ನಿರ್ಮಾಪಕಿ ಪುಷ್ಪ ಮತ್ತು ದೇವರಾಜ್ ನಡುವಿನ ವಿವಾದ ತೀವ್ರಗೊಂಡಿದೆ. ಕೋರ್ಟ್ ಆದೇಶದ ಮೇಲೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎನ್ನಲಾಗಿದ್ದು, ಅದೇ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವುದಾಗಿ ಪುಷ್ಪ ಅವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಿದ್ದಾರೆ.

ಹಾಸನ: ನಗರದಲ್ಲಿ ಸೈಟ್ ಮಾಲೀಕತ್ವ ವಿಚಾರವಾಗಿ ಉಂಟಾದ ಜಟಾಪಟಿ ಪ್ರಕರಣ ಮತ್ತಷ್ಟು ತೀವ್ರಗೊಂಡಿದ್ದು, ನಿರ್ಮಾಪಕಿ ಪುಷ್ಪ ಅವರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಸವಿಸ್ತಾರ ದೂರು ಸಲ್ಲಿಸಿದ್ದಾರೆ. ವಿವಾದಿತ ನಿವೇಶನ ತನ್ನದೇ ಎಂದು ದೇವರಾಜ್ ಎಂಬುವರು 2025ರ ಏ.16ರ ಕೋರ್ಟ್‌ ಆದೇಶದ ಆಧಾರದ ಮೇಲೆ ಕಾಂಪೌಂಡ್ ತೆರವುಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಅದೇ ಆದೇಶಕ್ಕೆ ಫೆ.11ರಂದು ಕೋರ್ಟ್‌ ತಡೆ ನೀಡಿರುವುದಾಗಿ ಪುಷ್ಪ ಸ್ಪಷ್ಟಪಡಿಸಿದ್ದಾರೆ. 

ತಡೆ ಆದೇಶವಿದ್ದರೂ ಏಕಾಏಕಿ ಕಾಂಪೌಂಡ್ ಒಡೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಗಲಾಟೆಯ ವಿಡಿಯೋ ದೃಶ್ಯಾವಳಿಗಳಿರುವ ಪೆನ್ ಡ್ರೈವ್, ಕೋರ್ಟ್‌ ಆದೇಶ ಪ್ರತಿ, ಸೈಟ್ ಖರೀದಿ ಕ್ರಯಪತ್ರ, ದಾಖಲಾತಿಯನ್ನು ಎಸ್ಪಿಗೆ ಸಲ್ಲಿಸಲಾಗಿದೆ ಎಂದು ಪುಷ್ಪ ಮಾಧ್ಯಮಗಳಿಗೆ ತಿಳಿಸಿದರು.

ಮೊದಲ ಹಂತದ ಮುನ್ನಡೆ

ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿರುವ ನಿವೇಶನ ಒತ್ತುವರಿ ಪ್ರಕರಣ ಸಂಬಂಧ ಸಿನಿಮಾದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ಗೆ ಮೊದಲ ಹಂತದ ಮುನ್ನಡೆ ಸಿಕ್ಕಿದೆ. 2025ರ ಏಪ್ರಿಲ್ 16ರಂದು ಇಲ್ಲಿನ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆ ಕೋರಿ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ತಮ್ಮನ್ನು ಕಕ್ಷಿದಾರರಾಗಿ ಪರಿಗಣಿಸದೆ ಆದೇಶ ನೀಡಲಾಗಿದೆ ಎಂದು ಆಕ್ಷೇಪಿಸಿದ್ದರು. ಅವರ ಮೇಲ್ಮನವಿ ಅರ್ಜಿ ಪರಿಗಣಿಸಿದ ನ್ಯಾಯಾಲಯ, ಕೋರ್ಟ್ ಮೂಲ ದಾವೆಯ ಆದೇಶದ ಅನುಷ್ಠಾನಕ್ಕೆ ತಡೆ ನೀಡಿದೆ. ಪ್ರಸ್ತುತ ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಆಸ್ತಿಯ ಜಾರಿ ಅಥವಾ ಅನುಷ್ಠಾನಕ್ಕೆ ಸಂಪೂರ್ಣ ತಡೆ ನೀಡಲಾಗಿದೆ.

ಜೊತೆಗೆ, ಶೆಡ್ಯೂಲ್ ಪ್ರಾಪರ್ಟಿಯನ್ನು ಪರಭಾರೆ ಮಾಡುವುದು ಅಥವಾ ಮೂಲ ಸ್ವರೂಪ ಬದಲಾವಣೆ ಮಾಡುವುದಕ್ಕೂ ನಿರ್ಬಂಧ ಹೇರಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.18ಕ್ಕೆ ಮುಂದೂಡಲಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುಷ್ಪಾ, ನ್ಯಾಯಾಲಯ ನಮಗೂ ವಾದಿಸಲು ಅವಕಾಶ ನೀಡಿದೆ. ಜಾಗ ನನ್ನದೋ ಅಥವಾ ದೇವರಾಜು ಅವರದ್ದೋ ಎಂಬುದು ಪರಿಶೀಲನೆಯ ಬಳಿಕ ಸ್ಪಷ್ಟವಾಗಲಿದೆ. ನನ್ನ ಹೆಸರಿನಲ್ಲಿ ಕಾನೂನು ಪ್ರಕಾರ ಸರ್ಕಾರಕ್ಕೆ ಹಣ ಪಾವತಿಸಿ ನಿವೇಶನ ಪಡೆದಿದ್ದೇನೆ. ಏಕಾಏಕಿ ಜೆಸಿಬಿ ತಂದು ಕಾಂಪೌಂಡ್ ತೆರವುಗೊಳಿಸಿದ್ದು, ಮನೆಗೂ ಹಾನಿ ಉಂಟಾಗಿದೆ. ಸತ್ಯ ಹೊರಬರುವ ತನಕ ನಾನು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಏನ್‌ ರೌಡಿಸಂ ಮಾಡ್ತೀಯಾ..' ಬೋರ್ಡ್‌ ಕಿತ್ತು ಹಾಕಿ ಮತ್ತೆ ಕಂಪೌಂಡ್‌ ಹಾಕಲು ಬಂದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌!

ಏನಿದು ಪ್ರಕರಣ?

ಇವರ ಮನೆಯ ಪಕ್ಕದ ನಿವೇಶನದ ಮಾಲೀಕರು ಎಂದು ಹೇಳಲಾಗಿರುವ ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ಪುಷ್ಪಾ ಅರುಣ್ ಕುಮಾರ್ ಹಾಕಿದ್ದ ಕಾಂಪೌಂಡ್ ತೆರವುಗೊಳಿಸಿದ್ದರು. ಈ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

ಇದನ್ನೂ ಓದಿ: 'ಪೇಮೆಂಟ್‌ ಬಂದಿಲ್ಲ, ಪುಷ್ಪ ಅರುಣ್‌ಕುಮಾರ್‌ಗೆ ಹೇಳಿ ಪ್ಲೇಸ್':‌ ಕೊತ್ತಲವಾಡಿ ಸಿನಿಮಾ ನಟ ಮಹೇಶ್‌ ಗುರು