ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್ ಜಿಂಗಾಲಾಲಾ- ಏನಿದೆ ಇದರಲ್ಲಿ?
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು 'ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ'ಯನ್ನು ಮಂಡಿಸಿದ್ದು, ಇದು ಕಚೇರಿ ಸಮಯದ ನಂತರ ಕೆಲಸದ ಕರೆಗಳನ್ನು ನಿರಾಕರಿಸುವ ಹಕ್ಕನ್ನು ಉದ್ಯೋಗಿಗಳಿಗೆ ನೀಡುತ್ತದೆ. ಏನಿದು ಮಸೂದೆ? ಫುಲ್ ಡಿಟೇಲ್ಸ್ ಇಲ್ಲಿದೆ.

ಚಳಿಗಾಲದ ಅಧಿವೇಶನ
ಲೋಕಸಭೆ ಮತ್ತು ರಾಜ್ಯಸಭೆಗಳ ಚಳಿಗಾಲದ ಅಧಿವೇಶನ ಕಳೆದ ಸೋಮವಾರದಿಂದ ಆರಂಭಗೊಂಡಿದ್ದು, ಇದಾಗಲೇ ಉಭಯ ಸದನಗಳಲ್ಲಿ ಕೆಲವು ಮಸೂದೆಗಳನ್ನು ಅಂಗೀಕಾರ ಮಾಡಲಾಗಿದೆ. ಲೋಕಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡನೆ ಮಾಡಲು ಅವಕಾಶವಿದ್ದು, ಮೊನ್ನೆ ಶುಕ್ರವಾರ, ಕೆಲವು ಖಾಸಗಿ ಮಸೂದೆಗಳು ಕೂಡ ಮಂಡನೆಯಾಗಿದ್ದು, ಕೆಲವು ಅಂಗೀಕಾರಗೊಂಡಿವೆ.
ಉದ್ಯೋಗಸ್ಥರಿಗೆ ವರದಾನ
ಇವುಗಳ ಪೈಕಿ ಇದೀಗ ಭಾರಿ ಸುದ್ದಿ ಮಾಡುತ್ತಿರುವುದು ಉದ್ಯೋಗಸ್ಥರು ಅದರಲ್ಲಿಯೂ ಹೆಚ್ಚಾಗಿ ಕಾರ್ಪೋರೇಟ್ ವಲಯದ ಉದ್ಯೋಗಿಗಳಿಗೆ ತುಂಬಾ ಖುಷಿ ನೀಡುವ ಮಸೂದೆಯೊಂದನ್ನು ಮಂಡನೆ ಮಾಡಲಾಗಿದೆ. ಇದನ್ನು ಮಂಡಿಸಿರುವವರು ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಲೆ.
ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ
ಲೋಕಸಭೆಯಲ್ಲಿ ಮಂಡಿಸಲಾದ ಈ ಮಸೂದೆಯ ಹೆಸರು "ಸಂಪರ್ಕ ಕಡಿತಗೊಳಿಸುವ ಹಕ್ಕು ಮಸೂದೆ, 2025" . ಇದು ಸದ್ಯ ಮಂಡಿಸಲಾಗಿದೆಯಷ್ಟೇ. ಇದಕ್ಕೆ ಸಂಸತ್ತು ಅಂಗೀಕಾರ ನಿಡಬೇಕಿದೆ. ಎಲ್ಲಾ ಪ್ರಕ್ರಿಯೆ ಮುಗಿದು ಇದು ಕಾನೂನಾಗಿ ಜಾರಿಗೆ ಬಂದರೆ, ಕಾರ್ಪೋರೇಟ್ ವಲಯದ ಉದ್ಯೋಗಿಗಳಿಗೆ ಬಂಪರ್ ಬಹುಮಾನ ಸಿಕ್ಕಂತಾಗುತ್ತದೆ.
ಕರೆ- ಇ ಮೇಲ್ ಸಲ್ಲ!
ಅಷ್ಟಕ್ಕೂ ಈ ಮಸೂದೆಯಲ್ಲಿ ಇರುವುದು ಏನೆಂದರೆ, ಕೆಲಸ ಮಾಡುವ ವೃತ್ತಿಪರರಿಗೆ ಕಚೇರಿ ಸಮಯದ ನಂತರ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಅಥವಾ ಇಮೇಲ್‌ಗಳನ್ನು ನಿರಾಕರಿಸುವ ಹಕ್ಕು ಇದೆ ಎನ್ನುವುದು! ಇದರ ಅರ್ಥ ಕೆಲಸದ ಅವಧಿ ಮುಗಿದ ಮೇಲೆ ಇನ್ನೂ ಹೆಚ್ಚು ಕೆಲಸ ಮಾಡುವಂತೆ ಮುಖ್ಯಸ್ಥರು ಕರೆ ಮಾಡುವುದು ಹಾಗೂ ಇ ಮೇಲ್ ಕಳುಹಿಸಿ ಒತ್ತಡ ಹಾಕುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದನ್ನು ನಿರಾಕರಿಸುವ ಹಕ್ಕು ಉದ್ಯೋಗಿಗಳಿಗೆ ಇದೆ ಎನ್ನುವುದು ಇದರ ತಾತ್ಪರ್ಯ.
ಸಮತೋಲನ ಜೀವನ
ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಕಾನೂನಿನ ಅಗತ್ಯವಿದೆ ಎಂದು ಸುಪ್ರಿಯಾ ಸುಲೆ ಅವರು ಲೋಕಸಭೆಗೆ ತಿಳಿಸಿದ್ದಾರೆ.
ವಜಾಗೊಳಿಸುವ ಬೆದರಿಕೆ
ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಬಾಸ್‌ನ ಕರೆಗಳಿಗೆ ಉತ್ತರಿಸಲು ವಿಫಲವಾದರೆ ವಜಾಗೊಳಿಸುವ ಬೆದರಿಕೆಯನ್ನೂ ಎದುರಿಸುತ್ತಿದ್ದಾರೆ. ಇದು ವೃತ್ತಿಪರ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನದ ಕೊರತೆಯನ್ನು ಸೃಷ್ಟಿಸುತ್ತದೆ. ಇದು ಕೆಲಸ ಮಾತ್ರವಲ್ಲದೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದು ಇದರ ಹಿಂದಿರುವ ಉದ್ದೇಶ.
ಉದ್ಯೋಗಿಗಳಿಗೆ ಪ್ರಯೋಜನಕಾರಿ
ಆದ್ದರಿಂದ, ಲೋಕಸಭೆಯಲ್ಲಿ ಪರಿಚಯಿಸಲಾದ ಈ ಮಸೂದೆಯನ್ನು ಉದ್ಯೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತಿದೆ. ಕಾನೂನಾಗಿ ಜಾರಿಗೆ ಬಂದರೆ, ಉದ್ಯೋಗಿಗಳು ಕೆಲಸದ ಅವಧಿ ಮುಗಿದ ಮೇಲೆಯೂ ಹೆಚ್ಚುವರಿ ಕೆಲಸ ಮಾಡುವುದನ್ನು ನಿರಾಕರಿಸುವ ಹಕ್ಕನ್ನು ಹೊಂದಿರುತ್ತಾರೆ.
ಮುಟ್ಟಿನ ರಜೆ ಮಸೂದೆ
ಅದೇ ರೀತಿ, ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ತಿಳಿಸುವ ಎರಡು ಪ್ರಮುಖ ಮಸೂದೆಗಳನ್ನು ಶುಕ್ರವಾರ ಮಂಡಿಸಲಾಯಿತು. ಈ ಮಸೂದೆಗಳನ್ನು ಕಾಂಗ್ರೆಸ್ ಸಂಸದೆ ಕಡಿಯಂ ಕಾವ್ಯಾ ಮಂಡಿಸಿದರು. ಮುಟ್ಟಿನ ಪ್ರಯೋಜನಗಳ ಮಸೂದೆ, 2024, ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತದೆ ಮತ್ತು ಪಾವತಿಸಿದ ಮುಟ್ಟಿನ ರಜೆಯನ್ನು ಒದಗಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

