ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. ಮೇ 20ರಂದು ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಮಾಸ್ ಹೀರೋ ಜೂ.ನ್‌ಟಿಆರ್ ಹಾಗೂ 'ಕೆಜಿಎಫ್', 'ಸಲಾರ್'ನಂತಹ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಹೊಸ ಸಿನಿಮಾಕ್ಕೆ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ಚಿತ್ರ 2027ರ ಜೂನ್ 11ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಇದೇ ಮೇ 20ರಂದು ರಿಲೀಸ್ ಆಗಲಿದೆ. ಸದ್ಯಕ್ಕೆ 'ಎನ್‌ಟಿಆರ್-ನೀಲ್' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದ್ದು, ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಹೀಗಾಗಿ, ಅಭಿಮಾನಿಗಳು ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ಜೂ.ಎನ್‌ಟಿಆರ್ ಅವರನ್ನು ಒಂದು ವಿಭಿನ್ನ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ವಿಶಿಷ್ಟ ಮಾಸ್ ಶೈಲಿ

ಭರ್ಜರಿ ಆ್ಯಕ್ಷನ್ ಹಾಗೂ ಕುತೂಹಲಕಾರಿ ಕಥೆಯ ಒಂದು ರೋಚಕ ಕಾಂಬಿನೇಷನ್ ಅನ್ನು 'ಎನ್‌ಟಿಆರ್-ನೀಲ್' ಸಿನಿಮಾ ಪ್ರೇಕ್ಷಕರಿಗೆ ನೀಡಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಬ್ಲಾಕ್‌ಬಸ್ಟರ್ ಹಿಟ್‌ಗಳಿಗೆ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್, ತಮ್ಮ ವಿಶಿಷ್ಟ ಮಾಸ್ ಶೈಲಿಯ ಮೂಲಕ ಜೂ.ಎನ್‌ಟಿಆರ್ ಅವರ ಆನ್-ಸ್ಕ್ರೀನ್ ವ್ಯಕ್ತಿತ್ವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್‌ನಂತಹ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿವೆ. ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿ ಕೃಷ್ಣ ಕೊಸರಾಜು ಅವರು ನಿರ್ಮಾಪಕರಾಗಿದ್ದಾರೆ. ಭುವನ್ ಗೌಡ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದರೆ, ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಲಪತಿ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.