- Home
- Entertainment
- TV Talk
- ಮುದುಕಿ ಬೇಕಾದ್ರೂ ಅನ್ನಿ, ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್ ವಾರ್ನಿಂಗ್
ಮುದುಕಿ ಬೇಕಾದ್ರೂ ಅನ್ನಿ, ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್ ವಾರ್ನಿಂಗ್
ಹಿರಿಯ ನಟಿ ವಿದ್ಯಾ ಮೂರ್ತಿ ಅವರು 35ಕ್ಕೂ ಹೆಚ್ಚು ಸೀರಿಯಲ್ಗಳು, 500ಕ್ಕೂ ಹೆಚ್ಚು ನಾಟಕಗಳು ಮತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮನ್ನು 'ಆಂಟಿ' ಎಂದು ಕರೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

35ಕ್ಕೂ ಅಧಿಕ ಸೀರಿಯಲ್ಗಳಲ್ಲಿ ನಟನೆ
ಮಾಯಾಮೃಗ ಸೀರಿಯಲ್ನಿಂದ ಹಿಡಿದು ಮುಕ್ತ, ಮುಕ್ತ ಮುಕ್ತ, ದಂಡಪಿಂಡಗಳು , ಮೌನರಾಗ , ಪ್ರೀತಿ ಇಲ್ಲದ ಮೇಲೆ , ಮನ್ವಂತರ , ಪಾ.ಪ.ಪಾಂಡು , ಸಿಲ್ಲಿ ಲಲ್ಲಿ , ಅಡಚಣೆಗಾಗಿ ಕ್ಷಮಿಸಿ , ಜೋಗುಳ , ಜೊತೆಜೊತೆಯಲಿ , ನಿಗೂಢ ರಾತ್ರಿ , ಶಾಂತಂ ಪಾಪಂ , ಮನೆಯೊಂದು ಮೂರು ಬಾಗಿಲು , ಸ್ತ್ರೀ , ಮಗಳು ಜಾನಕಿ ಸೇರಿ ಹಿಟ್ಲರ್ ಕಲ್ಯಾಣದ ನಾಯಕ ಎಜೆಯ ತಾಯಿಯ ಪಾತ್ರ ಮಾಡುವವರೆಗೆ 35ಕ್ಕೂ ಅಧಿಕ ಸೀರಿಯಲ್ಗಳಲ್ಲಿ ನಟಿಸಿ ಮನೆ ಮಾತಾಗಿರುವವರು ನಟಿ ವಿದ್ಯಾ ಮೂರ್ತಿ.
ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯವರೆಗೆ...
ರಂಗಭೂಮಿಯಿಂದ ಹಿರಿತೆರೆ, ಕಿರುತೆರೆಯಲ್ಲಿ ಛಾಪು ಮೂಡಿಸಿದ ನಟಿ ಈಕೆ. 500ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಊರ್ವಶಿ , ಸ್ಪರ್ಶ , ಮತದಾನ , ವಂಶಿ , ಪೃಥ್ವಿ , ಕಿಚ್ಚ ಹುಚ್ಚ , ಚಂದು , ಬೇರು , ಮಾಲ್ಗುಡಿ ಡೇಸ್ , ಶಿವಾಜಿ ಸೂರತ್ಕಲ್ , ಅಣ್ಣಾಬಾಂಡ್ , ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಾರೆ, ಲೇಖನವನ್ನೂ ಬರೆಯುವ ಮೂಲಕ ಲೇಖಕಿಯೂ ಆಗಿದ್ದಾರೆ.
ಮುದುಕಿ ಬೇಕಾದ್ರೂ ಅನ್ನಿ
ಇಂತಿಪ್ಪ ನಟಿ, ಇದೀಗ ಕುತೂಹಲದ ಮಾತೊಂದನ್ನು ಹೇಳಿದ್ದಾರೆ. sowjanya.storesಗೆ ನೀಡಿರುವ ಸಂದರ್ಶನದಲ್ಲಿ ಪತಿ ಜೊತೆ ಆಗಮಿಸಿದ್ದ ನಟಿ, ನನ್ನನ್ನು ಆಂಟಿ, ಗಿಂಟಿ ಎಂದು ಕರೆಯಬೇಡಿ. ಅಜ್ಜಿ ಬೇಕಾದ್ದರೂ ಅನ್ನಿ. ಆದ್ರೆ ಆಂಟಿ ಮಾತ್ರ ಹೇಳಬೇಡಿ, ಮೇಡಂ ಅನ್ನೋದೂ ಇಷ್ಟ ಆಗಲ್ಲ. ಕನ್ನಡದಲ್ಲಿ ಏನು ಬೇಕಾದ್ರೂ ಕರೀರಿ. ಅಮ್ಮ ಅನ್ನಿ, ವಿದ್ಯಾಮ್ಮ ಅನ್ನಿ, ಅದೂ ಬೇಡ್ವಾ ಮುದುಕಿ ಬೇಕಾದರೂ ಅನ್ನಿ ಆದ್ರೆ ಆಂಟಿ ಮಾತ್ರ ಹೇಳಬೇಡಿ ಎನ್ನುವ ಮೂಲಕ ಈ ಶಬ್ದದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
70 ವರ್ಷದ ನಟಿ
ಅಂದಹಾಗೆ ನಟಿಯ ಕುರಿತು ಹೇಳುವುದಾದರೆ, 1956ರ ಜುಲೈ 18ರಂದು ಜನಿಸಿರುವ ಇವರಿಗೆ ಈಗ 70 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ ಅದೇ ಸೌಂದರ್ಯ ಕಾಪಾಡಿಕೊಂಡು ಬಂದಿದ್ದಾರೆ. ಜೊತೆಗೆ ಅದೇ ಪಟಪಟ ಮಾತು, ಹುಮ್ಮಸ್ಸು ಇನ್ನೂ ಅವರಲ್ಲಿ ಇದೆ. ಶಾಲೆ-ಕಾಲೇಜುಗಳ ದಿನದಿಂದಲೇ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದಿಟ್ಟ ನಟಿ ಆಗಲೇ ಸಿಕ್ಕಾಪಟ್ಟೆ ಬಹುಮಾನ ತರ್ತಿದ್ರಂತೆ.
ಭಗವದ್ಗೀತೆ ಚಿತ್ರದಲ್ಲಿ ಪಾತ್ರ
ಡಿಗ್ರಿಯಾದ ಮೇಲೆ ಮದುವೆ, ಮಕ್ಕಳು ಆಯಿತು. ಬಣ್ಣದ ಲೋಕದಿಂದ ದೂರವಾದರು. ಅಮ್ಮ ತೀರಿಕೊಂಡ ಮೇಲೆ, ಖಿನ್ನತೆಗೆ ಜಾರಿದಾಗ ಪತಿಯೇ , ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ಜಿ.ವಿ.ಅಯ್ಯರ್ ನಿರ್ದೇಶನದ ಭಗವದ್ಗೀತೆ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಗಿಟ್ಟಿಸಿಕೊಂಡರು.
ನಾಟಕಗಳಲ್ಲಿ ಅಭಿನಯ
ಬಳಿಕ ಗೀತಾ ರಾಮಾನುಜಂ ನಿರ್ದೇಶನದ ಯಶೋಧರಾ ನಾಟಕದಲ್ಲಿ ಯಶೋಧರೆ ಪಾತ್ರ ಮಾಡಿದರು. ಅಲ್ಲಿಂದ ವಿದ್ಯಾಮೂರ್ತಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಂಸಾರ, ವೃತ್ತಿ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

