ರೀಟಾ ಭಟ್ಟಾಚಾರ್ಯ ಸಂದರ್ಶನಗಳಲ್ಲಿ ಕುಮಾರ್ ಸಾನು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. "ಕುಮಾರ್ ಸಾನು ನನ್ನನ್ನು ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಮನೆ ಬಿಟ್ಟು ಓಡಿಹೋದ ನಂತರ ನಮಗೆ ಊಟ, ಅಗತ್ಯ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದ್ದರು" ಎಂದು ಅವರು ಕಣ್ಣೀರಿಟ್ಟಿದ್ದರು.
ಮಾಜಿ ಗಂಡ-ಹೆಂಡತಿಯ ಕೆಸರೆರಚಾಟ!
ಬಾಲಿವುಡ್ನ ಮಧುರ ಕಂಠದ ಗಾಯಕ, ಎವರ್ಗ್ರೀನ್ ಹಾಡುಗಳ ಸರದಾರ ಕುಮಾರ್ ಸಾನು (Kumar Sanu) ಅವರ ಹೆಸರು ಈಗ ಸಂಗೀತ ಲೋಕಕ್ಕಿಂತ ಹೆಚ್ಚಾಗಿ, ಕಾನೂನು ಸಮರದ ಕಾರಣಕ್ಕೆ ಸುದ್ದಿಯಲ್ಲಿದೆ. ಅವರ ವೈಯಕ್ತಿಕ ಜೀವನದ ಸೂಕ್ಷ್ಮ ವಿಷಯಗಳು ಸಾರ್ವಜನಿಕವಾಗಿ ಬಯಲಾಗಿವೆ. ಸದ್ಯಕ್ಕೆ ಕುಮಾರ್ ಸಾನು ಅವರು ತಮ್ಮ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ (Rita Bhattacharya) ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಇದು ಬಿ-ಟೌನ್ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ರೀಟಾ ಭಟ್ಟಾಚಾರ್ಯ ಅವರು ಕೆಲವು ಮಾಧ್ಯಮ ಸಂದರ್ಶನಗಳಲ್ಲಿ ಕುಮಾರ್ ಸಾನು ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. "ಕುಮಾರ್ ಸಾನು ನನ್ನನ್ನು ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಮನೆ ಬಿಟ್ಟು ಓಡಿಹೋದ ನಂತರ ನಮಗೆ ಊಟ, ಅಗತ್ಯ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದ್ದರು" ಎಂದು ಅವರು ಕಣ್ಣೀರಿಟ್ಟಿದ್ದರು. ಈ ಆರೋಪಗಳು ಈಗ ಕಾನೂನು ಹೋರಾಟಕ್ಕೆ ತಿರುಗಿಕೊಂಡಿವೆ.
ಕುಮಾರ್ ಸಾನು ಕಡೆಯಿಂದ ಖಡಕ್ ಉತ್ತರ!
ಈ ಆರೋಪಗಳನ್ನು ಕುಮಾರ್ ಸಾನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅವರ ವಕೀಲರಾದ ಸನಾ ರಯೀಸ್ ಖಾನ್ ಅವರು, ರೀಟಾ ಭಟ್ಟಾಚಾರ್ಯ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಇದು ಮಾನನಷ್ಟ ಉಂಟುಮಾಡುವ ಹೇಳಿಕೆಗಳು ಎಂದು ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. "ಕಳೆದ 40 ವರ್ಷಗಳಿಂದ ಕುಮಾರ್ ಸಾನು ಅವರು ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಸಂತೋಷ ನೀಡಿ, ವಿಶ್ವದಾದ್ಯಂತ ಪ್ರೀತಿ ಮತ್ತು ಗೌರವ ಗಳಿಸಿದ್ದಾರೆ" ಎಂದು ವಕೀಲರು ಹೇಳಿದ್ದಾರೆ.
"ಹಾನಿಕಾರಕ ಸುಳ್ಳುಗಳು ಒಂದು ಕ್ಷಣ ಶಬ್ದ ಮಾಡಬಹುದು, ಆದರೆ ತಲೆಮಾರುಗಳಿಗೆ ಸಂಗೀತ ಮತ್ತು ನೆನಪುಗಳನ್ನು ನೀಡಿರುವ ಕಲಾವಿದನ ಪರಂಪರೆಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ" ಎಂದು ಸನಾ ಖಾನ್ ಖಡಕ್ ಮಾತುಗಳಲ್ಲಿ ತಿಳಿಸಿದ್ದಾರೆ.
ಮಾನಹಾನಿ ಯತ್ನಕ್ಕೆ ತಕ್ಕ ಉತ್ತರ!
ಕುಮಾರ್ ಸಾನು ಅವರ ಘನತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಕಾನೂನು ಮೂಲಕ ಎದುರಿಸುವುದಾಗಿ ವಕೀಲರು ಹೇಳಿದ್ದಾರೆ. "ಅವರ ಘನತೆ, ಪರಂಪರೆ ಮತ್ತು ಕುಟುಂಬದ ಗೌರವವನ್ನು ರಕ್ಷಿಸಲು, ಅವರನ್ನು ಮಾನಹಾನಿ ಮಾಡುವ ದುರುದ್ದೇಶಪೂರಿತ ಪ್ರಯತ್ನಗಳನ್ನು ಕಾನೂನಿನ ಪೂರ್ಣ ಬಲದಿಂದ ಎದುರಿಸುತ್ತೇವೆ.
ಯಾವುದೇ ವ್ಯಕ್ತಿ ಅಥವಾ ಮಾಧ್ಯಮ ವೇದಿಕೆಗೆ ತಂದೆಯ ಗೌರವಕ್ಕೆ ಧಕ್ಕೆ ತರಲು ಅಥವಾ ಸಂವೇದನಾಶೀಲತೆಗಾಗಿ ಕುಟುಂಬದ ಗೌರವವನ್ನು ಮಾರಾಟ ಮಾಡಲು ಹಕ್ಕಿಲ್ಲ" ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ವೈರಲ್ ಭಾಯಾನಿ ಅವರು ತಮ್ಮ ಪ್ಲಾಟ್ಫಾರ್ಮ್ನಿಂದ ಆ ಮಾನಹಾನಿಕರ ವಿಡಿಯೋವನ್ನು ತೆಗೆದುಹಾಕಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ರೀಟಾ ಭಟ್ಟಾಚಾರ್ಯರ ಆರೋಪಗಳೇನು?
ಕೆಲವು ದಿನಗಳ ಹಿಂದೆ ರೀಟಾ ಭಟ್ಟಾಚಾರ್ಯ ಅವರು ಫಿಲ್ಮ್ ವಿಂಡೋಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದರು. ಕುಮಾರ್ ಸಾನು ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ತಾವೇ ಬೆಂಬಲವಾಗಿ ನಿಂತಿದ್ದೆ ಎಂದು ಅವರು ಹೇಳಿಕೊಂಡಿದ್ದರು. ಸಿದ್ಧಾರ್ಥ್ ಕನ್ನನ್ ಅವರಿಗೆ ನೀಡಿದ ಮತ್ತೊಂದು ಸಂದರ್ಶನದಲ್ಲಿ, ಸಾನು ಅವರ ಸಹೋದರಿಯೇ ತಮ್ಮ ಮದುವೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದ್ದು ಎಂದು ಆರೋಪಿಸಿದ್ದರು.
"ಅವರು ಮನೆ ಬಿಟ್ಟು ಓಡಿಹೋದರು. ಮೈಕ್ರೋವೇವ್ ಮತ್ತು ಫ್ಯಾನ್ಗಳನ್ನು ಕೂಡ ತೆಗೆದುಕೊಂಡು ಹೋದರು. ಅದಾದ ಮೇಲೆ ಮನೆಗೆ ಹಾಲು ಮತ್ತು ಔಷಧಿಗಳ ವಿತರಣೆಯನ್ನು ನಿಲ್ಲಿಸಿದರು. ಆದರೆ ಅದೃಷ್ಟವಶಾತ್, ಹಾಲು ಮಾರುವವರು ಮತ್ತು ವೈದ್ಯರು ನಮ್ಮನ್ನು ಭೇಟಿ ಮಾಡುವುದನ್ನು ಮುಂದುವರೆಸಿದರು. ಈ ಮನುಷ್ಯ ನನ್ನನ್ನು ಮತ್ತು ನನ್ನ ಮೂವರು ಮಕ್ಕಳನ್ನು ಎಷ್ಟು ಹಿಂಸಿಸಿದ್ದಾನೆಂದು ನಿಮಗೆ ಗೊತ್ತಿಲ್ಲ" ಎಂದು ರೀಟಾ ಅವರು ಆತಂಕ ವ್ಯಕ್ತಪಡಿಸಿದ್ದರು.
ಇಲ್ಲಿಯವರೆಗೆ, ರೀಟಾ ಭಟ್ಟಾಚಾರ್ಯ ಅವರು ಕುಮಾರ್ ಸಾನು ಕಳುಹಿಸಿರುವ ಕಾನೂನು ನೋಟಿಸ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. 1980ರ ದಶಕದಲ್ಲಿ ಕುಮಾರ್ ಸಾನು ಮತ್ತು ರೀಟಾ ಭಟ್ಟಾಚಾರ್ಯ ಮದುವೆಯಾಗಿದ್ದರು. ಆದರೆ 1994 ರಲ್ಲಿ ಅವರ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತು. ಈ ದಂಪತಿಗೆ ಜಿಕೋ, ಜಸ್ಸಿ ಮತ್ತು ಜಾನ್ ಕುಮಾರ್ ಸಾನು ಎಂಬ ಮೂವರು ಮಕ್ಕಳಿದ್ದಾರೆ.
ಸದ್ಯಕ್ಕೆ ಈ ಕಾನೂನು ಸಮರ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕು. ಕುಮಾರ್ ಸಾನು ಅವರ ಅಭಿಮಾನಿಗಳು ಮಾತ್ರ ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿದ್ದಾರೆ. ಮುಂದಿವ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.


