ಮಹಿಳಾ ಮೀಸಲು ಮಸೂದೆ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮಗೂ ಮತ್ತು ಪ್ರಧಾನಿ ಮೋದಿಗೂ 'ಪತ್ನಿ ಸಮಸ್ಯೆ' ಇಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗೆಗಡಲು ಉಂಟಾಯಿತು, ಇದಕ್ಕೆ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದರು.

ಪಿಟಿಐ ನವದೆಹಲಿ (ಏ.18): ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು.

ನಮಗೆ ಆ ಅನುಭವ ಸಿಗುವುದಿಲ್ಲ:

ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದ್ದೇವೆ. ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್‌ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ’ ಹಾಸ್ಯ ಮಾಡಿದರು.

ಪ್ರಿಯಾಂಕಾ ನೋಡಿ ಕಲಿಯಿರಿ: ರಾಹುಲ್‌ಗೆ ತಿವಿದ ಅಮಿತ್ ಶಾ

ಸದನದಲ್ಲಿ ಮಾತನಾಡುವಾಗ ಎಂಥ ಭಾಷೆ ಬಳಸುತ್ತೀರಿ. ಆಡಳಿತ ಸದಸ್ಯರನ್ನು ಹೇಡಿ ಎನ್ನುತ್ತೀರಿ. ಇಂಥ ಪದ ಬಳಕೆ ಸರಿಯೇ? ಪ್ರಿಯಾಂಕಾರನ್ನು ನೋಡಿ ಕಲಿಯಿರಿ ಎಂದು ಅಮಿತ್ ಶಾ ರಾಹುಲ್ ಗಾಂಧಿಗೆ ತಿವಿದರು.