ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಮನೆ ಭೋಗ್ಯದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮನೆ ಖಾಲಿ ಮಾಡುವಂತೆ ಕೇಳಿದ್ದಕ್ಕೆ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟಿದ್ದು, ಇದು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಯುವಕನೊಬ್ಬ ಮಹಿಳೆಯ ಜಡೆ ಹಿಡಿದು ಎಳೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪ.

ಮೂಡಿಗೆರೆ (ಡಿ.16): ಮನೆ ಭೋಗ್ಯದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೀಜುವಳ್ಳಿ ಗ್ರಾಮದಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಿದ ಸಂದರ್ಭದಲ್ಲಿ ಯುವಕನೊಬ್ಬ ಮಹಿಳೆಯೊಬ್ಬರ ಜಡೆ ಹಿಡಿದು ಧರಧರನೆ ಎಳೆದು ನೆಲಕ್ಕೆ ಬಿಸಾಕಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಭೋಗ್ಯ ವಿವಾದ: ಸಾಬಿರಾ-ರತ್ನ ಕುಟುಂಬಗಳ ಮಧ್ಯೆ ಕಿರಿಕ್

ರತ್ನ ಎಂಬುವವರಿಗೆ ಸಾಲವಿದ್ದ ಕಾರಣ, ಅವರು ತಮ್ಮ ಮನೆಯನ್ನು ₹8 ಲಕ್ಷ ಕೈ ಸಾಲ ಪಡೆದು ಸಾಬಿರಾ ಎಂಬುವವರಿಗೆ ಲೀಸ್‌ಗೆ (ಭೋಗ್ಯಕ್ಕೆ) ನೀಡಿದ್ದರು. ಈ ಮನೆಯಲ್ಲಿ ಮೊದಲು ಭೋಗ್ಯಕ್ಕಿದ್ದ ಸಾಬಿರಾ, ಮನೆ ಬಿಡುವಂತೆ ರತ್ನ ಅವರು ಕೇಳಿದಾಗ ವಿವಾದ ಶುರುವಾಗಿದೆ. 'ಬ್ಯಾಂಕಿನಲ್ಲಿ ಫ್ರೀ ಕೊಡಲ್ಲ, ಮನೆ ರೀಪೇರಿ ಮಾಡಿಸಿದ್ದೇನೆ, ಟೈಲ್ಸ್ ಹಾಕಿಸಿದ್ದೇನೆ' ಎಂದು ಹೇಳಿ, ಮನೆ ಬಿಡಲು ₹8 ಲಕ್ಷದ ಬದಲಾಗಿ ₹18 ಲಕ್ಷ ನೀಡುವಂತೆ ಸಾಬಿರಾ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ನಡುವೆ, ಸಾಬಿರಾ ಅವರು ಭೋಗ್ಯಕ್ಕೆ ಪಡೆದಿದ್ದ ಮನೆಯನ್ನು ಮತ್ತೊಬ್ಬರಿಗೆ ಬಾಡಿಗೆಗೆ ಸಹ ನೀಡಿದ್ದರು ಎಂಬ ಅಂಶ ಬಯಲಾಗಿದೆ.

ರತ್ನ ಮಗ ಹಾಗೂ ಸ್ನೇಹಿತರಿಂದ ಸಾಬಿರಾ ಮೇಲೆ‌ ಹಲ್ಲೆ

ಮನೆ ಬಿಡುವ ವಿಚಾರವಾಗಿ ರತ್ನ ಮತ್ತು ಸಾಬಿರಾ ಕುಟುಂಬಗಳ ಮಾತಿನಚಕಮಕಿ ನಡೆದು, ಅದು ತೀವ್ರ ಗಲಾಟೆಗೆ ತಿರುಗಿದೆ. ಈ ಘಟನೆಯ ರತ್ನ ಮಗ ಮತ್ತು ಸ್ನೇಹಿತರಿಂದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಜಡೆ ಹಿಡಿದು ಎಳೆದು ಬಿಸಾಕುತ್ತಿರುವ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಮಾರಾಮಾರಿಯ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.