ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!
ಬೆಳಗಾವಿ ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ವೇಳೆ ಸಾಕ್ಷ್ಯ ನಾಶಪಡಿಸಲು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿದ್ದು, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ.

ಪರಮ ಭ್ರಷ್ಟ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ
ಧಾರವಾಡ/ಬೆಳಗಾವಿ (ಡಿ.16): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೃಷಿ ಇಲಾಖೆಯ ವಿಜಿಲೆನ್ಸ್ ಉಪ ನಿರ್ದೇಶಕ ರಾಜಶೇಖರ ಬಿಜಾಪುರ ಅವರ ಒಡೆತನದ 4 ಜಿಲ್ಲೆಗಳ ಮನೆಗಳು ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮತ್ತು ಭಾರೀ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ. ಇದೇ ವೇಳೆ 50 ಸಾವಿರ ರೂ. ನೋಟಿನ ಕಂತೆಯನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಿದ್ದಾಗಿ ಹೇಳಿದ್ದಾರೆ.
ನಾಲ್ಕು ಜಿಲ್ಲೆಗಳಲ್ಲಿ ದಾಳಿ:
ಸದ್ಯ ಬೆಳಗಾವಿ ಕೃಷಿ ಇಲಾಖೆಯಲ್ಲಿ ವಿಜಿಲೆನ್ಸ್ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಈ ಹಿಂದೆ ಧಾರವಾಡ ಕೃಷಿ ಇಲಾಖೆಯ ಉಪ ನಿರ್ದೇಶಕರಾಗಿದ್ದ ರಾಜಶೇಖರ ಬಿಜಾಪುರ ಅವರ ಅಕ್ರಮ ಆಸ್ತಿಗಳಿಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕಾಯುಕ್ತ ಎಸ್.ಪಿ. ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಬೆಳಗಾವಿ, ಧಾರವಾಡ (ಕೆಳಗೇರಿ ಮತ್ತು ಸನ್ಮತಿನಗರದ ಮನೆಗಳು), ಹಾವೇರಿ ಮತ್ತು ಚಿತ್ರದುರ್ಗದಲ್ಲಿರುವ ಅವರ ಮನೆಗಳ ಮೇಲೆ ದಾಳಿ ನಡೆಸಲಾಯಿತು.
ಹಣವನ್ನು ಫ್ಲಶ್ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನ
ಧಾರವಾಡದ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದಾಗ ರಾಜಶೇಖರ ಬಿಜಾಪುರ ಅವರು ತಬ್ಬಿಬ್ಬಾಗಿದ್ದಾರೆ. ಅಧಿಕಾರಿಗಳನ್ನು ಅರ್ಧ ಗಂಟೆಗಳ ಕಾಲ ಮನೆಯ ಹೊರಗೆ ಕಾಯಿಸಿದ ಅವರು, ಒಳಗೆ ಸುಮಾರು ₹50,000 ಹಣವನ್ನು ಕಮೋಡ್‌ಗೆ ಹಾಕಿ ಫ್ಲಶ್ ಮಾಡಿ ಸಾಕ್ಷ್ಯ ನಾಶಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಕೇವಲ ₹50,000 ಫ್ಲಶ್ ಮಾಡಿರುವುದಾಗಿ ರಾಜಶೇಖರ ಹೇಳಿಕೊಂಡಿದ್ದರೂ, ಅದಕ್ಕಿಂತ ಹೆಚ್ಚಿನ ಹಣ ನಾಶವಾಗಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಶಂಕಿಸಿದ್ದು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ತನಿಖೆ ಮುಂದುವರೆಸಿದ ಲೋಕಾಯುಕ್ತ ಪೊಲೀಸರಿಗೆ ಭಾರೀ ಪ್ರಮಾಣದ ಅಕ್ರಮ ಆಸ್ತಿಗಳು ಬಯಲಾಗಿವೆ. ಸುಮಾರು 300 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿ ವಶಪಡಿಸಿಕೊಳ್ಳಲಾಗಿದೆ.ಅನೇಕ ಬ್ಯಾಂಕ್ ಪಾಸ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎಲ್ಲಾ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ.
ರಾಜಶೇಖರ ಅವರು ತಮ್ಮ ಅಕ್ರಮ ಗಳಿಕೆಯನ್ನು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ವಾಟರ್ ಸ್ಪೋರ್ಟ್ಸ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಮತ್ತು ಧಾರವಾಡದ ಸನ್ಮತಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಯೋಜನೆಯಲ್ಲಿಯೂ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪತ್ನಿ ಹೆಸರಿನಲ್ಲೂ ಅಕ್ರಮ ಆಸ್ತಿ ಪತ್ತೆ
ಕೋಟ್ಯಂತರ ರೂಪಾಯಿ ಮೌಲ್ಯದ ಈ ಎಲ್ಲಾ ಅಕ್ರಮ ಆಸ್ತಿಗಳನ್ನು ರಾಜಶೇಖರ ಅವರು ತಮ್ಮ ಪತ್ನಿ ಮತ್ತು ಸಂಬಂಧಿಕರ ಹೆಸರಿನಲ್ಲಿ ಗಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

