ಭಾರತವನ್ನು ನರಕವೆಂದು ಕರೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 'ಹುಚ್ಚ' ಎಂದು ಸಚಿವ ಸಂತೋಷ್ ಲಾಡ್ ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಪ್ರಶ್ನಿಸಿರುವ ಅವರು, ಮೋದಿ ಹಾಗೂ ಬಿಜೆಪಿಯ ಚುನಾವಣಾ ತಂತ್ರ ಮತ್ತು ಮಹಿಳಾ ಮೀಸಲಾತಿ ನಿಲುವಿನ ಬಗ್ಗೆಯೂ ವಾಗ್ದಾಳಿ 

ಬಳ್ಳಾರಿ (ಏ.28) ಪ್ರತಿ ಬಾರಿಯೂ ಭಾರತವನ್ನು ಹಿಯಾಳಿಸುತ್ತಿರುವ, ಅವಮಾನಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ತೀವ್ರವಾಗಿ ಟೀಕಿಸಿದರು.

ಸಂಡೂರಿನಲ್ಲಿ ಇಂದು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಾರತವನ್ನು ನರಕ ಎನ್ನುವ ಟ್ರಂಪ್ ಒಬ್ಬ ಹುಚ್ಚ

ಭಾರತವನ್ನು ಇತ್ತೀಚೆಗೆ ನರಕ ಎಂದು ಕರೆದಿರುವ ಟ್ರಂಪ್ ಒಬ್ಬ ಹುಚ್ಚ. ಹುಚ್ಚು ಹೆಚ್ಚಾಗಿರೋದ್ರಿಂದಲೇ ಭಾರತದ ಬಗ್ಗೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾನೆ. ಅಮೆರಿಕ ವಿರುದ್ಧ ಸಣ್ಣ ಸಣ್ಣ ದೇಶಗಳೇ ತಿರುಗಿಬಿದ್ದಿವೆ ಆದರೆ ನಮ್ಮ ಭಾರತದ ಕೆಲವರು ಆ ಹುಚ್ಚನಿಗೆ ಗುಲಾಮರಾಗಿದ್ದಾರೆ ಎಂದು ಪರೋಕ್ಷವಾಗಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಟ್ರಂಪ್ ಆ ರೀತಿ ಹೇಳಿಕೆ ಕೊಡುವಾಗ ಮೋದಿ ಏಕೆ ಮಾತನಾಡಲ್ಲ?

ಭಾರತವನ್ನ ನರಕ ಎನ್ನುವ ಟ್ರಂಪ್ ಬಗ್ಗೆ ಪ್ರಧಾನಿ ಮೋದಿ ಏಕೆ ಹೇಳಿಕೆ ಕೊಡುವುದಿಲ್ಲ? ಕೇಂದ್ರ ಸರ್ಕಾರದ ಕೆಲವು ನಾಯಕರು ಟ್ರಂಪ್‌ನ ಗುಲಾಮರಂತೆ ವರ್ತಿಸುತ್ತಿದ್ದಾರೆ. ಭಾರತವನ್ನು ಅವಮಾನ ಮಾಡಿದ್ರೂ ಇವರು ಟ್ರಂಪ್ ವಿರುದ್ಧ ಮಾತನಾಡುತ್ತಿಲ್ಲ. ಇದರ ಬಗ್ಗೆ ಕೇಂದ್ರದ ನಾಯಕರು ಸೃಷ್ಟೀಕರಣ ಕೊಡಬೇಕು. ಭಾರತೀಯರಾಗಿ ನಮಗೆ ಇದು ಸಾಕಷ್ಟು ಮುಜುಗರ ತರಿಸಿದೆ ಎಂದರು.

ಪ್ರಧಾನಿ ಮೋದಿಗೆ ಚುನಾವಣಾ ಹುಚ್ಚು ಹೆಚ್ಚಾಗಿದೆ

ಮೋದಿ ಅವರಿಗೆ ಚುನಾವಣಾ ಹುಚ್ಚು ಹೆಚ್ಚಾಗಿದೆ. ಮೋದಿ ತಮಿಳು ನಾಡಿನ ಪ್ರಚಾರದಲ್ಲಿ ಕಪ್ಪು ಬಣ್ಣ ಹಾಕ್ತಾರೆ, ಬೇರೆ ರಾಜ್ಯಕ್ಕೆ ಹೋದಾಗ ಮತ್ತೊಂದು ರೀತಿಯಲ್ಲಿ ಮೇಕಪ್ ಮಾಡಿಕೊಳ್ಳುತ್ತಾರೆ. ಮೋದಿ ಮತ್ತು ಬಿಜೆಪಿಯವರಿಗೆ ಎಲೆಕ್ಷನ್ ಹುಚ್ಚು ಹೆಚ್ಚಾಗಿದೆ ಎಂದು ಹರಿಹಾಯ್ದರು.

ಮಹಿಳಾ ಮೀಸಲಾತಿ ಬಗ್ಗೆ ಸಂತೋಷ ಲಾಡ್ ಹೇಳಿದ್ದೇನು?

ಮಹಿಳಾ ಮೀಸಲಾತಿಯನ್ನು ಡಿಲಿಮಿಟೇಷನ್ ಜೊತೆ ಲಿಂಕ್ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, 'ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ನಿಮ್ಮ ಪಕ್ಷದ ವತಿಯಿಂದಲೇ ನೇರವಾಗಿ ಶೇ. 33ರಷ್ಟು ಟಿಕೆಟ್ ಹಂಚಿಕೆ ಮಾಡಿ ಮಾದರಿಯಾಗಿ' ಎಂದು ಬಿಜೆಪಿಗೆ ಸವಾಲು ಹಾಕಿದರು. ಇನ್ನು ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸಚಿವರು, ಶಾಸಕರು ಸಚಿವರಾಗಬೇಕು ಎನ್ನುವ ಆಸೆ ಇರುವುದು ಸಹಜ. ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು, ಯಾವಾಗ ಎಂಬುದು ಗೊತ್ತಿಲ್ಲ ಎಂದರು.

ಮುಸ್ಲಿಂ ಕಾಂಗ್ರೆಸ್ಸಿನ ಬೆನ್ನಲು ನಿಜ

ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆನ್ನೆಲುಬು ಎಂಬುದು ನಿಜ, ಆದರೆ ಮುಸ್ಲಿಮರಷ್ಟೇ ಅಲ್ಲದೆ ಎಲ್ಲಾ ಸಮುದಾಯದವರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಬದ್ಧತೆ ಮೇಲೆ ನಿಂತಿದೆ ಎಂದರು. ಹೀಗಾಗಿ ಎಲ್ಲರೂ ಹಿಂದೂಗಳು ಮುಸ್ಲಿಮರು ಎಲ್ಲರೂ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ ಎಂದರು.

ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಗೆಲ್ಲುತ್ತೆ

ದಾವಣಗೆರೆ ಉಪಚುನಾವಣೆಯಲ್ಲಿದ್ದ ಅಸಮಾಧಾನ ಶಮನವಾಗಿದೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಇದೇ ವೇಳೆ ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, 'ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.