ಪೆನ್ಸಿಲ್, ಪೆನ್, ಎಣ್ಣೆ ಎಂಥದ್ದೇ ಕಲೆ ಇದ್ದರೂ ತಕ್ಷಣವೇ ತೆಗೆದುಹಾಕುವ ಮನೆಮದ್ದುಗಳಿವು
Wall Cleaning Hacks: ಮೊನ್ನೆ ಮೊನ್ನೆಯಷ್ಟೇ ಪೇಂಟ್ ಮಾಡಿದವರಿಗೆ ಪದೇ ಪದೇ ಈ ರೀತಿ ಗೋಡೆಗಳಿಗೆ ಬಣ್ಣ ಬಳಿಯಬೇಕೆಂದರೆ ಎಷ್ಟು ತ್ರಾಸಲ್ಲವೇ. ಹಾಗಾಗಿ ಪ್ರತಿಯೊಬ್ಬ ಗೃಹಿಣಿಯೂ ಈ ಕಲೆಗಳನ್ನು ತೆಗೆದು ಹಾಕುವುದನ್ನೇ ದೊಡ್ಡ ಸಮಸ್ಯೆಯೆಂದು ಅಂದುಕೊಳ್ಳುತ್ತಾರೆ.

ಎಂಥದ್ದೇ ಕಲೆ ಇರಲಿ ಸುಲಭವಾಗಿ ತೆಗೆಯುತ್ತೆ
ಮಕ್ಕಳು ಗೊತ್ತೋ, ಗೊತ್ತಿಲ್ಲದೆಯೋ ಅಥವಾ ಆಟಕ್ಕೋ ಗೋಡೆಗಳ ಮೇಲೆ ಪೆನ್ಸಿಲ್ ಅಥವಾ ಪೆನ್ ತೆಗೆದುಕೊಂಡು ಗೀಚಲು ಪ್ರಾರಂಭಿಸುತ್ತಾರೆ. ಮನೆ ಸ್ವಂತದ್ದಾಗಲೀ, ಬಾಡಿಗೆಯೇ ಆಗಲಿ ಈ ಮೊಂಡುತನದ ಕಲೆಗಳು ನೋಡಲು ಅಷ್ಟು ಚೆನ್ನಾಗಿ ಕಾಣಲ್ಲ. ಮತ್ತೊಂದೆಡೆ ಎಣ್ಣೆ ಅಥವಾ ಧೂಳಿನಿಂದ ಉಂಟಾಗುವ ಕಲೆಯನ್ನು ಗೋಡೆಯ ಮೇಲಿಂದ ತೆಗೆದುಹಾಕುವುದು ಅಷ್ಟು ಸುಲಭವಲ್ಲ. ನಾವು ಪೇಂಟ್ ಬಳಕೆ ಮಾಡಿಯೇ ಅವನ್ನು ತೆಗೆದುಹಾಕಬೇಕಾಗುತ್ತದೆ ಅಲ್ಲವೇ, ಆದರೆ ಮೊನ್ನೆ ಮೊನ್ನೆಯಷ್ಟೇ ಪೇಂಟ್ ಮಾಡಿದವರಿಗೆ ಪದೇ ಪದೇ ಈ ರೀತಿ ಗೋಡೆಗಳಿಗೆ ಬಣ್ಣ ಬಳಿಯಬೇಕೆಂದರೆ ಎಷ್ಟು ತ್ರಾಸಲ್ಲವೇ. ಹಾಗಾಗಿ ಪ್ರತಿಯೊಬ್ಬ ಗೃಹಿಣಿಯೂ ಈ ಕಲೆಗಳನ್ನು ತೆಗೆದು ಹಾಕುವುದನ್ನೇ ದೊಡ್ಡ ಸಮಸ್ಯೆಯೆಂದು ಅಂದುಕೊಳ್ಳುತ್ತಾರೆ.
ಆದರೆ ಇನ್ನು ಮುಂದೆ ನೀವು ಈ ವಿಚಾರವಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಮನೆಮದ್ದುಗಳನ್ನ ಉಪಯೋಗಿಸಿಕೊಂಡು ಗೋಡೆಗಳ ಮೇಲೆ ಅದು ಎಂಥದ್ದೇ ಕಲೆ ಇರಲಿ ಸುಲಭವಾಗಿ ತೆಗೆದುಹಾಕಬಹುದಾಗಿದೆ.
ಟೂತ್‌ಪೇಸ್ಟ್
ಒಂದು ವೇಳೆ ಮಕ್ಕಳು ಗೋಡೆಗಳ ಮೇಲೆ ಪೆನ್ನು ಮತ್ತು ಪೆನ್ಸಿಲ್ ಗುರುತುಗಳನ್ನು ಮಾಡಿದರೆ ಟೂತ್‌ಪೇಸ್ಟ್ ಬಳಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಬಿಳಿ ಟೂತ್‌ಪೇಸ್ಟ್ ಅನ್ನು ಕಲೆಯ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ಮೃದುವಾದ ಬಟ್ಟೆಯಿಂದ ಒರೆಸಿ. ಇದು ಕ್ರಮೇಣ ಕಲೆಯನ್ನು ಲೈಟಾಗಿ ಕಾಣುವಂತೆ ಮಾಡುತ್ತದೆ. ಕೊನೆಗೆ ಗೋಡೆಯ ಸೌಂದರ್ಯವನ್ನು ಹಾಗೆಯೇ ಇಡುತ್ತದೆ.
ನಿಂಬೆ ರಸ ಅಥವಾ ವಿನೆಗರ್
ಈ ಕಲೆ ಮಾತ್ರವಲ್ಲದೆ, ಅಡುಗೆಮನೆಯ ಗೋಡೆಗಳ ಮೇಲೆ ಎಣ್ಣೆ ಅಥವಾ ಗ್ರೀಸ್ ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ನಿಂಬೆ ರಸ ಅಥವಾ ವಿನೆಗರ್ ಅತ್ಯುತ್ತಮ ಮನೆಮದ್ದು. ಇದನ್ನ ಹತ್ತಿ ಅಥವಾ ಬಟ್ಟೆಯ ಮೇಲೆ ಹಚ್ಚಿ ಕಲೆಯನ್ನು ನಿಧಾನವಾಗಿ ಒರೆಸಿ. ಸ್ವಲ್ಪ ಸಮಯದಲ್ಲಿ ಎಣ್ಣೆಯುಕ್ತ ಗುರುತುಗಳು ಮಾಯವಾಗುತ್ತವೆ ಮತ್ತು ಗೋಡೆಗಳು ಫಳ ಫಳ ಹೊಳೆಯುತ್ತವೆ.
ಪಾತ್ರೆ ತೊಳೆಯುವ ಲಿಕ್ವಿಡ್
ಹಾಗೆಯೇ ಗೋಡೆಯ ಮೇಲೆ ಧೂಳು ಅಥವಾ ಸಣ್ಣ ಕಲೆಗಳಿದ್ದರೆ ಅದನ್ನು ಸ್ವಚ್ಛಗೊಳಿಸಲು ಸೋಪಿನ ನೀರನ್ನು ಬಳಸಿ. ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಸೇರಿಸಿ ಮತ್ತು ಸ್ಪಂಜಿನೊಂದಿಗೆ ಗೋಡೆಯನ್ನು ಸ್ವಚ್ಛಗೊಳಿಸಿ. ಇದು ಗೋಡೆಗಳನ್ನು ಸ್ವಚ್ಛಗೊಳಿಸುವುದಲ್ಲದೆ, ಅವುಗಳ ಮೇಲೆ ಸಂಗ್ರಹವಾಗಿರುವ ಕೊಳೆಯನ್ನು ಸಹ ಸುಲಭವಾಗಿ ತೆಗೆದುಹಾಕುತ್ತದೆ.
ಬ್ಲೀಚ್ ಮತ್ತು ನೀರಿನ ಮಿಶ್ರಣ
ಕೆಲವೊಮ್ಮೆ ಗೋಡೆಗಳ ಮೇಲೆ ಬೂಸ್ಟ್ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಹೆಚ್ಚಾಗಿ ಮಳೆಗಾಲದಲ್ಲಿ ಸಂಭವಿಸುತ್ತದೆ. ಅವುಗಳನ್ನು ತೆಗೆದುಹಾಕಲು, ಬ್ಲೀಚ್ ಮತ್ತು ನೀರಿನ ಮಿಶ್ರಣವು ಅತ್ಯಂತ ಪರಿಣಾಮಕಾರಿ ಮನೆಮದ್ದು. ಇದನ್ನು ಉಪಯೋಗಿಸುವಾಗ ಮಾತ್ರ ಸ್ಪ್ರೇ ಬಾಟಲಿಯಲ್ಲಿ ಮಿಶ್ರಣವನ್ನ ಹಾಕಿ ಬೂಸ್ಟ್ ಇರುವ ಭಾಗದ ಮೇಲೆ ಸಿಂಪಡಿಸಿ ಮತ್ತು ಒಣಗಲು ಬಿಡಿ. ಇದು ವಾಸನೆಯನ್ನು ಸಹ ತೆಗೆದುಹಾಕುತ್ತದೆ ಮತ್ತು ಗೋಡೆಗಳು ಸ್ವಚ್ಛವಾಗಿ ಕಾಣಲು ಪ್ರಾರಂಭಿಸುತ್ತವೆ.
ಒದ್ದೆಯಾದ ಬಟ್ಟೆಯಿಂದ ಒರೆಸಿ
ಇದಲ್ಲದೆ, ಸ್ವಚ್ಛಗೊಳಿಸಿದ ನಂತರ ಗೋಡೆಗಳ ಹೊಳಪನ್ನು ಕಾಪಾಡಿಕೊಳ್ಳಲು, ಕಾಲಕಾಲಕ್ಕೆ ಅವುಗಳನ್ನು ಒದ್ದೆಯಾದ ಬಟ್ಟೆಯಿಂದ ನಿಧಾನವಾಗಿ ಒರೆಸುವುದು ಅವಶ್ಯಕ. ಈ ಸರಳ ಕ್ರಮಗಳು ಗೋಡೆಗಳನ್ನು ದೀರ್ಘಕಾಲದವರೆಗೆ ಸ್ವಚ್ಛವಾಗಿ ಮತ್ತು ಸುಂದರವಾಗಿಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.