ಸೀರಿಯಲ್ಗಳಲ್ಲಿ ನಾಯಕ-ನಾಯಕಿ ನಿಜವಾಗಿಯೂ ಒಬ್ಬರ ಮೇಲೊಬ್ಬರು ಬಿದ್ದು ಉರುಳಾಡುತ್ತಾರೆ ಎಂದುಕೊಂಡಿರುವಿರಾ? ಶೂಟಿಂಗ್ನಲ್ಲಿ ಇಂಥ ದೃಶ್ಯಗಳನ್ನು ಹೇಗೆ ಶೂಟ್ ಮಾಡ್ತಾರೆ ನೋಡಿ...
ಸಿನಿಮಾಗಳಲ್ಲಿ ಬಿಡಿ ನಟಿಯರಂತೂ ಎಲ್ಲದ್ದಕ್ಕೂ ರೆಡಿಯಾಗಿಯೇ ಬಂದಿರುತ್ತಾರೆ. ಅಗತ್ಯಬಿದ್ದರೆ ಎನ್ನುತ್ತಲೇ ಸಂಪೂರ್ಣ ನಗ್ನರಾಗಲೂ ಹಲವರು ರೆಡಿ ಇದ್ದಾರೆ. ಅಂಥವರಿಗೆ ರೊಮಾನ್ಸ್ ದೃಶ್ಯ, ಇಂಟಿಮೇಟ್ ಸೀನ್, ಮಳೆಯಲ್ಲಿ ನೆನೆದು ಎಲ್ಲವನ್ನೂ ಕಾಣಿಸುವುದು ದೊಡ್ಡ ವಿಷಯವೇ ಅಲ್ಲ. ಅಪರೂಪಕ್ಕೆ ಎಂಬಂತೆ ಕೆಲವು ನಟಿಯರು ಮಾನ-ಮರ್ಯಾದೆಗೆ ಅಂಜಿ ಇತಿಮಿತಿಯಲ್ಲಿ ಇರುತ್ತಾರೆ ಅಷ್ಟೇ. ಆದರೆ ಸೀರಿಯಲ್ ವಿಷಯಕ್ಕೆ ಬರುವುದಾದರೆ ಅಲ್ಲಿ ಹಾಗಲ್ಲ. ಇಲ್ಲಿ ಸಿನಿಮಾದ ರೀತಿಯಲ್ಲಿಯೇ ದೃಶ್ಯಗಳನ್ನು ತೋರಿಸಿದರೂ, ರೊಮಾನ್ಸ್, ಇಂಟಿಮೇಟ್ ದೃಶ್ಯಗಳು ಇದ್ದರೂ ಶೂಟಿಂಗ್ನಲ್ಲಿ ನಡೆಯುವುದೇ ಬೇರೆ. ಎಷ್ಟೋ ದೃಶ್ಯಗಳಲ್ಲಿ ಛೇ ಇವರು ಹೀಗೆಲ್ಲಾ ತಬ್ಬಿಕೊಳ್ತಾರೆ, ಒಬ್ಬರ ಮೇಲೊಬ್ಬರು ಹೀಗೆಲ್ಲಾ ಬೀಳ್ತಾರಾ ನಾಚಿಕೆ ಆಗಲ್ವಾ ಎಂದೆಲ್ಲಾ ಸೀರಿಯಲ್ಗಳನ್ನು ವೀಕ್ಷಿಸುವಾಗ ಅನ್ನಿಸುವುದು ಇದೆ. ಕೆಲವೊಮ್ಮೆ ರಿಯಲ್ ಆಗಿ ಹೀಗೆ ಮಾಡಿದರೆ, ಹಲವು ಬಾರಿ ಅಲ್ಲಿ ಆಗುವುದೇ ಬೇರೆಯ ರೀತಿ.
ಇದೀಗ ಜೀ ಟಿವಿಯಲ್ಲಿ ಪ್ರಸಾರ ಆಗುತ್ತಿರೋ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಅಲ್ಲಿ ನಾಯಕಿ ಭಾರ್ಗವಿ ಮತ್ತು ನಾಯಕ ಅಕಸ್ಮಾತ್ತಾಗಿ ಒಬ್ಬರ ಮೇಲೆ ಒಬ್ಬರು ಬೀಳುವ ದೃಶ್ಯವಿದೆ. ಅಷ್ಟಕ್ಕೂ ಇದು ಎಲ್ಲಾ ಸೀರಿಯಲ್ಗಳಲ್ಲಿಯೂ, ಸಿನಿಮಾಗಳಲ್ಲಿಯೂ ಮಾಮೂಲು ಬಿಡಿ. ಒಂದಷ್ಟು ಸಿದ್ಧ ಸೂತ್ರಗಳು ಅಂದಿನಿಂದ ಇಂದಿನವರೆಗೂ ನಡೆದೇ ಬಂದಿದೆ. ಇಬ್ಬರ ನಡುವೆ ಲವ್ ಆಗಬೇಕು ಎಂದರೆ ಕಾಲು ಜಾರಿಯೋ, ಏಣಿಯಿಂದಲೋ ನಾಯಕಿ ಬೀಳುವುದು, ನಾಯಕ ಆಕೆಯನ್ನು ಹಿಡಿದುಕೊಳ್ಳುವುದು... ಇಬ್ಬರ ಕಣ್ಣು ಕಣ್ಣುಗಳಲ್ಲಿಯೇ ಮಾತುಕತೆಯಾಗುವುದು... ಇದು ಬ್ಲ್ಯಾಕ್ ಆ್ಯಂಡ್ ವೈಟ್ ಸಿನಿಮಾ ಯುಗದಿಂದಲೂ ಬಂದದ್ದೇ. ಅದೇ ರೀತಿ ಈ ಸೀರಿಯಲ್ನಲ್ಲಿಯೂ ಇದೆ.
ಆದರೆ ಅಸಲಿಗೆ ಶೂಟಿಂಗ್ನಲ್ಲಿ ಆಗಿದ್ದೇನು ಎನ್ನುವುದನ್ನು ಭಾರ್ಗವಿ ಪಾತ್ರಧಾರಿ ರಾಧಾ ಭಗವತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ಬ್ಲೂಸ್ಕ್ರೀನ್ ಅಥವಾ ಗ್ರೀನ್ ಸ್ಕ್ರೀನ್ ಟೆಕ್ನಾಲಾಜಿಯೇ ಬಹು ದೊಡ್ಡ ಪಾತ್ರ ವಹಿಸುತ್ತಿದೆ. ನೀಲಿ ಅಥವಾ ಹಸಿರು ಬಣ್ಣಗಳ ಪರದೆಯನ್ನು ಹಿಂದಕ್ಕೆ ಸ್ಕ್ರೀನ್ ಹಾಕಿ ಅಲ್ಲಿ ಬೇಕಾದ ದೃಶ್ಯಗಳನ್ನು ಮಾಡಲಾಗುತ್ತದೆ. ಗುಡ್ಡದ ಮೇಲಿನಿಂದ ಬೀಳುವುದು, ರೊಮಾನ್ಸ್ ಮಾಡುವುದು, ಬೆಟ್ಟದ ತುದಿಯಲ್ಲಿ ಜಾರಿ ಬೀಳುವಂತೆ- ಮೇಲುಗಡೆಯಿಂದ ಇನ್ನೊಬ್ಬರು ಅವರನ್ನು ಹಿಡಿಯುವಂತೆ ಮಾಡುವುದು... ಎಲ್ಲವೂ ಈ ಪರದೆಯ ಎದುರೇ ಶೂಟಿಂಗ್ ಮಾಡಲಾಗುತ್ತದೆ. ಅಸಲಿಗೆ ಅದು ಶೂಟಿಂಗ್ ಸೆಟ್ನಲ್ಲಿಯೇ ನಡೆಯುತ್ತದೆ. ಅಲ್ಲಿ ಗುಡ್ಡ, ಬೆಟ್ಟ ಏನೂ ಇರುವುದಿಲ್ಲ. ನಟರು ಆ ರೀತಿ ಆ್ಯಕ್ಟ್ ಮಾಡುತ್ತಾರೆ. ಅದಾದ ಬಳಿಕ ಎಡಿಟಿಂಗ್ನಲ್ಲಿ ಆ ನೀಲಿ ಅಥವಾ ಹಸಿರು ಸ್ಕ್ರೀನ್ ತೆಗೆದು ಅಲ್ಲಿ ತಮಗೆ ಯಾವ ವಸ್ತು ಬೇಕೋ ಅದನ್ನು ತೋರಿಸಲಾಗುತ್ತದೆ.
ಅದೇ ರೀತಿ ರೊಮಾನ್ಸ್ ದೃಶ್ಯಗಳಲ್ಲಿಯೂ ಆಗುತ್ತದೆ. ಇಲ್ಲಿ ಭಾರ್ಗವಿ ಮತ್ತು ನಾಯಕ ಪಾರ್ಥ ಒಬ್ಬರ ಮೇಲೊಬ್ಬರು ಬಿದ್ದು ಕಣ್ಣು ಕಣ್ಣ ಸಲುಗೆ ಎಂದು ನಮಗೆ ಕಂಡುಬಂದರೂ, ಅಲ್ಲಿ ನಿಜವಾಗಿ ನಾಯಕ ಬಿದ್ದದ್ದು ನಟಿಯ ಮೇಲಲ್ಲ... ಬದಲಿಗೆ ಹಸಿರು ಪರದೆಯ ಮೇಲೆ, ಅಲ್ಲಿಯೇ ನಾಯಕಿ ಇದ್ದಂತೆ ಕಲ್ಪನೆ ಮಾಡಿಕೊಂಡು ಕಣ್ಣಿನ ಆ್ಯಕ್ಷನ್ ಮಾಡಬೇಕು. ನಂತರ ಎರಡೂ ದೃಶ್ಯಗಳನ್ನು ಒಟ್ಟಿಗೇ ಕೂಡಿಸಿ ನಾಯಕಿ-ನಾಯಕ ಒಬ್ಬರ ಮೇಲೊಬ್ಬರು ಬೀಳುವಂತೆ ತೋರಿಸಲಾಗುತ್ತದೆ. ಇದು ಶೂಟಿಂಗ್ ಹಿಂದಿರುವ ರಹಸ್ಯ. ಈ ರಹಸ್ಯ ಅರಿತವರಿಗೆ ಮಾತ್ರ ರಾಧಾ ಭಗವತಿ ಅವರು ಶೇರ್ ಮಾಡಿರುವ ಈ ವಿಡಿಯೋ ಅರಿಯಲು ಸಾಧ್ಯ. ಇನ್ನೊಮ್ಮೆ ಈ ವಿಡಿಯೋ ನೋಡಿದರೆ ನಿಮಗೂ ಅದು ಅರ್ಥವಾದೀತು.


