- Home
- News
- India News
- ಗುಜರಾತ್ ವಿಮಾನ ದುರಂತಕ್ಕೆ ಬಲಿಯಾದ ವಿಜಯ್ ರೂಪಾನಿ ಯಾರು? ಮಗಳ ಭೇಟಿಗೆ ಲಂಡನ್‌ಗೆ ತೆರಳುತ್ತಿದ್ದಾಗ ಘಟನೆ
ಗುಜರಾತ್ ವಿಮಾನ ದುರಂತಕ್ಕೆ ಬಲಿಯಾದ ವಿಜಯ್ ರೂಪಾನಿ ಯಾರು? ಮಗಳ ಭೇಟಿಗೆ ಲಂಡನ್‌ಗೆ ತೆರಳುತ್ತಿದ್ದಾಗ ಘಟನೆ
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತವಾಗಿದೆ. ಅವರ ರಾಜಕೀಯ ಜೀವನ, ಸಾಧನೆಗಳು, ಮತ್ತು ವಿವಾದಗಳನ್ನು ಒಳಗೊಂಡ ಸಂಕ್ಷಿಪ್ತ ವಿವರಣೆ. ಬರ್ಮಾದಿಂದ ಗುಜರಾತ್‌ಗೆ ವಲಸೆ ಬಂದ ರೂಪಾನಿ, ವಿದ್ಯಾರ್ಥಿ ರಾಜಕಾರಣ ಪ್ರಯಾಣವನ್ನು ಈ ಲೇಖನ ಒಳಗೊಂಡಿದೆ.

ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ಏರ್ ಇಂಡಿಯಾ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 242 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ದುರಾದೃಷ್ಣವೆಂದರೆ ಈ ವಿಮಾನದಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಅವರು ಪ್ರಯಾಣಿಸುತ್ತಿದ್ದರು. 12 ನಂಬರ್ ನ ಪ್ರಯಾಣಿಕರಾಗಿ ಜೂನ್ 12ರಂದು ಲಂಡನ್‌ನಲ್ಲಿ ವಾಸವಿರುವ ತಮ್ಮ ಮಗಳನ್ನು ಭೇಟಿ ಮಾಡಲು ಏರ್ ಇಂಡಿಯಾ ವಿಮಾನದಲ್ಲಿ ಅಹಮದಾಬಾದ್‌ನಿಂದ ಹೊರಟಿದ್ದರು. ಆದರೆ ದುರಂತದಲ್ಲಿ ಮೃತಪಟ್ಟಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
ವಿಜಯ್ ರೂಪಾನಿ ಅವರು ಆಗಸ್ಟ್ 2, 1956ರಂದು ಮ್ಯಾನ್ಮರ್ ಬರ್ಮಾದ ರಂಗೂನ್‌ನಲ್ಲಿ ಜನಿಸಿದರು. ಬರ್ಮಾದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ 1960ರ ದಶಕದಲ್ಲಿ ಅವರ ಕುಟುಂಬವು ಗುಜರಾತ್‌ನ ರಾಜ್‌ಕೋಟ್‌ಗೆ ವಲಸೆ ಬಂತು. ಅವರು ಧರ್ಮೇಂದ್ರಸಿಂಗ್‌ಜಿ ಕಲಾ ಕಾಲೇಜಿನಿಂದ ಪದವಿ ಮತ್ತು ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು. ಕಾಲೇಜು ದಿನಗಳಲ್ಲಿ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ಜನ ಸಂಘದ ಮೂಲಕ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಾರಂಭಿಸಿದರು. ಅವರ ರಾಜಕೀಯ ಆಕ್ರಮಣಕ್ಕೆ ಇದು ಮೊದಲ ಹೆಜ್ಜೆಯಾಯಿತು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ರಾಜಕೀಯ ಪ್ರವೇಶ ಮತ್ತು ಪ್ರಗತಿ
ತಮ್ಮ 24ನೇ ವರ್ಷಕ್ಕೆ ರಾಜಕೀಯಕ್ಕೆ ಬಂದ ಅವರನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ರೂಪಾನಿ ಅವರನ್ನು ಮಿಶ್ರಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು, ಮತ್ತು ಅವರು 11 ತಿಂಗಳುಗಳ ಕಾಲ ಭಾವನಗರ ಮತ್ತು ಭುಜ್ ಜೈಲಿನಲ್ಲಿ ಕಳೆಯಬೇಕಾಯಿತು. 1987 ರಲ್ಲಿ ರಾಜ್‌ಕೋಟ್ ಪುರಸಭೆಯ ಸದಸ್ಯರಾಗಿ ಚುನಾಯಿತವಾಗಿ ಅವರು ರಾಜಕೀಯ ಕೌಶಲ್ಯ ತೋರಿಸಿದರು. 1996 ರಲ್ಲಿ ಅವರು ರಾಜ್‌ಕೋಟ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದರು. 2006 ರಲ್ಲಿ ತತ್ಕಾಲೀನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅವರನ್ನು ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದರು. ಇದೇ ವರ್ಷ, ಅವರು ರಾಜ್ಯಸಭೆಗೆ ಆಯ್ಕೆಯಾಗಿ 2011 ರವರೆಗೆ ಸದಸ್ಯರಾಗಿದ್ದರು.
ಮುಖ್ಯಮಂತ್ರಿ ಆಗುವವರೆಗೆ ಮತ್ತು ನಂತರ
2015 ರಲ್ಲಿ ಆನಂದಿಬೆನ್ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ, ರೂಪಾನಿ ಅವರು ಸಾರಿಗೆ, ಕಾರ್ಮಿಕ ಕಲ್ಯಾಣ ಹಾಗೂ ಕುಡಿಯುವ ನೀರಿನ ಖಾತೆಗಳನ್ನು ನಿಭಾಯಿಸಿದರು. ಕೆಲವೇ ತಿಂಗಳೊಳಗೆ ಅವರು ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದು, 2016 ರಲ್ಲಿ ಆನಂದಿಬೆನ್ ಪಟೇಲ್ ರಾಜೀನಾಮೆ ನೀಡಿದ ನಂತರ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಸಾಧನೆಗಳು
- 2017 ರ ಚುನಾವಣೆಯಲ್ಲಿ ಅವರು ಮರು ಆಯ್ಕೆಯಾಗಿದ್ದು, ಸೆಪ್ಟೆಂಬರ್ 2021ರವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. ಈ ಅವಧಿಯಲ್ಲಿ:
- 6000ಕ್ಕೂ ಹೆಚ್ಚು ಹಳ್ಳಿಗಳನ್ನು ಡಿಜಿಟಲ್ ಸಂಪರ್ಕಕ್ಕೆ ತಂದುಕೊಂಡರು
- ಉಜ್ವಲ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದರು
- ಎಲ್‌ಇಡಿ ಬಲ್ಬ್‌ಗಳ ಬೆಲೆಯನ್ನು ಕಡಿಮೆ ಮಾಡಿ ಬಳಕೆಯನ್ನು ಪ್ರೋತ್ಸಾಹಿಸಿದರು
- ರಾಜ್‌ಕೋಟ್ ಅನ್ನು ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸಿದರು
ಮಗನನ್ನು ಕಳೆದುಕೊಂಡಿದ್ದ ರೂಪಾನಿ
ಜೈನ-ಬನಿಯಾ ಸಮುದಾಯದ ಯುವರಾಜನಾಗಿ, ಸೌರಾಷ್ಟ್ರದಲ್ಲಿ ಪ್ರಭಾವಶಾಲಿಯಾಗಿ ಉಳಿದಿರುವ ವಿಜಯ್ ರೂಪಾನಿಯವರು, ವಿಜಯ್ ರೂಪಾನಿಯವರು ಬಿಜೆಪಿ ಮಹಿಳಾ ಘಟಕದ ಸದಸ್ಯೆಯಾಗಿದ್ದ ಅಂಜಲಿ ರೂಪಾನಿ ಅವರನ್ನು ವಿವಾಹವಾದರು. ಇಬ್ಬರು ಗಂಡು ಮಕ್ಕಳು ಮತ್ತು ಒರ್ವ ಹೆಣ್ಣು ಮಗಳೊಂದಿಗೆ ಕುಟುಂಬ ಜೀವನ ನಡೆಸುತ್ತಿದ್ದರು. ದಂಪತಿಗೆ ರುಷಭ್ ಎಂಬ ಎಂಜಿನಿಯರಿಂಗ್ ಪದವೀಧರ ಮಗ ಹಾಗೂ ರಾಧಿಕಾ ಎಂಬ ವಿವಾಹಿತ ಮಗಳು ಇದ್ದಾರೆ. ಆದರೆ, ಕುಟುಂಬಕ್ಕೆ ಅತೀವ ದುಃಖ ತಂದ ಘಟನೆಯೆಂದರೆ ಅವರ ಕಿರಿಯ ಮಗ ಪೂಜಿತ್, ಅಪಘಾತದಲ್ಲಿ ಅಕಾಲಿಕವಾಗಿ ಮೃತಪಟ್ಟನು. ಈ ಆಘಾತದಿಂದ ಹೊರಬರಲು, ದಂಪತಿಗಳು ತಮ್ಮ ಮಗನ ನೆನಪಿಗಾಗಿ "ಪೂಜಿತ್ ರೂಪಾನಿ ಸ್ಮಾರಕ ಟ್ರಸ್ಟ್" ಎಂಬ ದೇಣಿಗೆ ಸಂಸ್ಥೆಯನ್ನು ಆರಂಭಿಸಿದರು, ಇದು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಿದೆ.
ವಿವಾದಗಳು
ವಿಜಯ್ ರೂಪಾನಿ ಅವರು ತಮ್ಮ ತಂದೆ ಸ್ಥಾಪಿಸಿದ ರಸಿಕ್‌ಲಾಲ್ & ಸನ್ಸ್ ಎಂಬ ವ್ಯಾಪಾರ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಸ್ಟಾಕ್ ಬ್ರೋಕರ್ ಆಗಿ ಕೆಲಸ ಮಾಡಿದ್ದರು. 2011ರಲ್ಲಿ ವಿಜಯ್ ರೂಪಾನಿ ಅವರ HUF ಇತರೆ ಸಂಸ್ಥೆಗಳೊಂದಿಗೆ ಸೇರಿ ಷೇರು ವ್ಯಾಪಾರದ ವೇಳೆ "ಪಂಪ್ ಅಂಡ್ ಡಂಪ್" ಎಂಬ ಅಕ್ರಮ ಕ್ರಮದಲ್ಲಿ ತೊಡಗಿದ್ದಾರೆಂದು ಶಂಕಿಸಿ, ಷೇರು ಮಾರುಕಟ್ಟೆ ನಿಯಂತ್ರಣ ಪ್ರಾಧಿಕಿ ಸೆಬಿ ತನಿಖೆ ನಡೆಸಿತು. ಸಾರಂಗ್ ಕೆಮಿಕಲ್ಸ್ ಎಂಬ ಕಂಪನಿಯ ಷೇರುಗಳನ್ನು ₹63,000ಗೆ ಖರೀದಿಸಿ, ಬಳಿಕ ₹35,000ಗೆ ಮಾರಾಟ ಮಾಡುವ ಮೂಲಕ ನಷ್ಟ ತಾಳಲಾಗಿತ್ತು. ಇದನ್ನು ಕೃತಕವಾಗಿ ಷೇರು ಬೆಲೆ ಏರಿಸಿ ನಂತರ ಬಿಟ್ಟಿರುವಂತಾಗಿ ಸೆಬಿ ಗ್ರಹಿಸಿತು. ನವೆಂಬರ್ 2017ರಲ್ಲಿ, ಸೆಬಿ ವಿಜಯ್ ರೂಪಾನಿ HUFಗೆ ₹1,50,000 ದಂಡ ವಿಧಿಸಿತು. ರೂಪಾನಿ ಪಕ್ಷ ತಮಗೆ ವಿಚಾರಣೆ ನೀಡದೆ ತೀರ್ಪು ಕೈಗೊಂಡಿದ್ದಾಗಿ ಆಕ್ಷೇಪಿಸಿದರು. ನಂತರ, ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (SAT) ಈ ದಂಡದ ಆದೇಶವನ್ನು ರದ್ದುಗೊಳಿಸಿ, ಎಲ್ಲಾ ಸಂಸ್ಥೆಗಳ ಮಾತು ಕೇಳಿದ ಬಳಿಕ ಹೊಸ ತೀರ್ಪು ನೀಡಲು ಸೆಬಿಗೆ ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

