1882ರ ಕೇದಾರನಾಥ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ, ಸನಾತನ ಹಿರಿಮೆಗೆ ಸಾಟಿ ಎಲ್ಲಿ? ಬರೋಬ್ಬರಿ 144 ವರ್ಷ ಹಿಂದೆ ತೆಗೆದ ಫೋಟೋ ಇದು. ರಸ್ತೆ, ರೈಲು, ಹೆಲಿಕಾಪ್ಟರ್ ಇಲ್ಲದ ಕಾಲ. ಇದರ ನಡುವೆ ಯಾತ್ರೆ ನಿರಂತರವಾಗಿತ್ತು
ರುದ್ರಪ್ರಯಾಗ (ಏ.27) ಕೇದಾರನಾಥ ಯಾತ್ರೆ 2026 ಆರಂಭಗೊಂಡಿದೆ. ಶಿವನ ಕ್ಷೇತ್ರದ ಅತ್ಯಂತ ಪವಿತ್ರ ಯಾತ್ರೆ ಆರಂಭಗೊಂಡಿದ್ದು, ಭಕ್ತರು ಈ ಬಾರಿಯೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ಶಿವನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಕೇದಾರನಾಥ ದೇವಸ್ಥಾನ ಸನಾತನ ಧರ್ಮದ ಅತ್ಯಂತ ಪುರಾತನ ಭಕ್ತಿ ಕೇಂದ್ರ. ಇದೀಗ ಕೇದಾರನಾಥ ಯಾತ್ರೆ ಸಂದರ್ಭದಲ್ಲಿ ಉದ್ಯಮಿ ಆನಂದ್ ಮಹೀಂದ್ರ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಬರೋಬ್ಬರಿ 144 ವರ್ಷಗಳ ಹಿಂದೆ ತೆಗೆದ ಕೇದರಾನಾಥ ದೇವಸ್ಥಾನದ ಫೋಟೋ ಇದು.
ಆನಂದ್ ಮಹೀಂದ್ರ 1882ರಲ್ಲಿ ತೆಗೆದ ಕೇದಾರನಾಥ ಧಾಮದ ಫೋಟೋ ಹಂಚಿಕೊಂಡು ಸನಾತನ ಧರ್ಮದ ಭಕ್ತಿ ಹಾಗೂ ದೇವರ ದರ್ಶನದ ಪರಂಪರೆ ಕುರಿತು ಹೇಳಿದ್ದಾರೆ. ಈ ವೇಳೆ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇದು ಹಲವು ಅಚ್ಚರಿಗೆ ಕಾರಣವಾಗಿದೆ.
ಆನಂದ್ ಮಹೀಂದ್ರ ಹೇಳಿದ್ದೇನು
ಕೇದಾರನಾಥ ಧಾಮ ಅಂದು ಇಂದು ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. ಪವಿತ್ರ ಕೇದಾರನಾಥ ಧಾಮದ ಅಥ್ಯಂತ ಹಳೆಯ ಫೋಟೋಗಳಲ್ಲಿ ಇದು ಒಂದು. ಇದನ್ನು 1882ರಲ್ಲಿ ತೆಗೆಯಲಾಗಿದೆ ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ. ಈ ಫೋಟೋ ನೋಡುತ್ತಿದ್ದರೆ, ಕಣ್ಣು ಕದಲುತ್ತಿಲ್ಲ, ಕೇದಾರನಾಥನ ಮೇಲೆ ಕಣ್ಣು ನೆಟ್ಟಿದೆ. 144 ವರ್ಷಗಳ ಹಿಂದೆ ಅಲ್ಲಿ ರಸ್ತೆಗಳು ಇರಲಿಲ್ಲ, ರೈಲು ಮಾರ್ಗವಿಲ್ಲ, ಹೆಲಿಕಾಪ್ಟರ್ ಇರಲಿಲ್ಲ. ಆದರೆ ಹಿಮಾಲಯದ ತಪ್ಪಲಿನಲ್ಲಿ ಶಾಂತವಾಗಿ ನೆಲೆಸಿದ್ದ ಶಿವನ ವಾಸಸ್ಥಾನ ಕಾಣಿಸುತ್ತಿದೆ. ತೇಜಸ್ಸಿನೊಂದಿಗೆ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಅಂದು ಕೇದಾನಾಥನ ಯಾತ್ರೆ ಒಂದು ತಪ್ಪಸ್ಸು. ಸಮಯ, ಸಹನೆ ಹಾಗೂ ಅಚಲ ನಂಬಿಕೆಯ ಪರೀಕ್ಷೆ ಕೇದಾರನಾಥ ಯಾತ್ರೆಯಾಗಿತ್ತು. ಕೇದಾರನಾಥನ ಬಳಿ ತಲುಪುವ ಮಾರ್ಗ ಕೇವಲ ಪ್ರಯಾಣ ಆಗಿರಲಿಲ್ಲ. ಅದು ತಪಸ್ಸಿನ ಫಲವಾಗಿತ್ತು. ಇಂದು ನಾವು ಕೇದರನಾಥನ ಬಳಿ ತಲುಪುವುದು ಸುಲಭವಾಗಿದೆ. ಇದರಿಂದ ಎಲ್ಲರಿಗೂ ದೈವಿಕ ಅನುಭೂತಿ ಸಿಗುತ್ತಿದೆ. ಆದರೆ ಕೆಲವನ್ನು ನಾವು ಅತ್ಯಂತ ಜೋಪಾನವಾಗಿ ಉಳಿಸಿಕೊಳ್ಳಬೇಕಿದೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ. ನಿಧಾನವಾಗಿ ಹಾಗೂ ಭಕ್ತಿ ಭಾವದಿಂದ ತೆರಳುವ ಯಾತ್ರೆ ಹಾಗೂ ಅದನ್ನು ಅಸ್ವಾದಿಸುವ ಕಲೆ. ಪ್ರಯಾಣ ಕೇವಲ ಗುರಿತಲುಪ ಮಾರ್ಗವಲ್ಲ. ಈ ದಾರಿಯಲ್ಲಿ ನಾವು ಎಂತಹ ವ್ಯಕ್ತಿಗಳಾಗಿ ಬದಲಾಗುತ್ತೇವೆ, ನಮ್ಮೊಳಗಿನ ಚೈತನ್ಯ, ಉತ್ಸಾಹ, ಭಕ್ತಿ, ನಂಬಿಕೆ, ಸತತ ಪ್ರಯತ್ನ, ಪರಿಶ್ರಮ ಎಲ್ಲವೂ ಸೇರಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮೂಲಕ ಹೇಳಿದ್ದಾರೆ.


