ಉತ್ತರ ಕನ್ನಡದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್, ಪರೀಕ್ಷಾ ಮಂಡಳಿಯ ತಪ್ಪಿನಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 'ಗೈರು' ಎಂದು ನಮೂದಿಸಿ ಫೇಲ್ ಆಗಿದ್ದರು. ಮಾಧ್ಯಮಗಳ ವರದಿ ನಂತರ, ಮಂಡಳಿಯು ತಪ್ಪನ್ನು ಸರಿಪಡಿಸಿ ಫಲಿತಾಂಶ ಪ್ರಕಟಿಸಿದ್ದು, ಲೀಸಾ 603 ಅಂಕಗಳನ್ನು ಗಳಿಸಿದ್ದಾರೆ.
ಉತ್ತರ ಕನ್ನಡ (ಏ.24): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದಾಗಿ ಕಣ್ಣೀರು ಹಾಕಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್ಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ಪರೀಕ್ಷೆಗೆ ಹಾಜರಾಗಿದ್ದರೂ 'ಗೈರು' ಎಂದು ನಮೂದಿಸಿ ವಿದ್ಯಾರ್ಥಿನಿಯನ್ನು ಫೇಲ್ ಮಾಡಿದ್ದ ಪರೀಕ್ಷಾ ಪ್ರಾಧಿಕಾರ, ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಹೊಸ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದ ಪ್ರಕಾರ ಲೀಸಾ ಖಾನಮ್ ಬರೋಬ್ಬರಿ 603 ಅಂಕಗಳನ್ನು ಗಳಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಘಟನೆಯ ಹಿನ್ನೆಲೆ: ಪರೀಕ್ಷಾ ಮಂಡಳಿಯ ಎಡವಟ್ಟು
ಶಿರಸಿಯ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಲೀಸಾ ಖಾನಮ್ ಜನ್ಮಜಾತ ಅಂಧತ್ವ ಹೊಂದಿದ್ದರೂ ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಲೀಸಾ, ಎಲ್ಲಾ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಗುರುವಾರ ಫಲಿತಾಂಶ ಪ್ರಕಟವಾದಾಗ ಲೀಸಾ ಆಘಾತಕ್ಕೊಳಗಾಗಿದ್ದರು. ಸಮಾಜ ವಿಜ್ಞಾನ (Social Science) ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ 'ಗೈರು' (Absent) ಎಂದು ನಮೂದಿಸಿ ಅವರನ್ನು ಫೇಲ್ ಮಾಡಲಾಗಿತ್ತು.
ಕಣ್ಣೀರು ಹಾಕಿದ್ದ ಲೀಸಾ; ಸಾಕ್ಷ್ಯ ನೀಡಿದ ಪ್ರವೇಶ ಪತ್ರ
ಪ್ರಾಧಿಕಾರದ ಈ ಎಡವಟ್ಟಿನಿಂದ ಲೀಸಾ ಮತ್ತು ಅವರ ಪೋಷಕರು ಕಂಗಾಲಾಗಿದ್ದರು. ಆದರೆ ಛಲ ಬಿಡದ ಲೀಸಾ, ತನ್ನ ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಮೇಲ್ವಿಚಾರಕರು ಮಾಡಿದ್ದ ಸಹಿಯನ್ನು ತೋರಿಸಿ ತಾನು ಪರೀಕ್ಷೆಗೆ ಹಾಜರಾಗಿದ್ದನ್ನು ಸಾಬೀತುಪಡಿಸಿದ್ದರು. 84% ಕ್ಕೂ ಅಧಿಕ ಅಂಕ ಗಳಿಸಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಸಣ್ಣ ತಾಂತ್ರಿಕ ದೋಷದಿಂದ ಫೇಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಧ್ಯಮಗಳಲ್ಲಿ ಈ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪರೀಕ್ಷಾ ಪ್ರಾಧಿಕಾರ ತಕ್ಷಣವೇ ಮೌಲ್ಯಮಾಪನದ ದಾಖಲೆಗಳನ್ನು ಪರಿಶೀಲಿಸಿತು.
ಈಗ ಲೀಸಾ ಜಿಲ್ಲೆಗೆ ಟಾಪರ್!
ಪರೀಕ್ಷಾ ಪ್ರಾಧಿಕಾರವು ಈಗ ತನ್ನ ತಪ್ಪನ್ನು ಸರಿಪಡಿಸಿಕೊಂಡು ಲೀಸಾ ಖಾನಮ್ ಅವರ ಪರಿಷ್ಕೃತ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಫಲಿತಾಂಶದಲ್ಲಿ ಲೀಸಾ 625 ಕ್ಕೆ 603 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಅಂಧ ವಿದ್ಯಾರ್ಥಿಗಳ ಪೈಕಿ ಲೀಸಾ ಖಾನಮ್ ಇದೀಗ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಇನ್ನು ಫೇಲಾಗಿದ್ದ ವಿಷಯ ಸಮಾಜ ವಿಜ್ಞಾನ ವಿಷಯದಲ್ಲಿ ಅವರಿಗೆ 97 ಅಂಕಗಳು ಲಭಿಸಿವೆ.
ಲೀಸಾ ಖಾನಮ್ ಅವರ ಅಂಕಗಳ ವಿವರ:
- ಕನ್ನಡ: 100/100
- ಉರ್ದು : 124
- ಇಂಗ್ಲಿಷ್: 92
- ಎಕನಾಮಿಕ್ಸ್: 98
- ಪೊಲಿಟಿಕಲ್ ಸೈನ್ಸ್: 92
- ಸಮಾಜ ವಿಜ್ಞಾನ: 97
- ಒಟ್ಟು ಅಂಕಗಳು: 603 / 625
ತಾನು ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂದು ತಿಳಿದಾಗ ಮರುಗಿದ್ದ ಲೀಸಾ, ಈಗ 603 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದನ್ನು ಕಂಡು ಪೋಷಕರು ಮತ್ತು ಶಾಲೆಯ ಶಿಕ್ಷಕರು ಸಂಭ್ರಮಿಸಿದ್ದಾರೆ. ದೃಷ್ಟಿ ಇಲ್ಲದಿದ್ದರೂ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು ಎಂಬುದನ್ನು ಲೀಸಾ ತೋರಿಸಿಕೊಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಿದ್ದ ಪ್ರತಿಭೆಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.


