ಧಾರವಾಡ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ. ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ಮುಂದೂಡಿದೆ. ಸುಪ್ರೀಂ ಹಿಂದೆ ಜಾಮೀನು ರದ್ದುಪಡಿಸಿದ್ದರಿಂದ, ಹಾಲಿ ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
ಬೆಂಗಳೂರು (ಡಿ.19): ಧಾರವಾಡದ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಪ್ರಕರಣದ ಸಂಬಂಧ ಜಾಮೀನು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿ, ನ್ಯಾ. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿನಯ್ ಪರ ವಕೀಲರು, ಪ್ರಕರಣ ಸಂಬಂಧ ಕೇವಲ ಒಬ್ಬ ಸಾಕ್ಷಿ ವಿಚಾರಣೆ ಬಾಕಿಯಿದೆ. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಈಗಾಗಲೇ 20 ಮಂದಿಗೆ ಜಾಮೀನು ದೊರೆತಿದೆ. ಕುಲಕರ್ಣಿ ಅವರಿಗೆ ಮಾತ್ರ ಜಾಮೀನು ದೊರೆತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ವಾದ ಆಕ್ಷೇಪಿಸಿದ ಸಿಬಿಐ ಪರ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್, ಸದ್ಯ ವಿಶೇಷ ನ್ಯಾಯಾಲಯ ಪ್ರಕರಣವನ್ನು ನಿತ್ಯ ವಿಚಾರಣೆ ನಡೆಸುತ್ತಿದ್ದು, ಕುಲಕರ್ಣಿಗೆ ಜಾಮೀನು ನೀಡುವ ಅಗತ್ಯವೇ ಇಲ್ಲ ಎಂದು ಬಲವಾಗಿ ವಾದಿಸಿದರು.
ಬಾಕಿಯಿರುವುದು ಕೇವಲ ಒಂದೇ ಸಾಕ್ಷಿ ವಿಚಾರಣೆಯೇ? ಎಂಬುದು ಅರ್ಜಿದಾರರ ಪರ ವಕೀಲರು ಖಚಿತಪಡಿಸಬೇಕು. ಮೇಲಾಗಿ ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ನಿರ್ಧರಿಸಬೇಕು. ಸಾಕ್ಷಿ ಮೇಲೆ ಒತ್ತಡ ಹೇರಿದ್ದಕ್ಕೆ ಕುಲಕರ್ಣಿ ಜಾಮೀನನ್ನು 2025ರ ಜೂ.6ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದೇ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ಕುಲಕರ್ಣಿ ಜಾಮೀನು ಕೋರುವ ಯಾವುದೇ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಉಳಿಸಿಲ್ಲ.
ಆಗ ನ್ಯಾಯಪೀಠ, ಅರ್ಜಿದಾರರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದರಿಂದ ಹಾಲಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸಬಹುದೇ? ಎಂಬ ಬಗ್ಗೆ ಸ್ಪಷ್ಟನೆ ಬೇಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದರೆ ಮೆರಿಟ್ ಮೇಲೆ ಅರ್ಜಿ ವಿಚಾರಣೆ ನಡೆಸಿ ತೀರ್ಮಾನಿಸಬಹುದು. ಇಲ್ಲವಾದರೆ ಕುಲಕರ್ಣಿ ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲೇ ಜಾಮೀನು ಕೋರಬಹುದು ಎಂದು ತಿಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.


