ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ವ್ಯಾಪಾರದ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ತಾಯಿ ಮತ್ತು ಮಗ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿಷ ಸೇವಿಸದ ಅಜ್ಜಿಯೂ ಹೇಗೆ ಸತ್ತರು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಇದು ಕೇಸಿಗೆ ಟ್ವಿಸ್ಟ್ ನೀಡಿದೆ.
ಬೆಂಗಳೂರು (ಡಿ.): ತಮಿಳುನಾಡಿನ ಧರ್ಮಪುರಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಸುಧಾಳ ಕುಟುಂಬವು ಬಿರಿಯಾಗಿ, ಚಿಪ್ಸ್ ಹಾಗೂ ಮಿಲ್ಸ್ ಪಾರ್ಲರ್ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿತ್ತು. ಆದರೆ, ಬಿರಿಯಾನಿ ಅಂಗಡಿ ನಡೆಸುತ್ತಿದ್ದರು. ಆದರೆ, ವ್ಯಾಪಾರದ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿದ ಒಂದೇ ಕುಟುಂಬದ ಮೂವರು ಸದಸ್ಯರ ಸಾವಿನ ಸುತ್ತ ಆಘಾತಕಾರಿ ತಿರುವು ಲಭಿಸಿದೆ. ಕೋರಮಂಗಲ ಸಮೀಪದ ತಾವರೆಕೆರೆಯ ಸುದ್ದುಗುಂಟೆಪಾಳ್ಯದಲ್ಲಿ ತಾಯಿ ಮತ್ತು ಮಗ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ದೃಶ್ಯ ಕಣ್ಣಾರೆ ನೋಡಿದ್ದ ಅಜ್ಜಿ ತನ್ನ ಹಿರಿಯ ಮಗಳಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದಾಳೆ. ಆದರೆ, ಅವರು ಬಂದು ನೋಡುವಷ್ಟರಲ್ಲಿ ಮೂವರೂ ಹೆಣವಾಗಿದ್ದರು. ಆದರೆ, ಇಲ್ಲಿ ಅಜ್ಜಿ ಸತ್ತಿದ್ದು ಹೇಗೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ.
ಮೃತರನ್ನು ಸುಧಾ (38), ಆಕೆಯ ಮಗ ಮೋನಿಶ್ (14) ಮತ್ತು ತಾಯಿ ಮಾದಮ್ಮ (68) ಎಂದು ಗುರುತಿಸಲಾಗಿದೆ. ಈ ಕುಟುಂಬ ಮೂಲತಃ ತಮಿಳುನಾಡಿನ ಧರ್ಮಪುರಿಯವರಾಗಿದ್ದು, ಬೆಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ, ಇದೀಗ ಏಕಾಏಕಿ ಕುಟುಂಬದ ಮೂವರೂ ಸದಸ್ಯರು ಪ್ರಾಣ ಕಳೆದುಕೊಂಡು ಹೆಣವಾಗಿದ್ದಾರೆ. ಇನ್ನು ಸುಧಾ ಕಳೆದ ಕೆಲವು ವರ್ಷಗಳಿಂದ ಗಂಡನಿಂದ ದೂರವಾಗಿ ತಾಯಿ ಹಾಗೂ ಮಗನೊಂದಿಗೆ ವಾಸವಾಗಿದ್ದರು. ಉದ್ಯಮ ಕೈ ಹಿಡಿಯುತ್ತದೆ ಎಂದುಕೊಂಡವರಿಗೆ ಉದ್ಯಮದ ಸಾಲವೇ ಜೀವನಕ್ಕೆ ಶೂಲವಾಗಿದೆ.
ವಿಷ ಸೇವಿಸಿ ತಾಯಿ-ಮಗ ಆತ್ಮ*ಹತ್ಯೆ
ಪೊಲೀಸ್ ಮೂಲಗಳ ಪ್ರಕಾರ, ಸುಧಾ ಅವರು ಈ ಹಿಂದೆ ಬಿರಿಯಾನಿ ಸೆಂಟರ್, ಚಿಪ್ಸ್ ಶಾಪ್ ಮತ್ತು ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಆದರೆ, ಈ ವ್ಯವಹಾರಗಳಲ್ಲಿ ನಷ್ಟ ಉಂಟಾಗಿತ್ತು. ಮೂರು ತಿಂಗಳ ಹಿಂದೆ ಅವರು ಬಿರಿಯಾನಿ ಮತ್ತು ಚಿಪ್ಸ್ ಸೆಂಟರ್ಗಳನ್ನು ಬೇರೆಯವರಿಗೆ ಒಪ್ಪಂದದ ಮೇಲೆ ನೀಡಿದ್ದರು. ಆದರೆ, ಆ ವ್ಯಕ್ತಿ 3 ತಿಂಗಳಿಂದ ಹಣ ನೀಡಿರಲಿಲ್ಲ. ಜೊತೆಗೆ, ಧರ್ಮಪುರಿಯಿಂದ ಮಾಡಿದ ಸಾಲದ ಹಿಂತಿರುಗಿಸಲು ಸಾಲ ಕೊಟ್ಟವರು ಒತ್ತಡ ಹೇರುತ್ತಿದ್ದರು. ಈ ಒತ್ತಡದಿಂದ ಮನನೊಂದ ಸುಧಾ, ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂದು (ಸೋಮವಾರ, ಡಿ.8 ರಂದು) ಬೆಳಿಗ್ಗೆ 9 ಗಂಟೆಗೆ ಮೋನಿಶ್ಗೆ ವಿಷ ನೀಡಿ, ನಂತರ ತಾವೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷದ ಸೇವನೆಯಿಂದ ಮಗ ಮೋನಿಶ್ ಮತ್ತು ಸುಧಾ ತೀವ್ರ ನರಳಾಟದಿಂದ ಜೀವ ಬಿಟ್ಟಿದ್ದಾರೆ.
ಅಜ್ಜಿ ವಿಷವನ್ನೇ ಸೇವಿಸಿರಲಿಲ್ಲ:
ಮಾದಮ್ಮ ಅಜ್ಜಿಯ ಮಗಳು ಸುಧಾ ಮತ್ತು ಮೊಮ್ಮಗ ಮೋನಿಶ್ ವಿಷ ಸೇವಿಸಿ ನರಳಾಡುತ್ತಿರುವುದನ್ನು ಕಂಡ ವೃದ್ಧೆ ತಕ್ಷಣವೇ ತಮ್ಮ ಹಿರಿಮಗಳು ಮಹೇಶ್ವರಿಗೆ ಕರೆ ಮಾಡಿ, 'ಸುಧಾ ಮೋನಿಶ್ಗೆ ವಿಷ ನೀಡಿ, ತಾನೂ ವಿಷ ಸೇವಿಸಿದ್ದಾಳೆ, ಬೇಗ ಮನೆಗೆ ಬಾ' ಎಂದು ತಿಳಿಸಿದ್ದಾರೆ. ಆದರೆ, ಬೊಮ್ಮಸಂದ್ರದಿಂದ ಮಹೇಶ್ವರಿ ಮನೆಗೆ ಬರುವಷ್ಟರಲ್ಲಿ, ಕಣ್ಣ ಮುಂದೆ ಮಗಳು ಮತ್ತು ಮೊಮ್ಮಗ ಸಾವನ್ನಪ್ಪಿದ್ದ ನೋವು ಮತ್ತು ಆಘಾತವನ್ನು ತಾಳಲಾರದೆ ವೃದ್ಧೆ ಮಾದಮ್ಮ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಮಾಹಿತಿ ಮರಣೋತ್ತರ ಪರೀಕ್ಷೆ ವೇಳೆ ಅಜ್ಜಿ ವಿಷ ಸೇವನೆ ಮಾಡದೇ ಹಾರ್ಟ್ ಅಟ್ಯಾಕ್ನಿಂದ ಸಾವಾಗಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆ ಮತ್ತು ಡೆತ್ ನೋಟ್ ಮಾಹಿತಿ
ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಧಾ ಅವರು ಹಾಲು ಮಾರಾಟ ಮತ್ತು ಮನೆ ಕೆಲಸಕ್ಕೆ ಹೋಗುತ್ತಿದ್ದರು. ಮೋನಿಶ್ ಕ್ರೈಸ್ಟ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಸುಧಾ ಅವರು ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಹಣ ಕೊಡಬೇಕಿದ್ದ ವ್ಯಕ್ತಿಗಳ ಫೋನ್ ನಂಬರ್ಗಳನ್ನು ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಕಾರಣಕ್ಕಾಗಿ ಕುಟುಂಬ ಆತ್ಮ*ಹತ್ಯೆ ಮಾಡಿಕೊಂಡಿದೆಯಾ ಅಥವಾ ಬೇರೆ ಕಾರಣಗಳಿವೆಯೇ ಎಂಬ ಬಗ್ಗೆ ಸುದ್ದುಗುಂಟೆಪಾಳ್ಯ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಧರ್ಮಪುರಿಯ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಬಂದಿದ್ದರು ಎಂದು ಡಿಸಿಪಿ ಸಾರಾ ಫಾತೀಮಾ ಮಾಹಿತಿ ನೀಡಿದ್ದಾರೆ. ಮೂವರ ಮೃತದೇಹಗಳನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.


