ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ರಿಲೀಸ್‌ಗೂ ಮುನ್ನವೇ ಲೀಕ್ ಆಗಿದ್ದರ ಬಗ್ಗೆ ನಟಿ ಮಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅದೆಷ್ಟೋ ಜನರ ಕನಸನ್ನು ಮುರಿದಿದೆ ಎಂದು ಅವರು ಹೇಳಿದ್ದಾರೆ.

ನಟ ವಿಜಯ್ ಅವರ ಕೊನೆಯ ವಿಶೇಷ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ 'ಜನ ನಾಯಗನ್'. ಈ ಸಿನಿಮಾ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸಿಗದ ಕಾರಣ ಚಿತ್ರದ ಬಿಡುಗಡೆ ತಡವಾಯಿತು. ಇದರ ನಡುವೆಯೇ ಇಡೀ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಚಿತ್ರತಂಡಕ್ಕೆ ದೊಡ್ಡ ಆಘಾತ ನೀಡಿತ್ತು. ಈಗ 'ಜನ ನಾಯಗನ್' ಸಿನಿಮಾ ಲೀಕ್ ಆದ ಬಗ್ಗೆ ಚಿತ್ರದ ಪ್ರಮುಖ ಪಾತ್ರಧಾರಿ, ಮಲಯಾಳಿ ನಟಿ ಮಮಿತಾ ಮಾತನಾಡಿದ್ದಾರೆ.

"ಮೊದಲು ನನಗಿದನ್ನು ನಂಬೋಕೆ ಆಗ್ಲಿಲ್ಲ. ಆಮೇಲೆ ಇದರ ಗಂಭೀರತೆ ನನಗೆ ಅರ್ಥವಾಯ್ತು. ಇದು ಎಷ್ಟೋ ಜನರ ಕನಸನ್ನು ನುಚ್ಚುನೂರು ಮಾಡಿದೆ," ಎಂದು ಮಮಿತಾ ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಲೀಕ್ ಮಾಡಿದ ಪ್ರಕರಣದಲ್ಲಿ, ಪೊಲೀಸರು ಈಗಾಗಲೇ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಫ್ರೀಲ್ಯಾನ್ಸ್ ಎಡಿಟರ್ ಒಬ್ಬ ಈ ಕೇಸ್‌ನ ಮುಖ್ಯ ಆರೋಪಿ. ಚೆನ್ನೈ ಪೊಲೀಸರ ಸೈಬರ್ ಕ್ರೈಂ ವಿಭಾಗ ಈ ಆರೋಪಿಗಳನ್ನು ಅರೆಸ್ಟ್ ಮಾಡಿದೆ.

ರೀಲ್ ಪಡೆದು ಕಾಪಿ

ಬೇರೊಂದು ಸಿನಿಮಾದ ಕೆಲಸಕ್ಕಾಗಿ ಸ್ಟುಡಿಯೋಗೆ ಬಂದಿದ್ದ ಈ ಫ್ರೀಲ್ಯಾನ್ಸ್ ಎಡಿಟರ್, ಅಲ್ಲಿಯೇ ಅಕ್ರಮವಾಗಿ 'ಜನ ನಾಯಗನ್' ಸಿನಿಮಾದ ರೀಲ್ ಪಡೆದು ಕಾಪಿ ಮಾಡಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಹಿಂದೆ ಸಿನಿಮಾದ ದೃಶ್ಯಗಳನ್ನು ಹಂಚಿಕೊಂಡಿದ್ದ ಆರು ಜನರನ್ನು ಸಹ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 9ಕ್ಕೆ ಏರಿದೆ.

ಇದಕ್ಕೂ ಮೊದಲು, 'ಜನ ನಾಯಗನ್' ಸಿನಿಮಾದ ಲೀಕ್ ಆದ ಪ್ರತಿಯನ್ನು ಸ್ಥಳೀಯ ಕೇಬಲ್ ಟಿವಿಯಲ್ಲಿ ಪ್ರಸಾರ ಮಾಡಿದ್ದಕ್ಕೆ ಕೋಯಂಬತ್ತೂರಿನ ಆಪರೇಟರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿತ್ತು. ಟಿವಿಕೆ ಕಾರ್ಯಕರ್ತರು ನೀಡಿದ ದೂರಿನ ಅನ್ವಯ ಎಸ್. ಪಳನಿಸಾಮಿ ಎಂಬುವವರನ್ನು ಬಂಧಿಸಲಾಗಿತ್ತು. ಅವರಿಂದ 4 ಹಾರ್ಡ್ ಡಿಸ್ಕ್ ಮತ್ತು ಒಂದು ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.