ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶಾಹಿದ್ ಅಫ್ರಿದಿ ಭಾರತದ ಸೇನೆಯ ಮೇಲೆ ಆರೋಪಿಸಿದ್ದಾರೆ. ಈ ಹೇಳಿಕೆಗೆ ಅಸಾದುದ್ದೀನ್ ಒವೈಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಒವೈಸಿ, ಅಫ್ರಿದಿಯನ್ನು 'ಜೋಕರ್' ಎಂದು ಕರೆದಿದ್ದಾರೆ.

ಹೈದರಾಬಾದ್: ಜಮ್ಮುಕಾಶ್ಮೀರದಲ್ಲಿ ಕಳೆದ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಪು, ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಘಟನೆಯನ್ನು ದೇಶಾದ್ಯಂತ ಜಾತಿ-ಧರ್ಮ ಮೀರಿ ಖಂಡಿಸಲಾಗುತ್ತಿದೆ. ಇದೀಗ ಇಡೀ ದೇಶವೇ ಈ ಭಯೋತ್ಪಾದಕರು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸುಯತ್ತಿದೆ.

ಇನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಈ ಘಟನೆಯ ಕುರಿತಂತೆ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ಮಾಡಲು ಹೋಗಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಭಾರತದ ಸೇನೆ ಕಾರಣ ಎಂದು ವಿಚಿತ್ರ ಆರೋಪ ಮಾಡಿದ್ದಾರೆ

ಭಾರತವೇ ಸ್ವತಃ ಭಯೋತ್ಪಾದನೆಯನ್ನು ನಡೆಸುವ ಮೂಲಕ ತನ್ನದೇ ಜನರು ಕೊಂದು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಯಾವುದೇ ದೇಶ ಅಥವಾ ಧರ್ಮ ಭಯೋತ್ಪಾದನೆಯನ್ನು ಬೆಂಬಲಿಸಲ್ಲ. ನಾವು ಶಾಂತಿಪ್ರಿಯರಾಗಿದ್ದು, ಇಸ್ಲಾಂ ನಮಗೆ ಶಾಂತಿಯನ್ನು ಕಲಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಚಟುವಟಿಕೆಗಳನ್ನು ಬೆಂಬಲಿಸಲ್ಲ ಎಂದು ಪಾಕಿಸ್ತಾನದ ಖಾಸಗಿ ಚಾನೆಲ್‌ವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. 

ನಿಮ್ಮ 8 ಲಕ್ಷ ಸೈನಿಕರು... ತನ್ನದೇ ಜನರನ್ನು ಕೊಲ್ಲಲು ಭಾರತದಿಂದಲೇ ಭಯೋತ್ಪಾದನೆ: ಶಾಹಿದ್ ಆಫ್ರಿದಿ

ಭಾರತದಲ್ಲಿ ಪಟಾಕಿಯ ಶಬ್ದ ಕೇಳಿ ಬಂದರೂ ಅದಕ್ಕೆ ಪಾಕಿಸ್ತಾನವೇ ಕಾರಣ ಎನ್ನಲಾಗುತ್ತದೆ. ಕಾಶ್ಮೀರದಲ್ಲಿ ನಿಮ್ಮ ಬಳಿ 8 ಲಕ್ಷ ಸೈನಿಕರಿದ್ದಾರೆ. ಆದರೂ ಈ ಘಟನೆ ಹೇಗೆ ಅಯಿತು. ಇದರರ್ಥ ನೀವು ಅಸಮರ್ಥರು ಎಂದಲ್ಲವೇ. ಜನರಿಗೆ ರಕ್ಷಣೆ ನೀಡಲು ನೀವು ಸಮರ್ಥರಲ್ಲ ಎಂದು ಅರ್ಥವಲ್ಲವೇ ಎಂದು ಶಾಹಿದ್ ಅಫ್ರಿದಿ ಪ್ರಶ್ನಿಸಿದ್ದಾರೆ.

ಇದೀಗ ಅಫ್ರಿದಿ ಮಾತಿಗೆ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ. ಒವೈಸಿ, ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿಯನ್ನು ಜೋಕರ್ ಎಂದು ಕರೆದಿದ್ದಾರೆ. ಅಫ್ರಿದಿಯ ಅವರ ಹೇಳಿಕೆ ಬಗ್ಗೆ ನೀವೇನಂತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಒವೈಸಿ, ಅವನೊಬ್ಬ ಜೋಕರ್ ಎಂದು ಕರೆದಿದ್ದಾರೆ.

ಇನ್ನು ಇದೇ ವೇಳೆ ಒವೈಸಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋ ಅವರಿಗೂ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ನಿಮ್ಮ ತಾಯಿ(ಬೆನಜಿರ್ ಭುಟ್ಟೋ) ಅವರ ಮೇಲೆ ದಾಳಿಯಾದಾಗ ನೀವು ಅದನ್ನು ಆತಂಕವಾದ ಎಂದು ಕರೆಯುತ್ತೀರ. ಹಾಗಿದ್ರೆ ನಮ್ಮ ತಾಯಿ ಹಾಗೂ ಸಹೋದರಿಯರ ಮೇಲೆ ದಾಳಿಯಾದ್ರೆ ಅದು ಆತಂಕವಾದ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಮದ್ವೆಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡ ಮುಸ್ಲಿಂ ಜೋಡಿ!

ಏನಿದು ಪಹಲ್ಗಾಮ್ ದಾಳಿ:

ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಕಳೆದ ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್‌ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ್ದಾರೆ.

ಮೃತ ಕನ್ನಡಿಗರನ್ನು ಶಿವಮೊಗ್ಗದ ಉದ್ಯಮಿ ಮಂಜುನಾಥ್‌ ರಾವ್‌ ಮತ್ತು ಬೆಂಗಳೂರಿನ ಭರತ್‌ ಭೂಷಣ್‌ ಕೂಡಾ ಸೇರಿದ್ದಾರೆ. ಮೃತರಲ್ಲಿ ಇಬ್ಬರು ವಿದೇಶಿಯರು ಕೂಡಾ ಇದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿಯಾದಿ ಗಣ್ಯರು ಕಟುನುಡಿಗಳಲ್ಲಿ ಖಂಡಿಸಿದ್ದಾರೆ. 

ಈ ದಾಳಿಯನ್ನು ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕದ, ಪುಲ್ವಾಮಾದಲ್ಲಿ ಯೋಧರ ಗುರಿಯಾಗಿಸಿ ನಡೆಸಿದ ಬಳಿಕ ಅತಿದೊಡ್ಡ ದಾಳಿಯಾಗಿದೆ. ಜೊತೆಗೆ ಕಾಶ್ಮಿರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಕಳೆದ 25 ವರ್ಷಗಳಲ್ಲೇ ನಡೆಸಿದ ಅತಿದೊಡ್ಡ ದಾಳಿ ಎಂದು ಬಣ್ಣಿಸಲಾಗಿದೆ