ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ. ಇದರೊಂದಿಗೆ ಕಾನೂನು ಹೋರಾಟ ಆರಂಭಿಸಿದ ನಾಯಕನಿಗೆ ತೀವ್ರ ಹಿನ್ನಡೆಯಾಗಿದೆ.

ಬೆಂಗಳೂರು (ಡಿ.08) ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟ ಹೆಚ್ಚಾಗಿದೆ. ಜೈಲಿನಲ್ಲಿರುವ ನಾಯಕ ವಿನಯ್ ಕುಲಕರ್ಣಿ ಜಾಮೀನು ಮೂಲಕ ಹೊರಬರಲು ನಡೆಸಿದ ಮತ್ತೊಂದು ಪ್ರಯತ್ನ ವಿಫಲವಾಗಿದೆ. ಧಾರವಾಡ ಜಿ.ಪಂ‌ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾಗಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕರಿಸಿದೆ. ನ್ಯಾ.ಸಂತೋಷ್ ಗಜಾನನ ಭಟ್ ಈ ಆದೇಶ ನೀಡಿದ್ದಾರೆ.

ವಿನಯ್ ಅರ್ಜಿ ತಿರಸ್ಕೃತಗೊಂಡಿದ್ದೇಕೆ?

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣ 15ನೇ ಆರೋಪಿಯಾಗಿದ್ದಾರೆ. ಆದರೆ 16ನೇ ಆರೋಪಿ ಚಂದ್ರಶೇಖರ ಇಂಡಿ ಅಲಿಯಾಸ್ ಚಂದು ಮಾಮಗೆ ಕೋರ್ಟ್ ಜಾಮೀನು ನೀಡಿದೆ. ಇತ್ತ ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ. ಪ್ರಮುಖವಾಗಿ ಸಾಕ್ಷಿಗಳ ಮೇಲೆ‌ ಒತ್ತಡ ಹಾಕಿದ್ದ ಆರೋಪದ ಮೇಲೆ‌ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ವಿಚಾರಣೆ ಮುಗಿದ ಹಿನ್ನಲೆ ಜಾಮೀನು ಕೋರಿ ಅರ್ಜಿ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ಹಿನ್ನಲೆಯಲ್ಲಿ ಜಾಮೀನು ಕೋರಿ ವಿನಯ್ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಕೋರ್ಟ್ ವಾದ ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು. ಇಂದು ಸಂಜೆ ಆದೇಶ ಹೊರಬಿದ್ದಿದ್ದು, ವಿನಯ್ ಕುಲಕರ್ಣಿಗೆ ತೀವ್ರ ನಿರಾಸೆಯಾಗಿದೆ.

ಸುಪ್ರೀಂ ಕೋರ್ಟ್‌ನಲ್ಲೂ ಕುಲಕರ್ಣಿಗೆ ಹಿನ್ನಡೆ

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಎಲ್ಲಾ ಕಡೆಯಿಂದ ಹಿನ್ನಡೆಯಾಗುತ್ತಿದೆ. ಯೋಗೇಶ್ ಗೌಡ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಸಾಕ್ಷಿ ನಾಶದ ಆರೋಪ ಹೊರಿಸಿತ್ತು. ವಿನಯ್ ಕುಲಕರ್ಣಿ ತಮ್ಮ ಪ್ರಭಾವ ಬಳಸಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದಿತ್ತು. ಆದರೆ ಹೈಕೋರ್ಟ್ ವಿನಯ್ ಕುಲಕರ್ಣಿ ಮೇಲಿದ್ದ ಸಾಕ್ಷಿ ನಾಶ ಪ್ರಕರಣ ವಜಾ ಮಾಡಿತ್ತು. ಇದರ ವಿರುದ್ದ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಕ್ಟೋಬರ್ 28 ರಂದು ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿತ್ತು. ವಿನಯ್ ಕುಲಕರ್ಣಿ ಸಾಕ್ಷಿ ನಾಶ ಪ್ರಕರಣವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.

2016ರಲ್ಲಿ ಯೋಗೇಶ್ ಗೌಡ ಹತ್ಯೆ

2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆಯಾಗಿತ್ತು. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿತ್ತು. ಪ್ರಕರಣದ ತನಿಖೆ ಆರಂಬಿಸಿದ ಸಿಬಿಐ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಯನ್ನು ಅರೆಸ್ಟ್ ಮಾಡಿತ್ತು. ನೆವೆಂಬರ್ 05, 2020ರಲ್ಲಿ ವಿನಯ್ ಕುಲಕರ್ಣಿ ಬಂಧನವಾಗಿತ್ತು.