ಲಕ್ಷ್ಮಿ ಪೂಜೆ ಫಲಕ್ಕೆ ಅಡ್ಡಿಯಾಗುತ್ತೆ ಶುಕ್ರವಾರ ಮಾಡುವ ಈ ತಪ್ಪು
Lakshmi Puja on Friday : ಶುಕ್ರವಾರ ಹೂವು, ಹಣ್ಣು, ಧೂಪ – ದೀಪಗಳಿಂದ ತಾಯಿ ಲಕ್ಷ್ಮಿ ಪೂಜೆ ಮಾಡಿದ್ರೆ ಸಾಲದು. ತಾಯಿ ಆಶೀರ್ವಾದ ಸಂಪೂರ್ಣವಾಗಿ ಸಿಗಬೇಕು ಅಂದ್ರೆ ಕೆಲ ತಪ್ಪುಗಳನ್ನು ಮಾಡಬಾರದು.

ಶುಕ್ರವಾರ ಲಕ್ಷ್ಮಿ ಪೂಜೆ
ಶುಕ್ರವಾರವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಈ ದಿನ ತಾಯಿ ಲಕ್ಷ್ಮಿಯನ್ನು ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಬೆಳಿಗ್ಗೆ ಮಾಡಿದ್ರೆ ಉತ್ತಮ. ಸಂಜೆ ಸಮಯದಲ್ಲೂ ನೀವು ಲಕ್ಷ್ಮಿ ಪೂಜೆ ಮಾಡಬಹುದು. ನಿತ್ಯ ಕರ್ಮ ಮುಗಿಸಿ, ಸ್ನಾನ ಮಾಡಿ, ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿ ನೀವು ಲಕ್ಷ್ಮಿ ಪೂಜೆಯನ್ನು ಮಾಡಬೇಕು.
ಲಕ್ಷ್ಮಿ ಪೂಜೆಗೆ ಅಗತ್ಯವಿರುವ ವಸ್ತುಗಳು
ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ಮಾಡ್ತೀರಿ ಎಂದಾದ್ರೆ ಕೆಂಪು ಸ್ಕಾರ್ಫ್, ಬಳೆಗಳು, ಸಿಂಧೂರ, ಹೂವು, ಧೂಪ – ದ್ರವ್ಯ, ತುಪ್ಪದ ದೀಪವನ್ನು ನೀವು ಸಿದ್ಧಪಡಿಸಬೇಕು. ಇದಲ್ಲದೆ ಬೆಲ್ಲ, ಕಡಲೆ ಹಿಟ್ಟು ಇಲ್ಲವೆ ಖೀರ್ ಅಥವಾ ಬಿಳಿ ಮಿಠಾಯಿಯನ್ನು ನೀವು ತಾಯಿ ಲಕ್ಷ್ಮಿಗೆ ಅರ್ಪಿಸಬೇಕು. ಸಂಜೆ ಮುಖ್ಯ ಬಾಗಿಲ ಬಳಿ ತುಪ್ಪದ ದೀಪವನ್ನು ಹಚ್ಚಬೇಕು. ಪೂಜೆಯ ಸಮಯದಲ್ಲಿ ಕಮಲದ ಹೂವು, ತೆಂಗಿನಕಾಯಿ ಅರ್ಪಿಸಬೇಕು.
ಸ್ವಚ್ಚತೆ ಮುಖ್ಯ
ಲಕ್ಷ್ಮಿ ದೇವಿ ಸ್ವಚ್ಛತೆಯನ್ನು ಪ್ರೀತಿಸುತ್ತಾಳೆ. ಸ್ವಚ್ಛವಾಗಿರುವ ಮನೆಯನ್ನು ಆಕೆ ಪ್ರವೇಶ ಮಾಡುತ್ತಾಳೆ. ಆದ್ದರಿಂದ, ಪೂಜೆಗೆ ಮೊದಲು ಮನೆ ಮತ್ತು ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತ್ರ ಪೂಜೆ ಶುರು ಮಾಡಿ.
ಶುಕ್ರವಾರದ ದಾನ
ಶುಕ್ರವಾರ ದಾನಕ್ಕೆ ವಿಶೇಷ ಮಹತ್ವವಿದೆ. ನೀವು ತಾಯಿ ಲಕ್ಷ್ಮಿಯ ಸಂಪೂರ್ಣ ಆಶೀರ್ವಾದ ಬೇಕೆಂದ್ರೆ ಶುಕ್ರವಾರ ದಾನ ಮಾಡಬೇಕು. ಹಣ, ಆಹಾರ, ಬಿಳಿ ಬಟ್ಟೆ, ಹಾಲು, ಅಕ್ಕಿ ಅಥವಾ ಬಿಳಿ ಸಿಹಿತಿಂಡಿಗಳನ್ನು ನಿರ್ಗತಿಕರಿಗೆ, ಅಂಗವಿಕಲರಿಗೆ ದಾನ ಮಾಡಬೇಕು.
ಮನಸ್ಸಿನ ಶುದ್ಧತೆ
ಲಕ್ಷ್ಮಿ ಪೂಜೆ ಮಾಡುವ ವೇಳೆ ಹಾಗೂ ದಾನ ಮಾಡುವ ವೇಳೆ ನೀವು ಮನಸ್ಸಿನ ಶುದ್ಧತೆಗೆ ಹೆಚ್ಚು ಗಮನ ನೀಡಬೇಕು. ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಿ. ಸಕಾರಾತ್ಮಕ ವಾತಾವರಣದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು.
ಶುಕ್ರವಾರ ಈ ತಪ್ಪು ಮಾಡಬೇಡಿ
ಶುಕ್ರವಾರ ತಾಯಿ ಲಕ್ಷ್ಮಿ ಪೂಜೆಯ ಫಲ ನಿಮಗೆ ಸಂಪೂರ್ಣ ಸಿಗಬೇಕು ಎಂದಾದಲ್ಲಿ ನೀವು ಯಾರ ಮೇಲೂ ಕೋಪ ಮಾಡಿಕೊಳ್ಳಬೇಡಿ. ಯಾವುದೇ ವ್ಯಕ್ತಿಯನ್ನು ಅವಮಾನಿಸಬೇಡಿ. ಜಗಳಗಳು, ಉದ್ವಿಗ್ನತೆಯಿಂದ ಮನಸ್ಸು ಹಾಳಾಗಿ, ಪೂಜೆಯ ಮೇಲಿನ ಗಮನ ಕಡಿಮೆಯಾಗುತ್ತದೆ.
ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ
ಶುಕ್ರವಾರದ ಪೂಜೆಗೆ ಮುನ್ನ ಮನೆಯಲ್ಲಿರುವ ಕಸವನ್ನು ಹೊರಗೆ ಹಾಕಿ. ಮುರಿದ ಹಾಳಾದ ವಸ್ತು, ದೇವರ ಸಾಮಗ್ರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ.
ಈ ಆಹಾರದಿಂದ ದೂರ ಇರಿ
ಶುಕ್ರವಾರ ಲಕ್ಷ್ಮಿ ಪೂಜೆ ಮಾಡ್ತಿದ್ದರೆ ಇಡೀ ದಿನ ಬೆಳ್ಳುಳ್ಳಿ, ಈರುಳ್ಳಿ, ಮಾಂಸಾಹಾರ ಮತ್ತು ಹುಳಿ ಆಹಾರವನ್ನು ಸೇವನೆ ಮಾಡಬೇಡಿ. ಇದು ನಿಮ್ಮ ಮನಸ್ಸನ್ನು ಚಂಚಲಗೊಳಿಸುತ್ತದೆ.
ದೀಪದ ಬಗ್ಗೆ ಗಮನ ಇರಲಿ
ಶುಕ್ರವಾರ ತಾಯಿ ಲಕ್ಷ್ಮಿ ಮುಂದೆ ಹಚ್ಚುವ ದೀಪದ ಬಗ್ಗೆಯೂ ನೀವು ವಿಶೇಷ ಗಮನ ನೀಡಬೇಕು. ತುಪ್ಪದ ದೀಪವನ್ನೇ ಬೆಳಗಬೇಕು. ಹೀಗೆ ಮಾಡಿದಲ್ಲಿ ತಾಯಿ ಒಲಿಯುತ್ತಾಳೆ. ನಿಮ್ಮ ಪೂಜೆ ಸಾರ್ಥಕವಾಗುತ್ತದೆ.

