- Home
- Karnataka Districts
- ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್‌ನಿಂದ ಪತ್ತೆಹಚ್ಚಲಾಗಿತ್ತು.

ಡಿವೈಡರ್‌ಗೆ ಡಿಕ್ಕಿಯಾಗಿ ಕಾರು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಸಜೀವ ದಹನವಾದ ಹಾವೇರಿ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಅಂತ್ಯಕ್ರಿಯೆ ಶನಿವಾರ ಅವರ ಹುಟ್ಟೂರು ಮುರಗೋಡದಲ್ಲಿ ನಡೆಯಿತು.
ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದು ಶವ ಹಸ್ತಾಂತರ ಮಾಡಲಾಯಿತು. ಎತ್ತರದ ಕಟ್ಟುಮಸ್ತಾದ ವ್ಯಕ್ತಿಯಾಗಿದ್ದ ಪಂಚಾಕ್ಷರಿ ಸಾಲಿಮಠ ಅವರ ದೇಹ ಎಷ್ಟು ಮಟ್ಟಿಗೆ ಸುಟ್ಟು ಹೋಗಿತ್ತೆಂದರೆ, ಚಿಕ್ಕ ಮಕ್ಕಳ ಮೃತದೇಹ ಎನ್ನುವಂತೆ ಅವರ ಶವ ಕಾಣುತ್ತಿತ್ತು.
ಮಧ್ಯಾಹ್ನ 12 ಗಂಟೆಯ ವೇಳೆಗೆ ಮುರಗೋಡದಲ್ಲಿ ಅಂತ್ಯಕ್ರಿಯೆ ನಡೆಯಿತು. ಅದಕ್ಕೂ ಮುನ್ನ, ಧಾರವಾಡ ಉಪನಗರ ಪೋಲಿಸ್ ಠಾಣೆಯ ಎದುರು ಶ್ರದ್ದಾಂಜಲಿ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಪೊಲೀಸ್ ಸಹೋದ್ಯೋಗಿಗಳು ಕಣ್ಣೀರಿಡುತ್ತಲೇ ವಿದಾಯ ಹೇಳಿದರು.
ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿದ್ದ ಇನ್ಸ್‌ಪೆಕ್ಟರ್ ದೇಹವನ್ನು ಕೈಯಲ್ಲಿನ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್ ಮೇಲೆ ಪತ್ತೆ ಮಾಡಲಾಗಿತ್ತು. ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮುರಗೋಡದಲ್ಲಿ ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅವರ ಮೃತದೇಹದ ಮುಂದೆ ಮಗ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು.
ಇನ್ನು ಪಂಚಾಕ್ಷರಿ ಸಾಲಿಮಠ ಅವರ ಅಂತ್ಯಕ್ರಿಯೆ ಮುರಗೋಡದಲ್ಲಿ ಇಡೀ ಊರಿಗೆ ಊರೇ ಸ್ಮಶಾನಕ್ಕೆ ಬಂದಿತ್ತು. ಕುಟುಂಬದವರ ಆಕ್ರಂದನ ನೋಡಿ ಎಲ್ಲರ ಕಣ್ಣು ಭಾವುಕವಾಗಿತ್ತು.
ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ;ನಿನ್ನೆ ಸಂಜೆ ಗದಗಕ್ಕೆ ಹೋಗುವ ಸಂದರ್ಭ ಅಪಘಾತದಲ್ಲಿ ಮೃತರಾಗಿದ್ದಾರೆ. ಇದೀಗ ಮೃತದೇಹ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಅಲ್ಲಿಂದ ಗರಗ, ಬೈಲಹೊಂಗಲ ಬಳಿ ಶ್ರದ್ಧಾಂಜಲಿ ಸಲ್ಲಿಸಿ ಮೃತರ ಸ್ವಗ್ರಾಮ ಮುರಗೋಡಕ್ಕೆ ಮೃತದೇಹ ತೆರಳಲಿದೆ ಅವರು ಮಾಹಿತಿ ನೀಡಿದ್ದರು.
ಸಾಲಿಮಠ ಅವರು 2003 ನೇ ಬ್ಯಾಚ್ ನ ಅಧಿಕಾರಿಯಾಗಿ ಕಾರ್ಯಾರಂಭ ಮಾಡಿದ್ದರು. ಹುಬ್ಬಳ್ಳಿ ಧಾರವಾಡ , ಗುಲ್ಬರ್ಗಾ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ ಸಹ ಅವರ ಕಾರ್ಯವೈಖರಿ ನಾನು ನೋಡಿದ್ದೆ. ಶಿಸ್ತುಬದ್ಧವಾಗಿ ಸಾಲಿಮಠ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಶಶಿಕುಮಾರ್‌ಹೇಳಿದ್ದಾರೆ.
ಎಲ್ಲರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅವರ ಈ ಸಾವು ನಮ್ಮೆಲ್ಲರಿಗೂ ಬಹುದೊಡ್ಡ ಆಘಾತ ತಂದಿದೆ. ಅವರ ಕುಟುಂಬಸ್ಥರಿಗೆ ಬಹುದೊಡ್ಡ ಆಘಾತ ತಂದಿದೆ. ದೇವರು ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಶಶಿಕುಮಾರ್ ಅವರು ಹೇಳಿದ್ದಾರೆ.

