'ಮೊದಲು ಒಂದು ಸಿಂಗಲ್ ತೆಗಿ, ಆಮೇಲೆ ಅಬ್ಬರಿಸು' ಟೀಂ ಇಂಡಿಯಾ ಯುವ ಓಪನರ್ಗೆ ಸನ್ನಿ ಕಿವಿಮಾತು
ಅಹಮದಾಬಾದ್: ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಾವಾಡುತ್ತಿರುವ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಪಂದ್ಯ ಆಡಿದ್ದರೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೀಗ ಅಭಿಷೇಕ್ ಶರ್ಮಾಗೆ ಸುನಿಲ್ ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.

ಅಭಿಷೇಕ್ ಶರ್ಮಾಗೆ ಸುನಿಲ್ ಗವಾಸ್ಕರ್ ಕಿವಿಮಾತು
ಟಿ20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಟೀಂ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾಗೆ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಒಂದು ಸಿಂಪಲ್ ಸಲಹೆ ನೀಡಿದ್ದಾರೆ.
ಮೊದಲು ಖಾತೆ ತೆರೆಯುವ ಕಡೆ ಗಮನ ಕೊಡು ಎಂದ ಗವಾಸ್ಕರ್
ಮೊದಲ ಎಸೆತದಿಂದಲೇ ಬೌಂಡರಿ, ಸಿಕ್ಸರ್ಗೆ ಮುಂದಾಗುವ ಬದಲು, ಮೊದಲು ಒಂದು ಸಿಂಗಲ್ ತೆಗೆದು ಖಾತೆ ತೆರೆಯುವತ್ತ ಗಮನಹರಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
ಖಾತೆ ತೆರೆದರೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದ ಸನ್ನಿ
"ಅಭಿಷೇಕ್ ಶರ್ಮಾಗೆ ನನ್ನ ಸಲಹೆ ಇಷ್ಟೇ, ಮೊದಲು ಕ್ರೀಸ್ಗೆ ಹೋಗಿ ಒಂದು ಸಿಂಗಲ್ ತೆಗೆಯಿರಿ. ಅಷ್ಟೇ ಸಾಕು. ಆಮೇಲೆ ನೀವು ಅಟ್ಯಾಕ್ ಮಾಡಬಹುದು. ವೇಗವಾಗಿ ಒಂದು ಸಿಂಗಲ್ ತೆಗೆದರೆ ನಿಮ್ಮ ಕಾಲುಗಳು ಚುರುಕಾಗುತ್ತವೆ, ಆತ್ಮವಿಶ್ವಾಸ ಹೆಚ್ಚುತ್ತದೆ. ನಂತರ ನಿಮ್ಮದೇ ಶೈಲಿಯಲ್ಲಿ ಆಡುವುದು ಉತ್ತಮ," ಎಂದು ಗವಾಸ್ಕರ್ ಕಿವಿಮಾತು ಹೇಳಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನ ಭರ್ಜರಿ ಫಾರ್ಮ್ನಲ್ಲಿದ್ದ ಅಭಿಷೇಕ್ ಶರ್ಮಾ
ವಿಶ್ವಕಪ್ಗೂ ಮುನ್ನ ಭರ್ಜರಿ ಫಾರ್ಮ್ನಲ್ಲಿದ್ದ ಅಭಿಷೇಕ್ಗೆ ಟೂರ್ನಿಯ ಆರಂಭ ಅಷ್ಟು ಚೆನ್ನಾಗಿರಲಿಲ್ಲ. ಹೊಟ್ಟೆ ನೋವಿನ ಕಾರಣ ನಮೀಬಿಯಾ ವಿರುದ್ಧದ ಪಂದ್ಯದಿಂದ ಅವರು ಹೊರಗುಳಿದಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿದರೂ, 4 ಎಸೆತಗಳನ್ನು ಎದುರಿಸಿ ಮತ್ತೆ ಸೊನ್ನೆಗೆ ಔಟಾದರು.
ಕೆಟ್ಟದಾಖಲೆಗೆ ಪಾತ್ರರಾಗಿರುವ ಅಭಿಷೇಕ್ ಶರ್ಮಾ
ಇದರೊಂದಿಗೆ, ವಿಶ್ವಕಪ್ನ ಮೊದಲ ಎರಡು ಪಂದ್ಯಗಳಲ್ಲಿ ಸೊನ್ನೆಗೆ ಔಟಾದ ಮೊದಲ ಭಾರತೀಯ ಓಪನರ್ ಎಂಬ ಬೇಡದ ದಾಖಲೆಯನ್ನೂ ಅವರು ತಮ್ಮ ಹೆಸರಿಗೆ ಬರೆದುಕೊಂಡರು.
ಅಭಿಷೇಕ್ ಶರ್ಮಾ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ ಎಂದ ಕ್ರಿಕೆಟ್ ದಿಗ್ಗಜ
ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ್ದ ಅಭಿಷೇಕ್ ಸಾಮರ್ಥ್ಯದ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಗವಾಸ್ಕರ್ ಇದೇ ವೇಳೆ ಹೇಳಿದರು. ಭಾರತ ಈಗಾಗಲೇ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿರುವ ಕಾರಣ, ಇಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಆಡಿ ಫಾರ್ಮ್ಗೆ ಮರಳಲು ಅಭಿಷೇಕ್ಗೆ ಉತ್ತಮ ಅವಕಾಶವಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

