ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿರಿಯಾನಿ ಬಾಡೂಟ ವ್ಯಾಪಾರ ಮಾಡುತ್ತಿದ್ದ ಮಾದಮ್ಮ ಕುಟುಂಬ ಸಾಲದ ಸುಳಿಗೆ ಸಿಲುಕಿ, ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಅಜ್ಜಿ, ತಾಯಿ ಹಾಗೂ ಮೊಮ್ಮಗ ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ.
ಬೆಂಗಳೂರು (ಡಿ.08): ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಬೆಂಗಳೂರಿನ ಕೋರಮಂಗಲ ಸಮೀಪದ ತಾವರೇಕೆರೆ 2ನೇ ಕ್ರಾಸ್ನಲ್ಲಿ ಸೋಮವಾರ ವರದಿಯಾಗಿದೆ. ಅಜ್ಜಿ, ಮಗಳು ಮತ್ತು ಮೊಮ್ಮಗ ಹೀಗೆ ಮೂವರು ಏಕಕಾಲಕ್ಕೆ ಸಾವಿಗೆ ಶರಣಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೃತರನ್ನು ಮಾದಮ್ಮ (68), ಆಕೆಯ ಮಗಳು ಸುಧಾ (38), ಮತ್ತು ಮೊಮ್ಮಗ ಮೋನಿಷ್ (14) ಎಂದು ಗುರುತಿಸಲಾಗಿದೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಮೊಮ್ಮಗನಿಗೆ ವಿಷ ಕುಡಿಸಿ, ತದನಂತರ ತಾಯಿ ಮತ್ತು ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವ್ಯವಹಾರದಲ್ಲಿ ನಷ್ಟ, ಸಾಲದ ಹೊರೆ
ಮೃತ ಮಾದಮ್ಮ ಮತ್ತು ಸುಧಾ ಈ ಹಿಂದೆ ಹಲವು ಸಣ್ಣಪುಟ್ಟ ವ್ಯಾಪಾರಗಳನ್ನು ನಡೆಸುತ್ತಿದ್ದರು. ಮೊದಲು ಅವರು ಬಿರಿಯಾನಿ ವ್ಯಾಪಾರ ಮಾಡುತ್ತಿದ್ದರು. ನಂತರ ಚಿಪ್ಸ್ ವ್ಯಾಪಾರಕ್ಕೆ ಕೈಹಾಕಿದ್ದರು. ಆದರೆ, ಈ ಎರಡೂ ವ್ಯಾಪಾರಗಳಲ್ಲಿ ನಷ್ಟ ಉಂಟಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಈ ವ್ಯಾಪಾರಗಳು ಕೈಕೊಟ್ಟ ನಂತರ, ಜೀವನ ನಿರ್ವಹಣೆಗಾಗಿ ಮಾದಮ್ಮ ಮತ್ತು ಸುಧಾ ಹಾಲು ವ್ಯಾಪಾರ ಮತ್ತು ಕೆಲವು ಮನೆಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದರು. ಸಾಲದ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಅದನ್ನು ತೀರಿಸಲಾಗದೆ ತೀವ್ರ ಮನನೊಂದು ಕುಟುಂಬವು ಸಾಮೂಹಿಕ ಆತ್ಮ*ಹತ್ಯೆ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಪತಿಯಿಂದ ದೂರವಿದ್ದ ಸುಧಾ:
ಮೃತೆ ಸುಧಾ ಅವರು ತಮ್ಮ ಪತಿಯಿಂದ ದೂರವಿದ್ದರು. ಕೆಲ ವರ್ಷಗಳ ಹಿಂದೆ ಪತಿ-ಪತ್ನಿ ಬೇರೆಯಾಗಿದ್ದರಿಂದ, ಸುಧಾ, ಆಕೆಯ ಮಗ ಮೋನಿಷ್, ಮತ್ತು ತಾಯಿ ಮಾದಮ್ಮ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಗ ಮೋನಿಷ್ನ ಭವಿಷ್ಯ, ಸಾಲದ ಚಿಂತೆ ಮತ್ತು ಆರ್ಥಿಕ ಸಂಕಷ್ಟ ಇವರನ್ನು ಆತ್ಮ*ಹತ್ಯೆಗೆ ಪ್ರೇರೇಪಿಸಿದೆ ಎಂದು ಹೇಳಲಾಗಿದೆ. ಇನ್ನು ದುರಂತದ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಡಿಸಿಪಿ ಸಾರಾ ಫಾತೀಮಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುದ್ದುಗುಂಟೆಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಡೆತ್ ನೋಟ್ಗಾಗಿ ಶೋಧ
ಸ್ಥಳಕ್ಕೆ ಭೇಟಿ ನೀಡಿದ ಸೋಕೊ (Scene of Crime) ಅಧಿಕಾರಿಗಳು ಮನೆಯಲ್ಲಿ ಯಾವುದೇ ಡೆತ್ ನೋಟ್ ಅಥವಾ ಇತರೆ ಸುಳಿವುಗಳು ಲಭ್ಯವಿದೆಯೇ ಎಂದು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆಂಬ್ಯುಲೆನ್ಸ್ಗೆ ರವಾನಿಸಲಾಗಿದ್ದು, ಸೇಂಟ್ ಜಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸರು ಮತ್ತು ಫೋರೆನ್ಸಿಕ್ ತಜ್ಞರು ಕೂಡಿ ಆತ್ಮಹತ್ಯೆಗೆ ಕಾರಣವಾದ ನಿಖರ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕುಟುಂಬದವರು ಹಾಗೂ ಪರಿಚಯಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.


