ಈಗಾಗಲೇ ಸೂಪರ್-8 ಪ್ರವೇಶಿಸಿರುವ ಭಾರತ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಸೂಪರ್-8ರ ಕಸರತ್ತಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದ್ದು, ಬೌಲಿಂಗ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.
ಅಹಮದಾಬಾದ್: ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಸುತ್ತಿಗೆ ಪ್ರವೇಶ ಖಚಿತಪಡಿಸಿಕೊಂಡಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಬುಧವಾರ ನೆದರ್ಲೆಂಡ್ಸ್ ವಿರುದ್ಧ ಸೆಣಸಾಡಲಿದೆ. ‘ಎ’ ಗುಂಪಿನಲ್ಲಿ ಆಡಿರುವ 3 ಪಂದ್ಯಗಳಲ್ಲೂ ಗೆದ್ದಿರುವ ಟೀಂ ಇಂಡಿಯಾ ಸದ್ಯ ಅಗ್ರಸ್ಥಾನದಲ್ಲಿದ್ದು, ಡಚ್ ಪಡೆಯ ವಿರುದ್ಧ ಗೆದ್ದು ಅಜೇಯವಾಗಿಯೇ ಸೂಪರ್-8 ಪ್ರವೇಶಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ನೆದರ್ಲೆಂಡ್ಸ್ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ.
ಈಗಾಗಲೇ 3 ಪಂದ್ಯಗಳಲ್ಲೂ ಸೋತಿರುವ ನೆದರ್ಲೆಂಡ್ಸ್ನಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿಲ್ಲ. ಆದರೆ ಸೂಪರ್-8 ಹಂತದಲ್ಲಿ ಬಲಿಷ್ಠ ತಂಡಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ತಂಡ ಡಚ್ಚರ ವಿರುದ್ಧ ಪಂದ್ಯವನ್ನು ಕೊನೆ ಕಸರತ್ತು ಎಂಬಂತೆ ಬಳಸಿಕೊಳ್ಳಲಿದೆ. ಪ್ರಮುಖವಾಗಿ, ಆರಂಭಿಕ 3 ಪಂದ್ಯಗಳಲ್ಲೂ ಸ್ಪಿನ್ನರ್ಗಳ ವಿರುದ್ಧ ಪರದಾಡಿದ್ದ ಭಾರತೀಯ ಬ್ಯಾಟರ್ಗಳು ಸೂಪರ್-8ಗೂ ಮುನ್ನ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ರೀತಿ ಆಟವಾಡಬೇಕಿದೆ.
ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಕಣ್ಣು
ಯುಎಸ್ಎ ಹಾಗೂ ಪಾಕಿಸ್ತಾನ ವಿರುದ್ಧ ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿರುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ನೆದರ್ಲೆಂಡ್ಸ್ ವಿರುದ್ಧವಾದರೂ ಅಬ್ಬರಿಸಬಲ್ಲರೇ ಎಂಬ ಕುತೂಹಲವಿದೆ. ಅವರ ಸ್ಫೋಟಕ ಆಟ ಮಧ್ಯಮ ಕ್ರಮಾಂಕದ ಮೇಲಿನ ಹೊರೆ ತಗ್ಗಿಸಲಿದ್ದು, ತಂಡ ಬೃಹತ್ ಮೊತ್ತ ಕಲೆಹಾಕಲೂ ನೆರವಾಗಲಿದೆ.
ಇಶಾನ್ ಕಿಶನ್ ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದು, ಡಚ್ ಪಡೆಯ ವಿರುದ್ಧವೂ ಸ್ಫೋಟಕ ಆಟದ ಕಾತರದಲ್ಲಿದ್ದಾರೆ. ನಾಯಕ ಸೂರ್ಯಕುಮಾರ್ ಉತ್ತಮ ಲಯದಲ್ಲಿದ್ದು, ತಿಲಕ್ ವರ್ಮಾ ಹಾಗೂ ಶಿವಂ ದುಬೆ ಬ್ಯಾಟ್ನಿಂದ ರನ್ ಹರಿದು ಬರಬೇಕಿದೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಬೌಲರ್ಸ್ ಬದಲಾವಣೆ?:
ಈ ಪಂದ್ಯದಲ್ಲಿ ಭಾರತ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಸ್ಪಿನ್ನರ್ ಕುಲ್ದೀಪ್ ಯಾದವ್ರನ್ನು ಹೊರಗಿಟ್ಟು, ಅರ್ಶ್ದೀಪ್ಗೆ ಅವಕಾಶ ನೀಡಬಹುದು. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದರೆ ಅವರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಆಡುವ ನಿರೀಕ್ಷೆಯಿದೆ.
01 ಬಾರಿ: ಅಂ.ರಾ. ಟಿ20ಯಲ್ಲಿ ಭಾರತ-ನೆದರ್ಲೆಂಡ್ಸ್ ಒಮ್ಮೆ ಮುಖಾಮುಖಿಯಾಗಿವೆ. 2022ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆದ್ದಿತ್ತು.
-- ಇಂದಿನ ಪಂದ್ಯಗಳು
ದಕ್ಷಿಣ ಆಫ್ರಿಕಾ-ಯುಎಇ, ಬೆಳಗ್ಗೆ 11ಕ್ಕೆ (ನವದೆಹಲಿ)
ಪಾಕಿಸ್ತಾನ-ನಮೀಬಿಯಾ, ಮಧ್ಯಾಹ್ನ 3ಕ್ಕೆ(ಕೊಲಂಬೊ)
ಭಾರತ-ನೆದರ್ಲೆಂಡ್ಸ್, ಸಂಜೆ 7ಕ್ಕೆ(ಅಹಮದಾಬಾದ್)
ನೇಪಾಳಕ್ಕೆ ವಿಶ್ವಕಪ್ನಲ್ಲಿ 12 ವರ್ಷ ಬಳಿಕ ಗೆಲುವು
ಮುಂಬೈ: ನೇಪಾಳ ಟಿ20 ವಿಶ್ವಕಪ್ನಲ್ಲಿ 12 ವರ್ಷ ಬಳಿಕ ಗೆದ್ದಿದೆ. 2014ರಲ್ಲಿ 2 ಪಂದ್ಯಗಳಲ್ಲಿ ಗೆದ್ದ ನೇಪಾಳ, ಈ ಬಾರಿ ಟೂರ್ನಿಯಲ್ಲಿ ಮಂಗಳವಾರ ಸ್ಕಾಟ್ಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿ, ಟೂರ್ನಿಗೆ ವಿದಾಯ ಹೇಳಿತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 7 ವಿಕೆಟ್ಗೆ 170 ರನ್ ಗಳಿಸಿತು. ಮೈಕಲ್ ಜಾನ್ಸ್ 71 ರನ್ ಸಿಡಿಸಿದರು. ದೊಡ್ಡ ಗುರಿಯನ್ನು ನೇಪಾಳ 19.2 ಓವರ್ನಲ್ಲಿ ಬೆನ್ನತ್ತಿ ಗೆದ್ದಿತು. ದೀಪೇಂದ್ರ ಸಿಂಗ್ 23 ಎಸೆತಕ್ಕೆ ಔಟಾಗದೆ 50 ರನ್ ಗಳಿಸಿದರೆ, ಕುಶಾಲ್ ಭುರ್ಟೆಲ್ 43, ಆಸಿಫ್ ಶೇಖ್ 33 ರನ್ ಸಿಡಿಸಿದರು.


