ಜೇಮ್ಸ್ ಕ್ಯಾಮರೂನ್ ತಮಗೆ 'ಅವತಾರ್' (Avatar 3) ಚಿತ್ರಕ್ಕೆ ಆಫರ್ ನೀಡಿದ್ದರೆಂದು ನಟ ಗೋವಿಂದ ಹೇಳಿದ್ದರು. ಇದೀಗ 'ಅವತಾರ್'ನ ನೀಲಿ ಅವತಾರದಲ್ಲಿ ಗೋವಿಂದ ನಟಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಿದು ಕಥೆ?
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನು ನೋಡಿ ಬಾಲಿವುಡ್ ನಟ ಗೋವಿಂದ ಫ್ಯಾನ್ಸ್ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಆ ವಿಡಿಯೋದಲ್ಲಿ ಗೋವಿಂದ ʼಅವತಾರ್ʼ ಮೂವಿಯ ಪಾತ್ರಗಳಾದ ನಾವಿ (Na’vi) ಅವತಾರದಲ್ಲಿ, ಬಣ್ಣ ಬಣ್ಣದ ಮಿಂಚುವ ಇಂಡಿಯನ್ ಉಡುಪಿನಲ್ಲಿ, ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಡೇವಿಡ್ ಧವನ್ ನಿರ್ದೇಶನದ 1997ರ ರೊಮ್ಯಾಂಟಿಕ್ ಕಾಮಿಡಿ ದೀವಾನಾ ಮಸ್ತಾನಾ ಸಿನಿಮಾದಲ್ಲಿನ ತಮ್ಮ ಫೇಮಸ್ ಡೈಲಾಗ್ “ಹಟಾ ಸಾವನ್ ಕಿ ಘಟಾ” ಅನ್ನು ಲಿಪ್‌ಸಿಂಕ್ ಮಾಡುತ್ತಿರುವಂತೆ ಕಾಣುತ್ತದೆ.
ಆ ವಿಡಿಯೋಗೆ ಹಾಕಿರುವ ಕ್ಯಾಪ್ಷನ್ ಏನು ಹೇಳ್ತಿದೆ ಅಂದ್ರೆ – ಇದು ಜೇಮ್ಸ್ ಕ್ಯಾಮೆರೂನ್ ಅವರ ಹಾಲಿವುಡ್ ಮೆಗಾ ಫ್ಯಾಂಟಸಿ ಸಿನಿಮಾ Avatar: Fire and Ash ನಲ್ಲಿ ಗೋವಿಂದರ ಕ್ಯಾಮಿಯೋ ರೋಲ್ ಅಂತ. ಇದು ನಿಜಾನಾ?
ಗೋವಿಂದನೇ ಹೇಳಿಕೊಂಡ ಕಥೆ
ಹಾಗಾದ್ರೆ ಗೋವಿಂದರ ‘ಕ್ಯಾಮಿಯೋ’ ಹಿಂದಿನ ಸತ್ಯ ಏನು? ಗೋವಿಂದ ಫ್ಯಾನ್ಸ್‌ಗೆ ಸ್ವಲ್ಪ ನಿರಾಸೆ ಆಗಬಹುದು. ಆದರೆ ನಿಜ ಹೇಳ್ಬೇಕಂದ್ರೆ Avatar: Fire and Ash ನಲ್ಲಿ ಗೋವಿಂದ ಕಾಣಿಸಿಕೊಳ್ಳೋದೇ ಇಲ್ಲ. ಈ ವಿಡಿಯೋ ಪೂರ್ತಿ AI (ಕೃತಕ ಬುದ್ಧಿಮತ್ತೆ) ಬಳಸಿ ಮಾಡಿರುವ ಫೇಕ್ ಕ್ಲಿಪ್. ವಿಡಿಯೋದಲ್ಲಿ ಗೋವಿಂದ ಮುಂಬೈ ಸ್ಟೈಲ್ ಲೋಕಲ್ ಭಾಷೆಯಲ್ಲಿ ಮಾತನಾಡುವಂತೆ, ಹಿಂದೆ ಜೇಕ್ ಸಲ್ಲಿ (ಸ್ಯಾಮ್ ವರ್ತಿಂಗ್ಟನ್) ಮತ್ತು ಅವರ ಕುಟುಂಬ ರಿಯಾಕ್ಟ್ ಮಾಡುವಂತೆ ತೋರಿಸಲಾಗಿದೆ. ಅದ್ರೆ ಅಂಥ ಸೀನ್ Avatar: Fire and Ash ಸಿನಿಮಾದಲ್ಲಿ ಇಲ್ಲವೇ ಇಲ್ಲ.
ಹಾಗಾದ್ರೆ ಈ ಕಟ್ಟುಕಥೆ ಎಲ್ಲಿಂದ ಬಂತು? ಈ AI ವಿಡಿಯೋಗೆ ಕಾರಣವೇ ಗೋವಿಂದ ಹಿಂದಿನಿಂದಲೂ ಮಾಡ್ತಾ ಬಂದಿದ್ದ ಒಂದು ಹೇಳಿಕೆ. 2009ರಲ್ಲಿ ರಿಲೀಸ್ ಆದ ಮೊದಲ Avatar ಸಿನಿಮಾಗೆ ಜೇಮ್ಸ್ ಕ್ಯಾಮೆರೂನ್ ತಮಗೆ ಆಫರ್ ಕೊಟ್ಟಿದ್ರು ಅಂತ ಗೋವಿಂದ ಹಲವು ವರ್ಷಗಳಿಂದ ಹೇಳ್ತಾ ಬಂದಿದ್ದಾರೆ. ತಾನು ಕ್ಯಾಮೆರೂನ್‌ರನ್ನು ಭೇಟಿಯಾಗಿದ್ದೆ. ₹18 ಕೋಟಿ ಆಫರ್ ಕೂಡ ಬಂತು. ಆದರೆ 410 ದಿನ ಶೂಟಿಂಗ್ ಮಾಡಬೇಕು, ದೇಹವನ್ನೆಲ್ಲಾ ನೀಲಿ ಬಣ್ಣದಲ್ಲಿ ಪೇಂಟ್ ಮಾಡಿಕೊಳ್ಳಬೇಕು ಅನ್ನೋದಕ್ಕೆ ಒಪ್ಪಲಿಲ್ಲ ಅಂತ ಗೋವಿಂದರ ಹೇಳಿಕೆ.
ಈ ವರ್ಷದ ಆರಂಭದಲ್ಲಿ Bheeshm International ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಗೋವಿಂದ ಹೀಗೆ ಹೇಳಿದ್ರು- “ಅಮೆರಿಕಾದಲ್ಲಿ ಒಬ್ಬ ಸರ್ದಾರ್‌ಜಿಯನ್ನ ಭೇಟಿ ಆಗಿದ್ದೆ. ಅವರಿಗೆ ನಾನು ಕೊಟ್ಟ ಬಿಸಿನೆಸ್ ಐಡಿಯಾ ಕೆಲಸ ಮಾಡಿತ್ತು. ನಂತರ ಅವರೇ ಜೇಮ್ಸ್ ಕ್ಯಾಮೆರೂನ್‌ರನ್ನು ಪರಿಚಯಿಸಿದ. ಅವರು ಅವತಾರ್ ಸಿನಿಮಾದಲ್ಲಿ ಪಾತ್ರ ಮಾಡಲು ಹೇಳಿದರು. ಹೀರೋ ಹ್ಯಾಂಡಿಕ್ಯಾಪ್ಡ್ ಅಂತ ಹೇಳಿದ್ರು. ₹18 ಕೋಟಿ ಕೊಡ್ತೀವಿ, 410 ದಿನ ಶೂಟಿಂಗ್. ಮೈಗೆ ನೀಲಿ ಪೇಂಟ್ ಮಾಡಿಕೊಳ್ಳಬೇಕು ಅಂದ್ರು. ಮೈಗೆ ಪೇಂಟ್ ಮಾಡಿಕೊಂಡರೆ ನಾನು ಆಸ್ಪತ್ರೆ ಸೇರಬೇಕಾಗುತ್ತೆ. ನಾನು ಈ ಸಿನಿಮಾ ಮಾಡಲ್ಲ ಅಂತ ಹೇಳಿದೆ,” ಅಂತ ಹೇಳಿದ್ದ ಗೋವಿಂದ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾಕ್ಕೆ Avatar ಅಂತ ಟೈಟಲ್ ಕೂಡ ತಾನೇ ಸೂಚಿಸಿದ್ದೆ ಅಂತ ಗೋವಿಂದ ಹೇಳಿಕೊಂಡಿದ್ದಾರೆ. ಆದರೆ ಆ ನಿರ್ಧಾರಕ್ಕೆ ಈಗ ಪಶ್ಚಾತ್ತಾಪ ಇದೆ ಅಂತ ಕೂಡ ಹೇಳಿದ್ದಾರೆ. ಏಕೆಂದರೆ Avatar ಸಿನಿಮಾ ವಿಶ್ವದ ದೊಡ್ಡ ಹಿಟ್‌ಗಳಲ್ಲಿ ಒಂದಾಗಿ, $2.92 ಬಿಲಿಯನ್ ಕಲೆಕ್ಷನ್ ಮಾಡಿತ್ತು. ಅದರ ಸೀಕ್ವೆಲ್ Avatar: The Way of Water (2022) ಕೂಡ $2.3 ಬಿಲಿಯನ್ ಗಳಿಸಿತ್ತು. ಈಗಿನ ಮೂರನೇ ಭಾಗ Avatar: Fire and Ash ಓಪನಿಂಗ್ ವೀಕೆಂಡ್‌ನಲ್ಲೇ $347 ಮಿಲಿಯನ್ ಕಲೆಕ್ಷನ್ ಮಾಡಿದೆ.
ಆದ್ರೆ ಗೋವಿಂದನ ಜೊತೆ ವರ್ಷಗಳ ಕಾಲ ಕೆಲಸ ಮಾಡಿದ ನಿರ್ಮಾಪಕ ಪಹ್ಲಾಜ್ ನಿಹಲಾನಿ ಈ ಎಲ್ಲಾ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ. ಅವರು ಹೇಳೋದೇನೆಂದರೆ, ಗೋವಿಂದ ಹಾಲಿವುಡ್ Avatar ಅಲ್ಲ, ತಾವಿಬ್ಬರು ಸೇರಿ ಮಾಡಿದ್ದ ಬಾಲಿವುಡ್ ಸ್ಪೋರ್ಟ್ಸ್ ಡ್ರಾಮಾ Avatar ಬಗ್ಗೆ ಮಾತಾಡ್ತಿರಬಹುದು. ಆ ಸಿನಿಮಾ 40% ಶೂಟ್ ಆದ್ಮೇಲೆ ಗೋವಿಂದನ ತಗಾದೆಯಿಂದಲೇ ಬಾಕಿ ಆಗಿತ್ತು.
“Avatar ಅನ್ನೋ ಟೈಟಲ್ ನೋಡಿ ಅವನ ತಲೆಯಲ್ಲಿ ಏನೋ ಕನ್‌ಫ್ಯೂಷನ್ ಆಗಿದೆ. ನಂತರ ಹಾಲಿವುಡ್ Avatar ಮಾಡ್ತಿದ್ದೆ ಅಂತ ಹೇಳ್ಕೊಂಡು ತಿರುಗಾಡ್ತಿದ್ದ. ಅವನ ತಲೆಯ್ಲಿರೋ ಡಿಸ್ಕ್ ಗಿರಕೀ ಹೊಡೆದು, ಭಾಷೆ ಹಿಂದಿಯಿಂದ ಇಂಗ್ಲಿಷ್‌ಗೆ ಶಿಫ್ಟ್ ಆಯ್ತು,” ಅಂತ ನಿಹಲಾನಿ 2024ರಲ್ಲಿ ಒಂದು ಇಂಟರ್‌ವ್ಯೂನಲ್ಲಿ ತಮಾಷೆ ಮಾಡಿದ್ರು.

