ಬಿ.ಎ. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ 300 ರೂಪಾಯಿ ಲಂಚ ನೀಡಿ, ಮೊಬೈಲ್ ಫೋನ್ ಬಳಸಿ ನಕಲು ಮಾಡಿದ್ದಾರೆ. ಲಂಚ ನೀಡಲು ನಿರಾಕರಿಸಿದ ಕೆಲವು ವಿದ್ಯಾರ್ಥಿಗಳು ತಮಗೂ ಉಚಿತವಾಗಿ ನಕಲು ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದು ಮಾಮೂಲು. ಕಾಪಿ ಮಾಡುವುದಕ್ಕಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಟ್ಯಾಲೆಂಟ್​ ಉಪಯೋಗಿಸುವುದು ಇದ್ದೇ ಇದೆ. ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ಸಿವಿಲ್​ ಸರ್ವಿಸ್​ ಅಭ್ಯರ್ಥಿಗಳು ಲಂಚ ಕೊಟ್ಟು ಮೊಬೈಲ್​ ನೋಡಿ ಪರೀಕ್ಷೆ ಬರೆದಿದ್ದಾರೆ! ಭಾವಿ ಐಎಎಸ್​​, ಐಪಿಎಸ್​ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳಾಗುವ ಈ ಅಭ್ಯರ್ಥಿಗಳು 300 ರೂಪಾಯಿ ಕೊಟ್ಟು ಮೊಬೈಲ್​ ನೋಡಿ ಬಿಎ ಸಿವಿಲ್​ ಸರ್ವಿಸ್​ ಪರೀಕ್ಷೆ ಬರೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಬಿ.ಎ. ಸಿವಿಲ್ ಸರ್ವೀಸಸ್ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಒಳಗೆ ಅನ್ಯಾಯದ ಅಭ್ಯಾಸಗಳಲ್ಲಿ ತೊಡಗಿರುವುದು ಕಂಡುಬಂದಿದೆ.

ಮೊಬೈಲ್​ ಫೋನ್​ ಬಳಕೆ- ಏನಿದು ಬಿಎ ಸಿವಿಲ್​ ಸರ್ವಿಸ್​ ಎಕ್ಸಾಂ?

ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸುವ ಮೂಲಕ ಇವರು ವಂಚನೆ ಮಾಡಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿದವರು ಅಲ್ಲಿಯ ಮೇಲ್ವಿಚಾರಕರು. ಪ್ರತಿಯೊಬ್ಬರಿಂದ 300 ರೂಪಾಯಿ ಪಡೆದು ಮೊಬೈಲ್​ ನೋಡಲು ಅವಕಾಶ ಕಲ್ಪಿಸಲಾಗಿದೆ. ಕೇಳಿದ ಪ್ರಶ್ನೆಗಳಿಗೆ ಗೂಗಲ್​ ಸರ್ಚ್​ ಮಾಡಿ ಉತ್ತರ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದು ಎಷ್ಟು ವರ್ಷಗಳಿಂದ, ಇನ್ನು ಎಲ್ಲೆಲ್ಲಿ ನಡೆಯುತ್ತಿವೆಯೋ ಆ ದೇವರಿಗೇ ಗೊತ್ತು. ಇಂಥ ಮಾರಾಟಕ್ಕಿರುವ ಪರೀಕ್ಷಾ ಕೇಂದ್ರಗಳು ಇನ್ನೆಲ್ಲೆಲ್ಲಿ ನಿರಾತಂಕವಾಗಿ ನಡೆಯುತ್ತಿದೆ ಎನ್ನುವುದು ಸೂಕ್ತ ತನಿಖೆ ಮಾಡಿದರಷ್ಟೇ ತಿಳಿಯಲಿದೆ. ಆದರೆ, ಇಲ್ಲಿ ಆದ ಒಂದು ಚಿಕ್ಕ ಎಡವಟ್ಟಿನಿಂದಾಗಿ ಮೋಸದ ಜಾಲ ಬೆಳಕಿಗೆ ಬಂದಿದೆ.

ನಾಗರಿಕ ಸೇವೆಗಳಲ್ಲಿ ಬಿಎ (ಬ್ಯಾಚುಲರ್ ಆಫ್ ಆರ್ಟ್ಸ್) ಎಂಬುದು 3 ವರ್ಷಗಳ ಪದವಿಪೂರ್ವ ಪದವಿಯಾಗಿದ್ದು, ಸಾಂಪ್ರದಾಯಿಕ ಶೈಕ್ಷಣಿಕ ಅಧ್ಯಯನಗಳನ್ನು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಂತಹ ಸ್ಪರ್ಧಾತ್ಮಕ ಸರ್ಕಾರಿ ಪರೀಕ್ಷೆಗಳಿಗೆ ಕೇಂದ್ರೀಕೃತ ತಯಾರಿಯೊಂದಿಗೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾಜಿಕ ವಿಜ್ಞಾನ, ಇತಿಹಾಸ ಮತ್ತು ಸಾರ್ವಜನಿಕ ನೀತಿಯ ಮೂಲಭೂತ ತಿಳಿವಳಿಕೆಯನ್ನು ಒದಗಿಸುತ್ತದೆ, ಇದು ಸಾರ್ವಜನಿಕ ಆಡಳಿತದಲ್ಲಿ ವೃತ್ತಿಜೀವನಕ್ಕೆ ನೇರ ಪೂರ್ವಸಿದ್ಧತಾ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಇವರಿಗೆ ಭವಿಷ್ಯದಲ್ಲಿ ಸಿವಿಲ್​ ಸರ್ವಿಸ್​ ಅಧಿಕಾರಿಗಳಾಗಲು ದಾರಿ ಸುಗಮವಾಗುತ್ತದೆ!

ಬೆಳಕಿಗೆ ಬಂದದ್ದು ಹೇಗೆ?

ಈ ಘಟನೆ ಏಪ್ರಿಲ್ 22 ರಂದು ಮುಲ್‌ನಲ್ಲಿರುವ ಮತ್ತು ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸರ್ವೋದಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಾರ್ಥಿಗಳು ಗೂಗಲ್ ಮತ್ತು ಎಐ ಪರಿಕರಗಳಲ್ಲಿ ಉತ್ತರಗಳನ್ನು ಹುಡುಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ. ಅಷ್ಟಕ್ಕೂ ಕೆಲವು ಅಭ್ಯರ್ಥಿಗಳು 300 ರೂಪಾಯಿ ನೀಡಲು ನಿರಾಕರಿಸಿದ್ದರು. ಹಾಗೆಂದು ಅವರು ಮೊಬೈಲ್​ ನೋಡದೇ ಇದರ ವಿರುದ್ಧ ಪ್ರತಿಭಟಿಸಿದ್ದು ಅಂತಲ್ಲ. ತಮಗೆ ಲಂಚ ನೀಡಲು ಆಗುವುದಿಲ್ಲ. ಹಾಗೆಯೇ ಮೊಬೈಲ್​ ನೋಡಲು ಅವಕಾಶ ಕಲ್ಪಿಸಬೇಕು ಎನ್ನುವುದು ಇವರ ಹಟವಾಗಿತ್ತು. ಆದರೆ, ಅದನ್ನು ನಿರಾಕರಿಸಿದಾಗ, ಆ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ಮಾಡಿದರು. ಇದು ದೊಡ್ಡದಾದಾಗ, ಪೊಲೀಸರ ಪ್ರವೇಶವಾಗಿದೆ. ಆಗ ಅಸಲಿಯತ್ತು ಬೆಳಕಿಗೆ ಬಂದಿದೆ.

ನೀತಿ ಸಂಹಿತೆ ಉಲ್ಲಂಘನೆ

ನಾಗರಿಕ ಸೇವಕರಾಗಲು ಬಯಸುವ ವಿದ್ಯಾರ್ಥಿಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬುದು ಕಳವಳಕಾರಿ. ಭಾರತದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ಆಸನ ವ್ಯವಸ್ಥೆ ಕೂಡ ಇರಲಿಲ್ಲ. ಈ ಕೇಂದ್ರದಲ್ಲಿ ಸುಮಾರು 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ, ಒಂದು ಸೀಟಿನಲ್ಲಿ ಮೂವರು ವಿದ್ಯಾರ್ಥಿಗಳು ತುಂಬಿರುತ್ತಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಕೆಲವರು ಪರೀಕ್ಷೆ ಬರೆಯಲು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಇದಲ್ಲದೆ, ಪರೀಕ್ಷಾರ್ಥಿಗಳಿಗೆ ಕೇಂದ್ರದಲ್ಲಿ ಶೌಚಾಲಯ ಸೌಲಭ್ಯವಿಲ್ಲ.

ಹೀಗಿದೆ ವ್ಯವಸ್ಥೆ

ವಿಷಾದಕರವೆಂದರೆ, ಕಳೆದ ಕೆಲವು ವರ್ಷಗಳಿಂದ, ವಿದ್ಯಾರ್ಥಿಗಳು ಸಭಾಂಗಣಗಳ ಒಳಗೆ ಬಹಿರಂಗವಾಗಿ ನಕಲು ಮಾಡುವುದು ಮತ್ತು ಒಳಗಿನವರು ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ವ್ಯವಸ್ಥಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಪಟ್ಟಣದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಕೆಲವು ಸಂಘಟನಾ ಅಧಿಕಾರಿಗಳು ಇಂತಹ ಘಟನೆಗಳು ನಡೆಯಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ, ಇತರರು ಇನ್ನೂ ಈ ವಿಷಯದ ಬಗ್ಗೆ ಪೂರ್ವಭಾವಿ ನಿರ್ಧಾರ ತೆಗೆದುಕೊಂಡಿಲ್ಲ! ಹೀಗಿದೆ ನಮ್ಮ ವ್ಯವಸ್ಥೆ!