ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಯದೆ ಬಿಜೆಪಿ 2027ರಲ್ಲಿ ನಡೆಯಲಿರುವ 7 ರಾಜ್ಯಗಳ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದು, ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ನವದೆಹಲಿ: ದೇಶ ಹಾಗೂ ಅನ್ಯ ಪಕ್ಷಗಳ ಗಮನವೆಲ್ಲಾ ಪಂಚರಾಜ್ಯ ಚುನಾವಣೆ ಮತ್ತು ಅವುಗಳ ಫಲಿತಾಂಶದ ಮೇಲೆ ನೆಟ್ಟಿರುವ ಹೊತ್ತಿನಲ್ಲೇ ಬಿಜೆಪಿಯು ಮುಂದಿವ ವರ್ಷ 7 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ತಯಾರಿಯನ್ನು ಆರಂಭಿಸಿದೆ. ಇದು, ‘ಬಿಜೆಪಿ ಎಂದೂ ಮಲಗದು’ ಎಂಬ ಮಾತನ್ನು, ಕಳೆದ 3-4 ದಿನದಲ್ಲಿ ಆಗಿರುವ ಕೆಲಸ ಸಾಬೀತುಪಡಿಸುತ್ತದೆ ಮೂಲಗಳು ಹೇಳಿವೆ.
‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ನವೀನ್ ಬೇರುಮಟ್ಟದಲ್ಲಿ ಕೆಲಸಗಳನ್ನು ಆರಂಭಿಸಿದ್ದಾರೆ. ಬಿಜೆಪಿಯ ಪಾಲಿಗೆ ಒಂದು ಚುನಾವಣೆಯ ಮುಕ್ತಾಯವು ಮುಂದಿನ ಎಲೆಕ್ಷನ್ ತಯಾರಿಯ ಆರಂಭವಾಗಿದೆ. ಪಕ್ಷವು ವರ್ಷದ ಎಲ್ಲಾ ದಿನ 24*7 ಕೆಲಸ ಮಾಡುತ್ತಿರುತ್ತದೆಯೇ ಹೊರತು, ಬೇರೆ ಪಾರ್ಟಿಗಳಂತೆ ಕಾದುನೋಡುವ ತಂತ್ರವನ್ನು ಅನುಸರಿಸುವುದಿಲ್ಲ. ಪಂಚರಾಜ್ಯಗಳಲ್ಲಿ ಗೆಲುವು ಖಚಿತ. ಈಗ ನಮ್ಮ ಗುರಿಯಿರುವುದು ಬಿಜೆಪಿ ಆಡಳಿತವಿರುವಲ್ಲಿ ಹಿಡಿತವನ್ನು ಬಲಗೊಳಿಸುವುದು ಮತ್ತು ಇಲ್ಲದಿರುವ ಕಡೆಗಳಿಗೆ ವಿಸ್ತರಿಸುವುದು’ ಎಂದು ಮೂಲಗಳು ತಿಳಿಸಿವೆ.
2027ರಲ್ಲಿ ಗೋವಾ, ಗುಜರಾತ್, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಚುನಾವಣೆಗೆ ವೇದಿಕೆಯಾಗಲಿವೆ.
ಹೇಗಾಗುತ್ತಿದೆ ತಯಾರಿ?
ತಾವು ರಾಷ್ಟ್ರಾಧ್ಯಕ್ಷ ಹುದ್ದೆಗೇರಿದ ಬಳಿಕ ಎದುರಾದ ಮೊದಲು ಪಂಚರಾಜ್ಯ ಚುನಾವಣೆಯಾಗಿದ್ದು, ಎಲ್ಲಾ ರಾಜ್ಯಗಳಿಗೆ ಖುದ್ದಾಗಿ ಭೇಟಿ ನೀಡಿ ಸಭೆಗಳನ್ನು ನಡೆಸುವ ಮೂಲಕ ನವೀನ್ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅದರ ಜೊತೆಜೊತೆಗೇ ಗೋವಾ, ಗುಜರಾತ್, ಉತ್ತರಪ್ರದೇಶಗಳಿಗೂ ತೆರಳಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು ಹಾಗೂ ಹಲವು ಗೌಪ್ಯ ಸಭೆಗಳನ್ನು ನಡೆಸಿದರು. ಆ ವೇಳೆಗಾಗಲೇ 2027ರಲ್ಲಿ ನಡೆಯಲಿರುವ ಚುನಾವಣೆಗೆ ರಣತಂತ್ರ ಹೆಣೆಯುವ ಕೆಲಸ ಶುರುವಾಗಿತ್ತು.
ಮಹಿಳಾ ಮೀಸಲು ಜಾರಿ ಮಾಡಿಯೇ ಸಿದ್ಧ: ಮೋದಿ
ವಾರಾಣಸಿ: ‘ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಹಕ್ಕನ್ನು ಜಾರಿಗೆ ತರಲು ನಮ್ಮ ಸರ್ಕಾರ ಸಿದ್ಧವಾಗಿದೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಸ್ವಕ್ಷೇತ್ರ ವಾರಾಣಸಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದುವರೆದಂತೆ ಮಾತನಾಡಿದ ಅವರು, ‘ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವುದಕ್ಕೆ ನಮ್ಮ ಸರ್ಕಾರ ಸಿದ್ಧವಾಗಿದೆ. ಮೀಸಲಾತಿಯ ಹಕ್ಕನ್ನು ಜಾರಿಗೆ ತರಲು ನಾನು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ನನ್ನ ಎಲ್ಲಾ ಸಹೋದರಿಯರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ಕಾಂಗ್ರೆಸ್, ಎಸ್ಪಿ, ಟಿಎಂಸಿ ಮತ್ತು ಡಿಎಂಕೆಯಂತಹ ಪರಿವಾರವಾದಿಗಳು ಮತ್ತೊಮ್ಮೆ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಈ ಪಕ್ಷಗಳು ಹೆಣ್ಣುಮಕ್ಕಳು ಶಾಸಕಾಂಗ ಪ್ರವೇಶಿಸುವುದನ್ನು ಬಯಸುವುದಿಲ್ಲ. ಈ ಪಕ್ಷಗಳು ಕಳೆದ 40 ವರ್ಷಗಳಿಂದ ಮಹಿಳಾ ಮೀಸಲಾತಿಗೆ ಬ್ರೇಕ್ ಹಾಕಿವೆ’ ಎಂದು ಹರಿಹಾಯ್ದರು.
ವಿಪಕ್ಷಗಳಿಂದ ಮಹಿಳೆಯರಿಗೆ ದ್ರೋಹ
ಮುಂದುವರೆದಂತೆ ‘40 ವರ್ಷಗಳಿಂದ ಮಹಿಳೆಯರ ಈ ಹಕ್ಕು ಬಾಕಿ ಇತ್ತು. 2023 ರಲ್ಲಿ ನಾವು ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಅಂಗೀಕರಿಸಿದ್ದೇವೆ. ಆದರೆ ವಿಪಕ್ಷಗಳು ಅದಕ್ಕೆ ದ್ರೋಹ ಎಸಗಿವೆ. ವಂಶಪಾರಂಪರ್ಯ ರಾಜಕೀಯ ಮತ್ತು ಓಲೈಕೆಯಿಂದ ನಡೆಸಲ್ಪಡುವ ಈ ಪಕ್ಷಗಳು ಮಹಿಳಾ ಶಕ್ತಿಯ ಬಗ್ಗೆ ಭಯಪಡುತ್ತವೆ’ ವಾಗ್ದಾಳಿ ನಡೆಸಿದರು.


