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ. ಪರಿಹಾರದ ಆಸೆಯಲ್ಲಿ ಬರುತ್ತಿದ್ದ ಜನರಿಗೆ, ಮೂಲಿಕೆ ಹಾಗೂ ಪುಡಿಗಳ ರೂಪದಲ್ಲಿ ನಕಲಿ ಆಯುರ್ವೇದ ಔಷಧಿಗಳನ್ನು ನೀಡಿ ವಂಚಿಸುತ್ತಿದ್ದ. ಖದೀಮ ಸಾವಿರ, ಐದು ಸಾವಿರ, ಹತ್ತು ಸಾವಿರದಂತೆ ಸಣ್ಣ ಮೊತ್ತದ ಹಣ ವಂಚನೆ ಮಾಡುತ್ತಿದ್ದರೂ, 'ಮಾನ ಹರಾಜಾಗುವುದಕ್ಕೆ' ಅಂಜಿ ಕೆಲವರು ಪೊಲೀಸರಿಗೆ ದೂರು ನೀಡದೇ ಸುಮ್ಮನಾಗುತ್ತಿದ್ದರು.

ಮರ್ಯಾದೆಗೆ ಅಂಜಿದ ಟೆಕ್ಕಿಗೆ ₹48 ಲಕ್ಷ ವಂಚನೆ!

ಇದೇ ಜನರ ಸಂಕೋಚವನ್ನು ಬಂಡವಾಳ ಮಾಡಿಕೊಂಡ ವಿಜಯ್ ಗುರೂಜಿ, ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರನ್ನು ಸಂಪರ್ಕಿಸಿದ್ದ. ಟೆಕ್ಕಿಗೆ ಸಂಪೂರ್ಣ ಪರಿಹಾರ ನೀಡುವುದಾಗಿ ಭರವಸೆ ನೀಡಿ, ಹಂತ ಹಂತವಾಗಿ ಸುಮಾರು ₹48 ಲಕ್ಷ ಹಣ ವಂಚಿಸಿ ಎಸ್ಕೇಪ್ ಆಗಿದ್ದ ಖದೀಮ!

ದೊಡ್ಡ ಮಟ್ಟದ ವಂಚನೆಯಾದ ನಂತರ ಟೆಕ್ಕಿ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು. ತನಿಖೆ ವೇಳೆ ಈ ಟೆಂಟ್ ಬಾಬಾ ರಾಜ್ಯದ ಹಲವು ಕಡೆ ಇದೇ ರೀತಿ ಜನರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ಆರೋಪಿ ವಿಜಯ್ ಗುರೂಜಿ ಮತ್ತು ಆತನ ಸಹಚರನನ್ನು ಬಂಧಿಸಿರುವ ಜ್ಞಾನ ಭಾರತಿ ಠಾಣೆಯ ಪೊಲೀಸರು, ಇತರೆ ಕಡೆಗಳಲ್ಲಿ ನಡೆದಿರುವ ವಂಚನೆಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.