ಈ ಬಾರಿ ವೀಕೆಂಡ್ ಹಾಗೂದೀಪಾವಳಿ ಹಬ್ಬ ಜೊತೆಯಾಗಿ ಬಂದಿದ್ದು, 'ಕಾಂತಾರ ಚಾಪ್ಟರ್ 1' ಸಿನಿಮಾ ಗಳಿಕೆಯು ಶೀಘ್ರದಲ್ಲೇ 1000 ಕೋಟಿ ದಾಟುವ ನಿರೀಕ್ಷೆ ಇದೆ. ಸಿನಿಮಾ ಸಕ್ಸಸ್ ಓಟ ಇದೇ ರೀತಿ ಮುಂದುವರಿದರೆ ಇದು ‘ಕೆಜಿಎಫ್ 2’ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ
ಕಾಂತಾರ ಚಾಪ್ಟರ್ 1 ಬಾಕ್ಸ್ ಆಫೀಸ್ ನಾಗಾಲೋಟ!
ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ (Kantara Chapter 1) ಬ್ಲಾಕ್ ಬಸ್ಟರ್ ಹಿಟ್ ಆಗಿರೋದು ಗೊತ್ತೇ ಇದೆ. ಸದ್ಯಕ್ಕೆ ಈ ಸಿನಿಮಾ ಜಗತ್ತಿನಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದ್ದು, 717.50 ಕೋಟಿ ರೂ. ಗಳಿಕೆ ಮಾಡಿದೆ ಎಂದು ಘೋಷಿಸಲಾಗಿದೆ. ಭಾರತದಲ್ಲಿ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು ಈಗಲೂ ಸಿನಿಮಾ ಕ್ರೇಜ್ ಹಾಗೇ ಇದೆ. ಸಿನಿಮಾ ಮುಂದೆ ಹೊಚ್ಚಹೊಸ ದಾಖಲೆ ಮಾಡುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ.
ಸದ್ಯದಲ್ಲೇ ರೂ. 1000 ಕೋಟಿ ದಾಟುವ ನಿರೀಕ್ಷೆ
ಈ ಬಾರಿ ವೀಕೆಂಡ್ ಹಾಗೂ ದೀಪಾವಳಿ ಹಬ್ಬ ಜೊತೆಯಾಗಿ ಬಂದಿದ್ದು ಸಿನಿಮಾ ಗಳಿಕೆಯು ಶೀಘ್ರದಲ್ಲೇ 1000 ಕೋಟಿ ದಾಟುವ ನಿರೀಕ್ಷೆ ಇದೆ. ಸಿನಿಮಾ ಸಕ್ಸಸ್ ಓಟ ಇದೇ ರೀತಿ ಮುಂದುವರಿದರೆ ಇದು ‘ಕೆಜಿಎಫ್ 2’ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ಸಿನಿಮಾ ವಿಶ್ಲೇಷಕರು ಹೇಳಿದ್ದಾರೆ.
ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ರಿಷಬ್ ಶೆಟ್ಟಿ!
ಕಾಂತಾರ ಸೃಷ್ಟಿಕರ್ತ, ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕೌನ್ ಬನೇಗಾ ಕರೋಡ್‌ಪತಿ' ಶೋದಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾಗಿಯಾಗಿದ್ದರು. ಎಂದಿನಂತೆ ರಿಷಬ್ ಶೆಟ್ಟಿ ಅವರು ಅಲ್ಲೂ ಕೂಡ ಲುಂಗಿ-ಶರ್ಟ್ ಧರಿಸಿ ಹೋಗಿದ್ದಾರೆ. ಅಲ್ಲಿ ಅವರು ಶೋಗೆ ಎಂಟ್ರಿಕೊಟ್ಟ ತಕ್ಷಣ ಅಮಿತಾಭ್ ಅವರು ಅದನ್ನು ಗಮನಿಸಿದ್ದಾರೆ. ಅದನ್ನು ನೋಡಿ ನಟ, ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರು 'ನಿಮ್ಮ ಲುಂಗಿ ಉಡುವ ಕಲೆಗೆ ನಾನು ಸಂಪೂರ್ಣವಾಗಿ ಮರುಳಾಗಿದ್ದೇನೆ' ಎಂದಿದ್ದಾರೆ. ಈ ವೇಳೆ ರಿಷಬ್ ಅವರು ಅಮಿತಾಭ್ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ
ಅಮಿತಾಭ್ ಅವರು 'ರಿಷಬ್ ಅವರೇ, ನೀವು ಉಟ್ಟಿರುವಂಥೇ ನಾನೂ ಕೂಡ ಲುಂಗಿಯನ್ನು ಧರಿಸಲು ಬಯಸುತ್ತೇನೆ. ಆದರೆ, ಅದನ್ನು ಧರಿಸುವುದಕ್ಕೂ ಮುನ್ನ ಅದನ್ನು ಹೇಗೆ ಉಡುವುದು ಎಂಬುದನ್ನು ಸರಿಯಾಗಿ ಕಲಿಯಬೇಕು. ಇಲ್ಲದೇ ಹೋದರೆ ಕ್ಯಾಮೆರಾ ಎದುರೇ ಏನಾದರೂ ಕಳಚಿ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ’ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಡಿವೈನ್ ಸ್ಟಾರ್ ಅವರು ಎಂದಿನಂತೆ ಸಿಂಪಲ್ ಆಗಿ ನಕ್ಕಿದ್ದಾರೆ, ಬಾಲಿವುಡ್‌ನ ದೊಡ್ಡ ಸ್ಟಾರ್ ಅಮಿತಾಭ್ ಎದುರು ವಿನಯವಂತಿಕೆ ಮೆರೆದಿದ್ದಾರೆ.


