ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಷಯ ರೋಗ ಪರೀಕ್ಷಾ ಯಂತ್ರಕ್ಕೆ (CBNAAT) ಚಾಲನೆ ನೀಡಿದರು. 90 ನಿಮಿಷಗಳಲ್ಲಿ ನಿಖರವಾಗಿ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ.

ಕೆಸಿ ಜನರಲ್ ಆಸ್ಪತ್ರೆಗೆ CBNAAT ಯಂತ್ರ
ಬೆಂಗಳೂರು (ಡಿ.04): ರಾಜ್ಯದಲ್ಲಿ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿವಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಅತ್ಯಾಧುನಿಕ ಕ್ಷಯ ರೋಗ ಪರೀಕ್ಷಾ ಯಂತ್ರವನ್ನು (CBNAAT) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕರ ಉಪಯೋಗಕ್ಕೆ ಸಮರ್ಪಿಸಿದರು.
1.5 ಕೋಟಿ ರೂ. ಮೌಲ್ಯದ 7 ಯಂತ್ರ
ಕ್ಷಯ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಗುರಿಯೊಂದಿಗೆ, ಸಿಂಜೆಂಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Syngenta India pvt ltd) ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯ ಅಡಿಯಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ ಒಟ್ಟು 7 ಅತ್ಯಾಧುನಿಕ ಯಂತ್ರಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದೆ.
ಕ್ಷಣಾರ್ಧದಲ್ಲಿ ನಿಖರ ರೋಗ ಪತ್ತೆ
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಸಿಬಿಎನ್‌ಎಎಟಿ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, 'ಈ ಯಂತ್ರಗಳು ಕ್ಷಯ ರೋಗ ಪತ್ತೆ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿವೆ. ಅತ್ಯಂತ ನಿಖರವಾದ ಫಲಿತಾಂಶ ನೀಡುವ ಮೂಲಕ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗುತ್ತದೆ.
ಈ ಸಿಬಿಎನ್‌ಎಎಟಿ (CBNAAT) ಯಂತ್ರಗಳು ಕೇವಲ 90 ನಿಮಿಷಗಳಲ್ಲಿ ಕ್ಷಯ ರೋಗಾಣುವನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ. ಈ ಹಿಂದೆ ಬಳಸುತ್ತಿದ್ದ ಮೈಕ್ರೋಸ್ಕೋಪಿಕ್ ಪರೀಕ್ಷಾ ವಿಧಾನದಲ್ಲಿ ರೋಗ ಪತ್ತೆಹಚ್ಚಲು ಹಲವು ಮಿತಿಗಳಿದ್ದವು ಎಂದು ತಿಳಿಸಿದರು.
ಆರಂಭಿಕ ಹಂತದಲ್ಲಿಯೇ ರೋಗಾಣು ಪತ್ತೆ
ಈ ಹಿಂದೆ ಮೈಕ್ರೋಸ್ಕೋಪಿಕ್ ಪರೀಕ್ಷೆಯಲ್ಲಿ 10,000/ಮಿ.ಲೀ. ಬೆಸಿಲಿಯನ್ (ರೋಗಾಣು) ಇದ್ದರೆ ಮಾತ್ರ ರೋಗವನ್ನು ಗುರುತಿಸಲು ಸಾಧ್ಯವಾಗುತ್ತಿತ್ತು. ಇದರಿಂದಾಗಿ, ಆರಂಭಿಕ ಹಂತದಲ್ಲಿ ರೋಗಾಣುಗಳ ಸಂಖ್ಯೆ ಕಡಿಮೆ ಇದ್ದರೆ, ರೋಗ ಪತ್ತೆ ಕಷ್ಟವಾಗಿ, ಕ್ಷಯ ರೋಗಕ್ಕೆ ತುತ್ತಾಗಿರುವ ವ್ಯಕ್ತಿಗೆ ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು.
ವಿಜಯನಗರ, ಕೋಲಾರಕ್ಕೆ ತಲಾ 3 ಹಂಚಿಕೆ
ಆದರೆ ಹೊಸದಾಗಿ ಬಂದಿರುವ ಸಿಬಿಎನ್‌ಎಎಟಿ ಯಂತ್ರವು ಅತ್ಯಂತ ಸೂಕ್ಷ್ಮವಾಗಿದ್ದು, ಕೇವಲ 137/ಮಿ.ಲೀ. ನಷ್ಟು ಕಡಿಮೆ ಪ್ರಮಾಣದ ಬೆಸಿಲಿಯನ್ ಇದ್ದರೂ ಅದನ್ನು ನಿಖರವಾಗಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಕ್ಷಯ ರೋಗವನ್ನು ಬಹುಬೇಗ ಪತ್ತೆ ಮಾಡಿ, ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ರಾಜ್ಯದ ಇತರ ಜಿಲ್ಲೆಗಳಿಗೂ ನೆರವು
ಸಿಂಜೆಂಟಾ ಕಂಪನಿ ನೀಡಿರುವ ಒಟ್ಟು 7 ಯಂತ್ರಗಳಲ್ಲಿ, ಒಂದು ಯಂತ್ರವನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ನೀಡಲಾಗಿದೆ. ಉಳಿದ 6 ಯಂತ್ರಗಳನ್ನು ಹೆಚ್ಚು ಅವಶ್ಯಕತೆಯಿರುವ ಜಿಲ್ಲೆಗಳಿಗೆ ವಿತರಿಸಲಾಗಿದೆ:
ವಿಜಯನಗರ ಜಿಲ್ಲೆಗೆ: 3 ಯಂತ್ರಗಳು
ಕೋಲಾರ ಜಿಲ್ಲೆಗೆ: 3 ಯಂತ್ರಗಳು
ಕ್ಷಯ ರೋಗ ಮುಕ್ತ ರಾಜ್ಯ ಗುರಿ
ಸಾರ್ವಜನಿಕರು ಈ ಅತ್ಯಾಧುನಿಕ ಸೌಲಭ್ಯದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು. ಇದರೊಂದಿಗೆ ಕ್ಷಯ ರೋಗ ಮುಕ್ತ ರಾಜ್ಯ ಮಾಡುವ ಇಲಾಖೆಯ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು' ಎಂದು ಸಚಿವರು ಕರೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಸಿಂಜೆಂಟಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

