- Home
- Entertainment
- Sandalwood
- ಪರಭಾಷೆಗೆ ಹಾವಳಿ ಕೊಡೋ ಹಾಗೆ ರೆಡಿಯಾದ ಕನ್ನಡದ 45 Movie: ಕೆಲವೇ ಗಂಟೆಗಳಲ್ಲಿ YouTube ತತ್ತರ; ಕಥೆ ಏನು?
ಪರಭಾಷೆಗೆ ಹಾವಳಿ ಕೊಡೋ ಹಾಗೆ ರೆಡಿಯಾದ ಕನ್ನಡದ 45 Movie: ಕೆಲವೇ ಗಂಟೆಗಳಲ್ಲಿ YouTube ತತ್ತರ; ಕಥೆ ಏನು?
45 Movie Trailer: ನಟ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ, ಎಂ. ರಮೇಶ್ ರೆಡ್ಡಿ ಅವರು ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ‘45’ ಸಿನಿಮಾ ಸದ್ದು ಮಾಡುತ್ತಿದೆ. ಡಿಸೆಂಬರ್ 25 ರಂದು ತೆರೆಗೆ ಬರುತ್ತಿದೆ.

ಐದು ಜಿಲ್ಲೆಗಳಲ್ಲಿ ಸಿನಿಮಾದ ಟ್ರೇಲರ್ ಅನಾವರಣ
ಬೆಂಗಳೂರು ಸೇರಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾದ ಟ್ರೇಲರ್ ಅನಾವರಣವಾಗಿದ್ದು ವಿಶೇಷ.ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ರಮೇಶ್ ರೆಡ್ಡಿ ಅವರು ಉಪಸ್ಥಿತರಿದ್ದರು.
ಅರ್ಜುನ್ ಜನ್ಯ ಏನಂದ್ರು?
“ನಾನು ಮೂರು ಜನ ನಾಯಕರ ಅಭಿಮಾನಿಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಾಗಾಗಿ ನನಗೆ ಈ ಸಿನಿಮಾ ನಿರ್ದೇಶಿಸುವುದು ಅಷ್ಟು ಕಷ್ಟ ಆಗಲಿಲ್ಲ. ನಾನು ಸಿನಿಮಾ ನಿರ್ದೇಶಕನಾಗಲು ಶಿವರಾಜ್‌ಕುಮಾರ್ ಅವರೇ ಕಾರಣ. ಈ ಸಿನಿಮಾದ ನಾಲ್ಕನೇ ಹೀರೋ ನಿರ್ಮಾಪಕ ರಮೇಶ್ ರೆಡ್ಡಿ. ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ಮಾಡಿದ್ದಾರೆ. ನಾನು ಸಿನಿಮಾ ನಿರ್ದೇಶನಕ್ಕೂ ಮುನ್ನ ಅನಿಮೇಶನ್‌ನಲ್ಲಿ ಈ ಸಿನಿಮಾ ಕಥೆ ಮಾಡಿ ಶಿವಣ್ಣ, ರಮೇಶ್ ರೆಡ್ಡಿ ಅವರಿಗೆ ತೋರಿಸಿದ್ದೆ. ಅವರು ಅದನ್ನು ನೋಡಿ ಮೆಚ್ಚಿಕೊಂಡಿದ್ದರು. ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಅನೇಕ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಆ ವಿಷಯದ ಒಂದು ಎಳೆ ಇಟ್ಟುಕೊಂಡು ಈ ಸಿನಿಮಾ ಕಥೆ ಮಾಡಿದ್ದೇನೆ. ಎಲ್ಲ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹಿಸಿ” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಅರ್ಜುನ್ ಜನ್ಯ ಎಲ್ಲೋ ಹೋಗ್ತಾರೆ
ನಟ ಶಿವರಾಜಕುಮಾರ್ ಮಾತನಾಡಿ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ನಟಿಸಿದ್ದಾರೆ. ರಮೇಶ್ ರೆಡ್ಡಿ ಅವರ ನಿರ್ಮಾಣದ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಅಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾನು ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಈ ಚಿತ್ರ ಬಿಡುಗಡೆ ಆದ ಮೇಲೆ ಅರ್ಜುನ್ ಜನ್ಯ ಎಲ್ಲಿಗೋ ಹೋಗುತ್ತಾರೆ” ಎಂದರು.
ದುಡಿದಿದ್ದನ್ನೆಲ್ಲ ಇದಕ್ಕೆ ಸುರಿದ್ರು
ಈ ಸಿನಿಮಾದಲ್ಲಿ ತೆರೆಯ ಮೇಲೆ ಮೂರು ಸ್ಟಾರ್‌ಗಳು ಕಾಣಿಸ್ತಾರೆ. ತೆರೆಯ ಹಿಂದೆ ಮೂರು ಸ್ಟಾರ್‌ಗಳು ಇದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ದುಡಿದಿದ್ದನ್ನೆಲ್ಲ ಈ ಸಿನಿಮಾಕ್ಕೆ ಸುರಿದಿದ್ದಾರೆ. ನಿರ್ದೇಶಕ ಅರ್ಜುನ್ ಜನ್ಯ ಎರಡು ವರ್ಷದಿಂದ ಶ್ರಮ ಹಾಕಿದ್ದಾರೆ. ಛಾಯಾಗ್ರಾಹಕ ಸತ್ಯ ಹೆಗಡೆ ಅದ್ಭುತ ಕೆಲಸ ಮಾಡಿದ್ದಾರೆ. ಇಪ್ಪತ್ತರ ಯುವಕನನ್ನು ನಾಚಿಸುವ ಉತ್ಸಾಹವಿರುವ ಶಿವಣ್ಣ ಹಾಗು ‘ಸು ಫ್ರಮ್ ಸೋ’ ಸಿನಿಮಾದ ಮೂಲಕ ಬಹುಬೇಡಿಕೆಯ ನಟರಾಗಿರುವ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ” ಎಂದರು ನಟ ಉಪೇಂದ್ರ.
ಹಾವಳಿ ಕೊಡುವ ಸಿನಿಮಾ ಮಾಡಬೇಕು
ನಟ ರಾಜ್ ಬಿ ಶೆಟ್ಟಿ ಮಾತನಾಡಿ, ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ರಮೇಶ್ ರೆಡ್ಡಿ ಅವರ ಬಳಿ ವಿಚಾರಿಸುತ್ತಿದ್ದೆ. ನಾನು ಶಿವರಾಜಕುಮಾರ್, ಉಪೇಂದ್ರ ಅವರ ಅಭಿಮಾನಿ. ಅಂತಹ ದೊಡ್ಡ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀರಿ. ಈ ಚಿತ್ರ ಮುಗಿದ ಮೇಲೆ ಎಷ್ಟೋ ಜನ ನನ್ನನ್ನು ಹೀಗೆ ಕೇಳಿದರು. ನಾನು ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದೀನಿ ಅಂತ ಅನಿಸಲೇ ಇಲ್ಲ ಎಂದು ಹೇಳಿದೆ. ಅವರಿಬ್ಬರೂ ಅಷ್ಟು ಸರಳವಾಗಿದ್ದರು. ನಾವು ಪರಭಾಷಾ ಹಾವಳಿ ಅನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಸಿನಿಮಾ ಮಾಡಬೇಕು. ಆ ರೀತಿಯ ಚಿತ್ರ ‘45’ ಆಗಲಿದೆ ಎನ್ನುವ ಭರವಸೆ ನನ್ನಗಿದೆ ಎಂದು ತಿಳಿಸಿದರು.
ಶಿವಣ್ಣನ ಲುಕ್ ...
ಡಿಸೆಂಬರ್ 25ಕ್ಕೆ ಈ ಸಿನಿಮಾ ರಿಲೀಸ್ ಆಗಿದೆ. ಟ್ರೇಲರ್ ರಿಲೀಸ್ 14 ಗಂಟೆಗಳಲ್ಲಿ 19 ಲಕ್ಷ ವೀಕ್ಷಣೆ ಕಂಡಿದೆ. ಶಿವರಾಜ್‌ಕುಮಾರ್ ಅವರ ಹೆಣ್ಣಿನ ಗೆಟಪ್ ನೋಡಿ ಪ್ರೇಕ್ಷಕರು ಸಿಕ್ಕಾಪಟ್ಟೆ ಸರ್ಪ್ರೈಸ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

