ಆಯುರ್ವೇದದ ಪ್ರಕಾರ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು ಆರೋಗ್ಯಕ್ಕೆ ವರದಾನ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಸುಧಾರಿಸುತ್ತದೆ, ಒತ್ತಡ ಕಡಿಮೆ ಮಾಡುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ. ಬೆಳಗಿನ ಸೂರ್ಯೋದಯದ ಸಮಯದಲ್ಲಿ ನಡೆಯುವುದು ಉತ್ತಮ.

ಈಗಂತೂ ಎಲ್ಲರೂ ಬ್ಯುಸಿ. ಈ ಬ್ಯುಸಿ ಜೀವನದ ಮಧ್ಯೆ ಜನರು ತಮ್ಮ ಆರೋಗ್ಯದ ಬಗ್ಗೆಯೇ ಕಾಳಜಿ ವಹಿಸುವುದನ್ನು ಮರೆತಿದ್ದಾರೆ. ಹಾಗಾಗಿ precaution is better than cure ಎನ್ನುವ ಹಾಗೆ ಗಂಭೀರ ಮತ್ತು ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗುವುದನ್ನು ತಪ್ಪಿಸಲು ನೀವು ಬಯಸಿದರೆ ನಿಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ದೈಹಿಕ ಚಟುವಟಿಕೆಗಳನ್ನು ಸೇರಿಸಿಕೊಳ್ಳಬೇಕು. ಆಯುರ್ವೇದದ ಪ್ರಕಾರ, ನೀವು ಪ್ರತಿದಿನ ನಡೆಯುವುದರಿಂದ ನಿಮ್ಮ ಆರೋಗ್ಯ ಮತ್ತು ದೇಹವನ್ನು ಬಲಪಡಿಸಬಹುದು. ಹಾಗಾದರೆ ನಡೆಯಲು ಸರಿಯಾದ ಮಾರ್ಗ ಮತ್ತು ಸರಿಯಾದ ಸಮಯ ಯಾವುದು ತಿಳಿಯೋಣ ಬನ್ನಿ...

ಆಯುರ್ವೇದ ಹೇಳುವುದೇನು? 
ಆಯುರ್ವೇದದಲ್ಲಿ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸವನ್ನು ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗಿದೆ. ನಮ್ಮ ಅಜ್ಜಿಯರ ಕಾಲದಿಂದಲೂ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಸಲಹೆ ನೀಡಲಾಗುತ್ತಿತ್ತು. ಹುಲ್ಲಿನ ಮೇಲೆ ನಡೆಯುವುದರಿಂದ ನಿಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯದ ಮೇಲೂ ಅನೇಕ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. 

ಪ್ರತಿದಿನ ಹುಲ್ಲಿನ ಮೇಲೆ ನಡೆಯುವ ಮೂಲಕ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಇದಲ್ಲದೆ, ಹುಲ್ಲಿನ ಮೇಲೆ ನಡೆಯುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಮತ್ತು ನಿಮ್ಮ ಮನಸ್ಸು ನಿರಾಳವಾಗಿರುತ್ತದೆ. ದೃಷ್ಟಿ ಸುಧಾರಿಸಲು ಈ ನಿಯಮವನ್ನು ಸಹ ಅನುಸರಿಸಬಹುದು. ಇಷ್ಟೇ ಅಲ್ಲ, ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಆಯುರ್ವೇದದ ಪ್ರಕಾರ, ಹುಲ್ಲಿನ ಮೇಲೆ ನಡೆಯುವುದು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

ಉತ್ತಮ ಸಮಯ ಯಾವುದು?
ಹುಲ್ಲಿನ ಮೇಲೆ ನಡೆಯಲು ಬೆಳಗಿನ ಸಮಯ ಸೂಕ್ತವೆಂದು ಪರಿಗಣಿಸಲಾಗಿದೆ. ನಡೆಯಲು ಉತ್ತಮ ಸಮಯವೆಂದರೆ ಬೆಳಗ್ಗೆ ಸೂರ್ಯೋದಯದ ಸಮಯ. ಸೂರ್ಯೋದಯಕ್ಕೂ ಮುನ್ನ ಬೆಳಗ್ಗೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬಹುದು. ಸೂರ್ಯ ಉದಯಿಸಿದ ತಕ್ಷಣ ನೀವು ಹೊರಗೆ ನಡೆಯಲು ಹೋಗಬೇಕು. ಈ ಸಮಯದಲ್ಲಿ ವಾತಾವರಣದಲ್ಲಿ ಉತ್ತಮ ಪ್ರಮಾಣದ ಆಮ್ಲಜನಕ ಇರುತ್ತದೆ. ಹಾಗೆಯೇ ಬೆಳಗ್ಗೆ 8 ಗಂಟೆಯೊಳಗೆ ನಡಿಗೆಯನ್ನು ಪೂರ್ಣಗೊಳಿಸಬೇಕು. ಒಂದು ತಿಂಗಳ ಕಾಲ ಪ್ರತಿದಿನ ಬೆಳಗ್ಗೆ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ ನಿಯಮವನ್ನು ಅನುಸರಿಸಿ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ನೀವೇ ನೋಡಿ. ಈ ರೀತಿಯಾಗಿ ನೀವು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ವಿಟಮಿನ್ ಡಿ ಕೂಡ ಪಡೆಯಬಹುದು ಮತ್ತು ನಿಮ್ಮ ಮೂಳೆಗಳು ಸಹ ಅದರಿಂದ ಪ್ರಯೋಜನ ಪಡೆಯಬಹುದು. 

ಸೀಸನ್‌ಗೆ ತಕ್ಕ ಹಾಗೆ...
ನಡಿಗೆ ಅಥವಾ ಚುರುಕಾದ ನಡಿಗೆಯಂತಹ ವ್ಯಾಯಾಮಗಳು ಸುಲಭ ಮಾತ್ರವಲ್ಲದೆ, ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಪ್ರಯೋಜನಕಾರಿ. ಸೀಸನ್‌ಗೆ ತಕ್ಕ ಹಾಗೆ ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಡೆಯಲು ಹೋಗಬಹುದು. ಉದಾಹರಣೆಗೆ ದಿನದ ಯಾವ ಸಮಯದಲ್ಲಿ ಮತ್ತು ಎಷ್ಟು ಹೊತ್ತು ನಡೆಯಬೇಕು ಎಂಬುದು ತಿಳಿದಿರಬೇಕು. ಸಮಯವಲ್ಲದ ಸಮಯದಲ್ಲಿ ತಪ್ಪಾಗಿ ನಡೆದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು ಆದ್ದರಿಂದ, ನಡೆಯುವ ಮೊದಲು ನೀವು ಯಾವಾಗ ನಡೆಯಬೇಕು ಮತ್ತು ಯಾವಾಗ ನಡೆಯಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಬೆಳಗ್ಗೆ ಬದಲು ಸಂಜೆ ನಡೆಯಲು ಇಷ್ಟಪಡುವವರು ಸಂಜೆ 4 ಗಂಟೆಯ ನಂತರ ಮತ್ತು 6-8 ಗಂಟೆಯೊಳಗೆ ನಡೆಯಲು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಗಾಳಿಯಲ್ಲಿ ತಂಪು ಹೆಚ್ಚಾಗಲು ಪ್ರಾರಂಭವಾಗುತ್ತದೆ ಮತ್ತು ಮಾಲಿನ್ಯದ ಮಟ್ಟವೂ ಕಡಿಮೆಯಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ದೇಹದ ಸ್ನಾಯುಗಳು ಸಂಜೆ 4-7 ಗಂಟೆಯ ನಡುವೆ ತುಂಬಾ ಮೃದುವಾಗಿರುತ್ತವೆ. ಇದರಿಂದ ನಿಮಗೆ ನಡೆಯಲು ಸುಲಭವಾಗಬಹುದು ಮತ್ತು ಅದು ನಿಮ್ಮ ಆರೋಗ್ಯಕ್ಕೂ ಪ್ರಯೋಜನಗಳನ್ನು ನೀಡುತ್ತದೆ.