ಕೇವಲ 4 ವರ್ಷದ ಶ್ರೇಯಾ ಕೆ ಸಿಂಗ್ ಎಂಬ ಬಾಲಕಿ ತನ್ನ ಬಿರುಸಿನ ಬ್ಯಾಟಿಂಗ್ ಶೈಲಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಈಕೆಯ ವೈರಲ್ ವೀಡಿಯೋಗೆ ಎಂ.ಎಸ್. ಧೋನಿಯಂತಹ ದಿಗ್ಗಜರೂ ಮೆಚ್ಚುಗೆ ಸೂಚಿಸಿದ್ದು, ಅನೇಕರು ಈಕೆಯನ್ನು ಮಹಿಳಾ ಕ್ರಿಕೆಟ್ನ ಭವಿಷ್ಯದ ತಾರೆ ಎಂದು ಕರೆಯುತ್ತಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೇನು ಯಾವುದೇ ಕಡಿಮೆ ಇಲ್ಲ, ಪ್ರತಿ ದಿನವೂ ಪ್ರತಿಗಲ್ಲಿಯಲ್ಲಿಯೂ ಕ್ರಿಕೆಟ್ ಪ್ರತಿಭೆಗಳು ಹುಟ್ಟುತ್ತಲೇ ಇರುತ್ತವೆ. ಆದರೆ ಕೆಲವೇ ಕೆಲವರಿಗೆ ಮಾತ್ರ ನಿಜವಾದ ಅವಕಾಶ ಸಿಗುತ್ತದೆ. ಹಾಗೆಯೇ ಇಲ್ಲೊಂದು ಕಡೆ ಪುಟ್ಟ ಕ್ರಿಕೆಟ್ ಪೋರಿಯೊಬ್ಬಳು ತನ್ನ ಬಿರುಸಿನ ಬ್ಯಾಟಿಂಗ್ ಶೈಲಿಯಿಂದ ಈಗ ಎಲ್ಲರ ಗಮನ ಸೆಳೆದಿದ್ದು, ಈ ಪುಟ್ಟ ಬಾಲೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಈ ಪುಟ್ಟ ಪೋರಿಯ ಹೆಸರು ಶ್ರೇಯಾ ಕೆ ಸಿಂಗ್, ಕೇವಲ 4 ವರ್ಷದ ಈ ಪುಟಾಣಿಯ ಬ್ಯಾಟಿಂಗ್ಗೆ ಕ್ರಿಕೆಟ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈಕೆ ಒಂದೊಂದು ಬಾಲ್ನ್ನು ಕೂಡ ಮೈದಾನಕ್ಕೆ ಅಟ್ಟುವ ಶೈಲಿ ಬಹಳ ವಿಭಿನ್ನವಾಗಿದ್ದು, ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾರೆ. shreyaksingh.28 ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಈಕೆ ಹೊಂದಿದ್ದು, ಈಕೆಯ ಈ ಇನ್ಸ್ಟಾ ಖಾತೆಯ ತುಂಬೆಲ್ಲಾ ಈಕೆ ಕ್ರಿಕೆಟ್ ಆಡುತ್ತಿರುವ ವಿಭಿನ್ನ ಶೈಲಿಯ ಹಲವು ವೀಡಿಯೋಗಳನ್ನು ನೋಡಬಹುದಾಗಿದೆ.
ವೀಡಿಯೋದಲ್ಲಿ ಕಾಣುವಂತೆ ಪುಟ್ಟ ಬಾಲಕಿ ಬೀಸಿ ಬಂದ ಚೆಂಡಿಗೆ ಒಂದರ ಮೇಲೊಂದರಂತೆ ಸಖತ್ ಬ್ಯಾಟಿಂಗ್ ಮಾಡುತ್ತಿದ್ದು, ವೀಡಿಯೋ ನೋಡಿದ ಅನೇಕರು ಬೆರಗಾಗಿದ್ದಾರೆ. ಬಾಲಕಿಯ ಈ ಕ್ರಿಕೆಟ್ ಪ್ರತಿಭೆಗೆ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಕೂಡ ಮೆಚ್ಚುಗೆ ಸೂಚಿಸಿ ವಾಹ್ ಎಂದು ಕಾಮೆಂಟ್ ಮಾಡಿದ್ದಾರೆ. ಉಫ್ ದೇಹದ ಸಮತೋಲನ ಚೆನ್ನಾಗಿದೆ. ತಲೆ.. ಕಣ್ಣುಗಳ ಕೆಳಗೆ ಆಟವಾಡಿದ್ದಾಳೆ. ಪರಿಪೂರ್ಣ ಪಾದಗಳ ಚಲನೆ ಸೂಪರ್ ಎಂದು ಬರೆದ ಒಬ್ಬರು ಕಾಮೆಂಟ್ ಮಾಡಿದ್ದು, ಇಂಡಿಯಾ ಕ್ರಿಕೆಟ್ ಟೀಂಗೆ ಟ್ಯಾಗ್(@indiancricketteam)ಮಾಡಿ ಆಕೆಯ ಮೇಲೆ ನಿಗಾ ಇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಇನ್ನೂ ಅನೇಕರು ಆಕೆಯ ಆಟ ನೋಡಿ ಕಾಮೆಂಟ್ ಮಾಡಿದ್ದು, ಈಕೆಯೊಬ್ಬಳು ನ್ಯಾಚುರಲ್ ಗರ್ಲ್, ನಮ್ಮ ಕ್ರಿಕೆಟ್ನ ಭವಿಷ್ಯ ಇಲ್ಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈಕೆ ಲಾಂಗ್ ಹ್ಯಾಂಡಲ್ನ್ನು ಕೂಡ ಚೆನ್ನಾಗಿ ನಿಭಾಯಿಸುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಆಕೆಯನ್ನು ಹರಂಪ್ರೀತ್ ಕೌರ್ಗೆ ಹಾಗೂ ಇನ್ನೂ ಕೆಲವರು ಸ್ಮತಿ ಮಂಧನಾಗೆ ಹೋಲಿಸಿದ್ದಾರೆ. ಈಕೆ ಮುಂದಿನ ಮಹಿಳಾ ಕ್ರಿಕೆಟರ್ ಆಗಲಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಗ್ರಾಹಕನ ಸೂಚನೆಯನ್ನು ತಪ್ಪಾಗಿ ಅರ್ಥೈಸಿದ ಜೊಮ್ಯಾಟೋ: ಕೇಕ್ ಮೇಲೆ ಬರೆದಿದ್ದೇನು?
ಈಕೆಯ ಇನ್ಸ್ಟಾಗ್ರಾಮ್ ಪೇಜ್ನಲ್ಲಿಈಕೆ ಕ್ರಿಕೆಟ್ ಅಭ್ಯಾಸ ಮಾಡುವ ಹಲವು ವೀಡಿಯೋಗಳಿವೆ. ಹಾಗಂತ ಶ್ರೇಯಾ ಕೆ ಸಿಂಗ್ದು ಏನೂ ಪರಿಶ್ರಮವಿಲ್ಲದೇ ಸಿಕ್ಕಂತ ಯಶಸ್ಸು ಇದಲ್ಲ, ಕ್ರಿಕೆಟ್ ಪ್ರಾಕ್ಟಿಸ್ಗಾಗಿ ಮುಂಜಾನೆ 6 ಗಂಟೆಗೆ ಏಳುವ ಈಕೆ 15 ಕಿಲೋ ಮೀಟರ್ ಪ್ರಯಾಣಿಸಿ ಅಭ್ಯಾಸ ಮಾಡುವ ಮೈದಾನವನ್ನು ತಲುಪುತ್ತಾಳೆ. ನಂತರಮೊದಲಿಗೆ 1 ಕಿಲೋ ಮೀಟರ್ ವಾಕ್ ಮಾಡುತ್ತಾಳೆ. ಸರಿಯಾಗಿ 8 ಗಂಟೆಗೆ ರೆಡಿಯಾಗಿ ಅಭ್ಯಾಸ ಶುರು ಮಾಡುತ್ತಾಳೆ. ಈಕೆಯ ಕ್ರಿಕೆಟ್ ವೀಡಿಯೋಗಳಿಗೆ ದೆಹಲಿ ಐಪಿಎಲ್ ಟೀಂನ ಅಧಿಕೃತ ಖಾತೆಯಿಂದಲೂ ಕಾಮೆಂಟ್ ಬಂದಿದೆ. ಅನೇಕರು ಈಕೆಯಲ್ಲಿ ಭವಿಷ್ಯದ ಕ್ರಿಕೆಟ್ ತಾರೆಯನ್ನು ಕಾಣುತ್ತಿದ್ದು ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: 8 ಕೋಟಿ ಮೌಲ್ಯದ ಆನ್ಲೈನ್ ವಂಚನೆ ಬಗ್ಗೆ ಡೆತ್ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡ ಮಾಜಿ ಐಜಿ


