ಕಲಬುರಗಿಯ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ 24 ಎಸಿಗಳ ಕಳ್ಳತನ ಪ್ರಕರಣ, ಸುವರ್ಣ ನ್ಯೂಸ್ ವರದಿಯ ನಂತರ ಹೊಸ ತಿರುವು ಪಡೆದುಕೊಂಡಿದೆ. ಸಂಸ್ಥೆಯ ನಿರ್ದೇಶಕ ಡಾ. ನವೀನ್ ತನಿಖೆ ಆರಂಭಿಸಿದ್ದು, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಗುರುರಾಜ್ ದೇಶಪಾಂಡೆ ಅವರ ಮೇಲೆಯೇ ಗಂಭೀರ ಆರೋಪ ಕೇಳಿಬಂದಿದೆ.

ಕಲಬುರಗಿ (ಫೆ.10): ನಗರದ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 24 ಎಸಿಗಳ (Air Conditioners) ಕಳ್ಳತನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸುವರ್ಣ ನ್ಯೂಸ್ ಪ್ರಸಾರ ಮಾಡಿದ್ದ ವರದಿಯ ಬೆನ್ನಲ್ಲೇ ಅಧಿಕಾರಿಗಳ ತಂಡ ಇಂದು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ.

ತನಿಖೆಗೆ ಮುಂದಾದ ನಿರ್ದೇಶಕ ಡಾ. ನವೀನ್

ಕಳೆದ ಡಿಸೆಂಬರ್ 24ರಂದು ಸುವರ್ಣ ನ್ಯೂಸ್ ಈ ಎಸಿ ಕಳ್ಳತನದ ಬಗ್ಗೆ ವಿಶೇಷ ವರದಿ ಪ್ರಸಾರ ಮಾಡುವ ಮೂಲಕ ಆಸ್ಪತ್ರೆಯ ಒಳಗಿನ ಅವ್ಯವಸ್ಥೆಯನ್ನು ಬಯಲಿಗೆಳೆದಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾಗಿರುವ 24 ಎಸಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಆಸ್ಪತ್ರೆ ಮುಖ್ಯಸ್ಥರ ಮೇಲೆಯೇ ಕೇಳಿಬಂದಿದೆ ಆರೋಪ!

ಈ ಪ್ರಕರಣದಲ್ಲಿ ಅಚ್ಚರಿಯ ಸಂಗತಿಯೆಂದರೆ, ಕಲಬುರಗಿ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಗುರುರಾಜ್ ದೇಶಪಾಂಡೆ ಅವರ ವಿರುದ್ಧವೇ ಎಸಿಗಳ ಕಳ್ಳತನದ ಗಂಭೀರ ಆರೋಪ ಕೇಳಿಬಂದಿದೆ. ಸರ್ಕಾರಿ ಆಸ್ತಿಯನ್ನು ಗುಜರಿ ಹಾಕಿದ್ದಾರಾ ಅಥವಾ ಅಕ್ರಮವಾಗಿ ಸಾಗಿಸಲಾಗಿದೆಯೇ ಎಂಬ ಅನುಮಾನಗಳು ತೀವ್ರವಾಗಿವೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ಕೂಡ ದಾಖಲಾಗಿದೆ.

ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ: ನಿರ್ದೇಶಕರ ಎಚ್ಚರಿಕೆ

ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಡಾ. ನವೀನ್, 'ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿರುವಾಗ ಹೆಚ್ಚು ಮಾತನಾಡಬಾರದು. ಆದರೆ, ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಶಿಕ್ಷೆ ಖಂಡಿತ ಆಗಲಿದೆ' ಎಂದು ಖಡಕ್ ಆಗಿ ತಿಳಿಸಿದ್ದಾರೆ.

ಸುವರ್ಣ ನ್ಯೂಸ್ ವರದಿ ಎಫೆಕ್ಟ್

ಡಿಸೆಂಬರ್‌ನಲ್ಲಿ ಸುವರ್ಣ ನ್ಯೂಸ್ ಈ ಹಗರಣವನ್ನು ಮೊದಲು ಹೊರಹಾಕಿದಾಗ ಆಡಳಿತ ಮಂಡಳಿ ಸುಮ್ಮನಾಗಿತ್ತು. ಆದರೆ ಈಗ ಸತತ ಫಾಲೋ-ಅಪ್ ಮತ್ತು ದಾಖಲೆಗಳ ಸಮೇತ ನೀಡಿದ ವರದಿಯಿಂದಾಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಎಸಿಗಳು ಈಗ ಮಾಯವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 

YouTube video player