ಪ್ಲೇ ಆಫ್ ರೇಸ್‌ನಿಂದ 3 ತಂಡಗಳು ಔಟ್; 4 ಸ್ಥಾನಕ್ಕೆ 7 ತಂಡಗಳ ನಡುವೆ ಬಿಗ್ ಫೈಟ್!
ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಈ ಬಾರಿ ರೋಚಕ ತಿರುವು ಪಡೆದುಕೊಂಡಿದೆ. 11 ಪಂದ್ಯಗಳ ನಂತರವೂ ಯಾವ ತಂಡಕ್ಕೂ ಪ್ಲೇ ಆಫ್ ಇನ್ನೂ ಖಚಿತವಿಲ್ಲ. 7 ತಂಡಗಳಿಗೆ ಅವಕಾಶವಿದ್ದು, ಐದು ತಂಡಗಳು ಟಾಪ್ 2 ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ. ಪ್ರತಿ ತಂಡದ ಪ್ಲೇ ಆಫ್ ಸಾಧ್ಯತೆಗಳೇನು ಎಂದು ನೋಡೋಣ.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್‌ಸಿಬಿ 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ 16 ಪಾಯಿಂಟ್ ಗಳಿಸಿದೆ. ಲೀಗ್ ಹಂತದಲ್ಲಿ ಇನ್ನುಳಿದ 3 ಪಂದ್ಯಗಳಲ್ಲಿ ಒಂದು ಗೆಲುವು ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಅಗತ್ಯ. ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೆಕೆಆರ್ ವಿರುದ್ಧ ಆರ್‌ಸಿಬಿ ಮುಂದಿನ ಪಂದ್ಯಗಳನ್ನು ಆಡಲಿದೆ. ಆರ್‌ಸಿಬಿ ಇನ್ನುಳಿದ ಮೂರು ಪಂದ್ಯಗಳ ಪೈಕಿ ಕನಿಷ್ಠ ಎರಡು ಪಂದ್ಯ ಜಯಿಸಿದರೆ ಅಂಕಪಟ್ಟಿಯಲ್ಲಿ ಟಾಪ್ 2 ಪಟ್ಟಿಯೊಳಗೆ ಸ್ಥಾನ ಪಡೆಯಲಿದೆ.
ಕೆಕೆಆರ್ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯಲಿವೆ. ಲಖನೌ ಮತ್ತು ಕೆಕೆಆರ್ ಕೂಡ ಪ್ಲೇ ಆಫ್‌ಗೆ ತಲುಪಲು ಪ್ರಯತ್ನಿಸುತ್ತಿರುವುದರಿಂದ ಪೈಪೋಟಿ ತೀವ್ರವಾಗಿರುತ್ತದೆ. ಮುಂದಿನ ಮೂರು ಪಂದ್ಯಗಳಲ್ಲಿ ಸೋತರೂ ಆರ್‌ಸಿಬಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯಿದೆ, ಆದರೆ ಇತರ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ.
2. ಪಂಜಾಬ್ ಕಿಂಗ್ಸ್
2014ರ ನಂತರ ಮೊದಲ ಬಾರಿಗೆ ಪ್ಲೇ ಆಫ್‌ಗೆ ತಲುಪಲು ಪಂಜಾಬ್ ಕಿಂಗ್ಸ್ ತಂಡ ಸಜ್ಜಾಗಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ 11 ಪಂದ್ಯಗಳಲ್ಲಿ 15 ಪಾಯಿಂಟ್ ಗಳಿಸಿ ಎರಡನೇ ಸ್ಥಾನದಲ್ಲಿದೆ. ಉಳಿದ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಡೆಲ್ಲಿ, ಮುಂಬೈ ಮತ್ತು ರಾಜಸ್ಥಾನ ವಿರುದ್ಧ ಪಂಜಾಬ್ ಮುಂದಿನ ಪಂದ್ಯಗಳನ್ನು ಆಡಲಿದೆ.
3. ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ಅದ್ಭುತ ಗೆಲುವಿನ ಓಟದಲ್ಲಿದೆ. ಸತತ ಆರು ಗೆಲುವು ಸೇರಿದಂತೆ ಏಳು ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಉತ್ತಮ ನೆಟ್ ರನ್ ರೇಟ್ ಹೊಂದಿರುವ ಮುಂಬೈ ಟಾಪ್ 2 ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ. ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಮುಂದಿನ ಪಂದ್ಯಗಳನ್ನು ಆಡಲಿದೆ.
4. ಗುಜರಾತ್ ಟೈಟಾನ್ಸ್
ಪ್ಲೇ ಆಫ್ ರೇಸ್‌ನಲ್ಲಿ ಅತ್ಯಂತ ಸುರಕ್ಷಿತ ಸ್ಥಾನದಲ್ಲಿರುವ ತಂಡ ಗುಜರಾತ್ ಟೈಟಾನ್ಸ್. ನಾಲ್ಕು ಪಂದ್ಯಗಳು ಬಾಕಿ ಇರುವಾಗಲೇ 14 ಪಾಯಿಂಟ್ ಗಳಿಸಿದೆ. ಮುಂಬೈ, ಡೆಲ್ಲಿ, ಲಖನೌ ಮತ್ತು ಚೆನ್ನೈ ವಿರುದ್ಧ ಗುಜರಾತ್ ಮುಂದಿನ ಪಂದ್ಯಗಳನ್ನು ಆಡಲಿದೆ. ಈ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯ ಗೆದ್ದರೆ ಅನಾಯಾಸವಾಗಿ ಪ್ಲೇ ಆಫ್ ಹಾದಿ ಖಚಿತಪಡಿಸಿಕೊಳ್ಳಲಿದೆ.
5. ಡೆಲ್ಲಿ ಕ್ಯಾಪಿಟಲ್ಸ್
ಸತತ ನಾಲ್ಕು ಗೆಲುವುಗಳೊಂದಿಗೆ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇ ಆಫ್ ಸಾಧ್ಯತೆಗಳು ಈಗ ಅನುಮಾನದಲ್ಲಿದೆ. ಕಳೆದ ಏಳು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಸಾಧಿಸಿದೆ. 11 ಪಂದ್ಯಗಳಲ್ಲಿ 13 ಪಾಯಿಂಟ್ ಗಳಿಸಿರುವ ಡೆಲ್ಲಿಗೆ ಉಳಿದ ಎಲ್ಲಾ ಪಂದ್ಯಗಳು ಮಹತ್ವದ್ದಾಗಿವೆ. ಪಂಜಾಬ್, ಗುಜರಾತ್ ಮತ್ತು ಮುಂಬೈ ವಿರುದ್ಧ ಡೆಲ್ಲಿ ಮುಂದಿನ ಪಂದ್ಯಗಳನ್ನು ಆಡಲಿದೆ.
6. ಕೋಲ್ಕತಾ ನೈಟ್ ರೈಡರ್ಸ್
11 ಪಂದ್ಯಗಳಲ್ಲಿ 11 ಪಾಯಿಂಟ್ ಗಳಿಸಿರುವ ಹಾಲಿ ಚಾಂಪಿಯನ್ ಕೆಕೆಆರ್ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದು. ಚೆನ್ನೈ, ಹೈದರಾಬಾದ್ ಮತ್ತು ಆರ್‌ಸಿಬಿ ವಿರುದ್ಧ ಕೆಕೆಆರ್ ಮುಂದಿನ ಪಂದ್ಯಗಳನ್ನು ಆಡಲಿದೆ.
7. ಲಖನೌ ಸೂಪರ್ ಜೈಂಟ್ಸ್
11 ಪಂದ್ಯಗಳಲ್ಲಿ 10 ಪಾಯಿಂಟ್ ಗಳಿಸಿರುವ ಲಖನೌ ಸೂಪರ್ ಜೈಂಟ್ಸ್‌ಗೂ ಪ್ಲೇ ಆಫ್ ಸಾಧ್ಯತೆಯಿದೆ. ಆದರೆ ಕಳಪೆ ನೆಟ್ ರನ್ ರೇಟ್ ತಂಡಕ್ಕೆ ಹಿನ್ನಡೆಯಾಗಿದೆ. ಆರ್‌ಸಿಬಿ, ಗುಜರಾತ್ ಮತ್ತು ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಮುಂದಿನ ಪಂದ್ಯಗಳನ್ನು ಆಡಲಿದೆ. ಮುಂದಿನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅದೃಷ್ಟ ಕೂಡಾ ಕೈಹಿಡಿದರಷ್ಟೇ ಲಖನೌಗೆ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

