ಬೆಂಗಳೂರು ಮೂಲದ ಕಂಪನಿಯಿಂದ 3 ಲಕ್ಷ ರುಪಾಯಿ ಲಂಚ ಪಡೆದ ಆರೋಪದ ಮೇಲೆ ಸಿಬಿಐ ಲೆಫ್ಟಿನೆಂಟ್‌ ಕರ್ನಲ್‌ ದೀಪಕ್‌ ಕುಮಾರ್ ಶರ್ಮಾ ಅವರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು 2.23 ಕೋಟಿ ರುಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ನವದೆಹಲಿ (ಡಿ.21) ಬೆಂಗಳೂರು ಮೂಲದ ಕಂಪನಿಯಿಂದ 3 ಲಕ್ಷ ರು. ಲಂಚ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಲೆಫ್ಟಿನೆಂಟ್‌ ಕರ್ನಲ್‌ ಒಬ್ಬರನ್ನು ಬಂಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಡೆದ ಶೋಧದ ವೇಳೆ ಬರೋಬ್ಬರಿ 2.23 ಕೋಟಿ ರು. ನಗದು ಪತ್ತೆಯಾಗಿದೆ.

ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಲೆ.ಕರ್ನಲ್‌ ದೀಪಕ್‌ ಕುಮಾರ್ ಶರ್ಮಾ ಬಂಧಿತ ಆರೋಪಿ. ಹಣ ನೀಡಿದ ವಿನೋದ್‌ ಕುಮಾರ್‌ ಎಂಬಾತನನ್ನೂ ಕೂಡ ಬಂಧಿಸಲಾಗಿದೆ.

ಶರ್ಮಾ ಅವರು ರಕ್ಷಣಾ ಉತ್ಪನ್ನಗಳ ಉತ್ಪಾದನೆ ರಫ್ತು ಸೇರಿ ಇನ್ನಿತರ ವ್ಯವಹಾರಗಳಲ್ಲಿ ಖಾಸಗಿ ಕಂಪನಿ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆಯುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಭಾಗವಾಗಿ ಶರ್ಮಾ ಮತ್ತು ಅವರ ಪತ್ನಿ ಕರ್ನಲ್‌ ಕಾಜಲ್‌ ಬಾಲಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಈ ನಡುವೆ ಬೆಂಗಳೂರು ಮೂಲದ ಕಂಪನಿಯಿಂದ ಲಂಚ ಸ್ವೀಕಾರ ಮಾಡಿರುವ ಬಗ್ಗೆ ಸಿಬಿಐಗೆ ಮಾಹಿತಿ ಲಭ್ಯವಾಗಿತ್ತು. ಈ ಕಂಪನಿಯ ವ್ಯವಹಾರಗಳನ್ನು ರಾಜೀವ್‌ ಯಾದವ್‌ ಮತ್ತು ರವಜಿತ್ ಸಿಂಗ್‌ ಎನ್ನುವವರು ನೋಡಿಕೊಳ್ಳುತ್ತಿದ್ದರು. ಈ ಇಬ್ಬರ ಜತೆ ಸಿಂಗ್‌ ನಿರಂತರ ಸಂಪರ್ಕದಲ್ಲಿದ್ದರು. ಅವರ ಜೊತೆಗೂಡಿ, ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಂದ ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ ಪಡೆಯುತ್ತಿದ್ದರು ಎನ್ನಲಾಗಿದೆ.

ಇದೇ ಕಂಪನಿಯ ಸೂಚನೆಯ ಮೇರೆಗೆ ವಿನೋದ್‌ ಕುಮಾರ್‌, ಶರ್ಮಾರಿಗೆ 3 ಲಕ್ಷ ರು, ಹಣವನ್ನು ಡಿ.18ರಂದು ಲಂಚವಾಗಿ ನೀಡಿದ್ದರು. ಹೀಗಾಗಿ ಇದೇ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ.

₹2.23 ಕೋಟಿ ರು.ಪತ್ತೆ:

ಲಂಚ ಪಡೆದ 3 ಲಕ್ಷ ರು. ಜತೆಗೆ ಲೆ.ಕರ್ನಲ್‌ ದೀಪಕ್‌ ಅವರಿಗೆ ಸಂಬಂಧಿಸಿದ ಜಾಗದಲ್ಲಿ ನಡೆದ ಶೋಧದ ವೇಳೆ ಸಿಬಿಐ 2.23 ಕೋಟಿ ರು. ನಗದು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅವರ ಪತ್ನಿಗೆ ಸಂಬಂಧಪಟ್ಟ 10 ಲಕ್ಷ ರು.ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐನಿಂದ ಮಾಹಿತಿ ಲಭ್ಯವಾಗಿದೆ.