- Home
- Sports
- Cricket
- 2025 ಚಾಂಪಿಯನ್ಸ್ ಟ್ರೋಫಿ ಮಾಸ್ಟರ್ ಮೈಂಡ್ ಗಂಭೀರ್ ಅಲ್ವಾ? ರೋಹಿತ್ ಶರ್ಮಾ ಕನ್ನಡಿಗನನ್ನು ನೆನಪಿಸಿಕೊಂಡಿದ್ದೇಕೆ?
2025 ಚಾಂಪಿಯನ್ಸ್ ಟ್ರೋಫಿ ಮಾಸ್ಟರ್ ಮೈಂಡ್ ಗಂಭೀರ್ ಅಲ್ವಾ? ರೋಹಿತ್ ಶರ್ಮಾ ಕನ್ನಡಿಗನನ್ನು ನೆನಪಿಸಿಕೊಂಡಿದ್ದೇಕೆ?
ಬೆಂಗಳೂರು: ಅಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಹೀಗಿರುವಾಗಲೇ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಹಾಲಿ ಕೋಚ್ ಗಂಭೀರ್ ಅವರನ್ನು ಬಿಟ್ಟು ದ್ರಾವಿಡ್‌ಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಶ್ರೇಯ ನೀಡಿದ್ದಾರೆ.

ಗಂಭೀರ್ ಹೆಸರು ಹೇಳದೇ ದ್ರಾವಿಡ್ ನೆನಪಿಸಿಕೊಂಡ ರೋಹಿತ್
2025ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆಗ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿದ್ದರು.
ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ದ್ರಾವಿಡ್ ಕಾರಣ
ಆದರೆ ಇದೀಗ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಚಾಂಪಿಯನ್ಸ್ ಟ್ರೋಫಿ ಗೆಲುವಿನ ಹಿಂದೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪಾತ್ರವಿದ್ದು, ಅವರು ತಂಡದಲ್ಲಿ ಮೂಡಿಸಿದ್ದ ಪಂದ್ಯ ಗೆಲ್ಲುವ ಮನಸ್ಥಿತಿಯೇ ಕಾರಣ ಎಂದಿದ್ದಾರೆ.
ಯಶಸ್ಸು ತಕ್ಷಣಕ್ಕೆ ಬರುವಂತದ್ದಲ್ಲ
ಯಶಸ್ಸು ಎನ್ನುವುದು ತಕ್ಷಣಕ್ಕೆ ಬರುವಂತಹದ್ದಲ್ಲ. ಸಾಕಷ್ಟು ವರ್ಷಗಳ ಪರಿಶ್ರಮ ಹಾಗೂ ಸ್ಥಿರವಾದ ಪ್ರಯತ್ನಗಳಿಂದಷ್ಟೇ ಒಂದು ತಂಡ ಯಶಸ್ಸು ಗಳಿಸಲು ಸಾಧ್ಯ ಎಂದು ರೋಹಿತ್ ಶರ್ಮಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವನ್ನು ವಿಶ್ಲೇಷಿಸಿದ್ದಾರೆ.
2023ರ ಬಳಿಕ ಗೇಮ್ ಪ್ಲಾನ್ ಬದಲಿಸಿದ ದ್ರಾವಿಡ್-ರೋಹಿತ್ ಜೋಡಿ
ಭಾರತ ತಂಡವು ಕಳೆದೊಂದು ದಶಕದಿಂದ ಐಸಿಸಿ ಟೂರ್ನಿಗಳಲ್ಲಿ ನಾಕೌಟ್‌ನಲ್ಲಿ ಹಾಗೂ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುತ್ತಾ ಬಂದಿತ್ತು. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅನುಭವಿಸಿದ ಸೋಲಿನ ಬಳಿಕ, ಭಾರತ ತಂಡವು ಕನ್ನಡಿಗ ದ್ರಾವಿಡ್ ಮಾರ್ಗದರ್ಶನದಲ್ಲಿ ತನ್ನ ಗೆಲುವಿನ ಮನಸ್ಥಿತಿಯನ್ನು ಪುನರಾವಲೋಕನ ಮಾಡಿಕೊಂಡಿತು. ಇದರ ಜತೆಗೆ ಶಿಸ್ತುಬದ್ದವಾಗಿ ಒಂದೊಂದೇ ಪಂದ್ಯದತ್ತ ಗಮನ ಕೇಂದ್ರೀಕರಿಸಲಾರಂಭಿಸಿತು ಎಂದು ರೋಹಿತ್ ಹೇಳಿದ್ದಾರೆ.
ವೈಯುಕ್ತಿಕ ದಾಖಲೆ ಬದಿಗಿಟ್ಟು ತಂಡವಾಗಿ ಆಡಿದ ಭಾರತ
ಒಂದು ತಂಡವಾಗಿ ಆಡಿದರಷ್ಟೇ ಗೆಲುವು ಸಾಧ್ಯ. ಹೀಗಾಗಿ ಎಲ್ಲರೂ ತಮ್ಮ ವೈಯುಕ್ತಿಕ ದಾಖಲೆ ಹಾಗೂ ಸಾಧನೆಯನ್ನು ಬದಿಗಿಟ್ಟು ತಂಡದ ಗೆಲುವಿಗಾಗಿ ಕಾಂಟ್ರಿಬ್ಯೂಟ್ ಮಾಡುವತ್ತ ಗಮನ ಹರಿಸಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಕೋಚ್ ಹುದ್ದೆಯಿಂದ ಕೆಳಗಿಳಿದ ದ್ರಾವಿಡ್
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುತ್ತಿದ್ದಂತೆಯೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದರು. ಇದಾದ ಬಳಿಕ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದರು.
ದ್ರಾವಿಡ್ ನೆನಪಿಸಿಕೊಂಡ ರೋಹಿತ್ ಶರ್ಮಾ
ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಗಂಭೀರ್ ಹೆಡ್ ಕೋಚ್ ಆಗಿದ್ದರೂ, ರಾಹುಲ್ ದ್ರಾವಿಡ್ ಅವರನ್ನು ರೋಹಿತ್ ಶರ್ಮಾ ನೆನಪಿಸಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಗಂಭೀರ್ ಕೋಚ್ ಆಗುತ್ತಿದ್ದಂತೆಯೇ ಸೀನಿಯರ್ಸ್‌ಗೆ ಗೇಟ್‌ಪಾಸ್
ಇನ್ನು ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೆ, ರವಿಚಂದ್ರನ್ ಅಶ್ವಿನ್, ಚೇತೇಶ್ವರ್ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಚರ್ಚೆಗೆ ಗ್ರಾಸವಾದ ಬಿಸಿಸಿಐ ನಡೆ
ಭಾರತಕ್ಕೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟರೂ, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಇದೀಗ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಿರುವುದು ಕೂಡಾ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

