ಆನೇಕಲ್‌ನ ಇಂಜಿನಿಯರ್ ಶ್ರೀನಾಥ್, ನೀಡಿದ್ದ 40 ಲಕ್ಷ ರೂ. ಸಾಲವನ್ನು ವಾಪಸ್ ಕೇಳಿದ್ದಕ್ಕೆ ತನ್ನ ಸಹೋದರ ಸಂಬಂಧಿಯಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾರೆ. 'ದೃಶ್ಯಂ' ಸಿನಿಮಾ ಮೀರಿಸುತ್ತೆ. ಹಂತಕರು ಮೃತದೇಹವನ್ನು ಆಂಧ್ರದ ಮನೆಯೊಂದರಲ್ಲಿ ಹೂತುಹಾಕಿದ್ದರು. ಬಯಲಾಗಿದ್ದು ಹೇಗೆ?
ಆನೇಕಲ್/ಬೆಂಗಳೂರು (ನ.21): ಸಾಲವಾಗಿ ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಸಹೋದರ ಸಂಬಂಧಿಯನ್ನೇ ಅಮಾನುಷವಾಗಿ ಕೊಲೆ ಮಾಡಿ, ಆಂಧ್ರದ ಮನೆಯೊಂದರಲ್ಲಿ ಮೃತದೇಹವನ್ನು ಹೂತು ಹಾಕಿರುವ ದೃಶ್ಯಂ ಸಿನಿಮಾ ಸ್ಟೈಲ್‌ನ ಘಟನೆಯೊಂದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಆಂಧ್ರದ ಕುಪ್ಪಂ ಮೂಲದವರಾಗಿದ್ದು, ಅತ್ತಿಬೆಲೆ ಸಮೀಪದ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದ ಶ್ರೀನಾಥ್ (30) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಹಂತಕರು ಮೃತನ ಚಿಕ್ಕಪ್ಪನ ಮಗನಾದ ಪ್ರಭಾಕರ್ ಮತ್ತು ಆತನ ಸ್ನೇಹಿತ ಜಗದೀಶ್. ಮೃತ ಶ್ರೀನಾಥ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಕೈತುಂಬಾ ಸಂಬಳ ಗಳಿಸುತ್ತಿದ್ದರು.
40 ಲಕ್ಷ ವಾಪಸ್ ಕೇಳಿದ್ದಕ್ಕೇ ಮರ್ಡರ್:
ಹಣವನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಆರೋಪಿ ಪ್ರಭಾಕರ್ ತನ್ನ ಸ್ವಂತ ಸಹೋದರ ಸಂಬಂಧಿ ಶ್ರೀನಾಥ್ ಅವರಿಂದ 40 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇತ್ತೀಚೆಗೆ ಶ್ರೀನಾಥ್ ಪ್ರಭಾಕರ್ ಬಳಿ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಕುಪಿತನಾದ ಪ್ರಭಾಕರ್ ತನ್ನ ಸ್ನೇಹಿತ ಜಗದೀಶ್ ಜೊತೆ ಸೇರಿ ಶ್ರೀನಾಥ್ ಕೊಲೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ.
ಕರ್ನಾಟದಲ್ಲಿ ಮಿಸ್ಸಿಂಗ್, ಆಂಧ್ರದಲ್ಲಿ ಕೊಲೆ:
ಹಣ ಹಿಂದಿರುಗಿಸುವುದಾಗಿ ಶ್ರೀನಾಥ್‌ಗೆ ಕರೆ ಮಾಡಿದ್ದ ಪ್ರಭಾಕರ್, ಆಂಧ್ರದ ಕುಪ್ಪಂಗೆ ಕರೆಸಿಕೊಂಡಿದ್ದ. ಕುಪ್ಪಂಗೆ ಹೋಗುವ ಮುನ್ನ ಶ್ರೀನಾಥ್ ತಮ್ಮ ಪತ್ನಿಗೆ ವಿಷಯ ತಿಳಿಸಿ ಹೋಗಿದ್ದರು. ಪ್ರಭಾಕರ್ ಮನೆಯೊಳಗೆ ಶ್ರೀನಾಥ್ ಬರುತ್ತಿದ್ದಂತೆ, ಹಂತಕರು ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ, ಇವರಿಬ್ಬರೂ ಸೇರಿ ಅದೇ ಮನೆಯೊಳಗೆ ಗುಂಡಿ ತೋಡಿ ಮೃತದೇಹವನ್ನು ಹೂತುಹಾಕಿದ್ದಾರೆ. ಕೃತ್ಯದ ನಂತರ ಪ್ರಭಾಕರ್ ಏನೂ ತಿಳಿಯದವರಂತೆ ನಾಟಕವಾಡಿದ್ದ. ಶ್ರೀನಾಥ್ ಪತ್ನಿ ವಿಚಾರಿಸಿದಾಗ, 'ನನ್ನ ಬಳಿಗೆ ಬಂದಿಲ್ಲ' ಎಂದು ಸುಳ್ಳು ಹೇಳಿದ್ದ ಹಂತಕರು.
ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ಎರಡು ದಿನವಾದರೂ ಶ್ರೀನಾಥ್ ಮನೆಗೆ ಬಾರದಿದ್ದಾಗ, ಅವರ ಪತ್ನಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ ಪ್ರಭಾಕರ್ ಮತ್ತು ಜಗದೀಶ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ತನಿಖೆ ವೇಳೆ ಹಂತಕರು ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದು, ಕುಪ್ಪಂನ ಮನೆಯಲ್ಲಿ ಮೃತದೇಹವನ್ನು ಹೂತು ಹಾಕಿದ್ದಾಗಿ ತಿಳಿಸಿದ್ದಾರೆ. ತಕ್ಷಣವೇ ಅತ್ತಿಬೆಲೆ ಪೊಲೀಸರು ಕುಪ್ಪಂ ತಹಶೀಲ್ದಾರ್ ಅವರ ನೇತೃತ್ವದಲ್ಲಿ ಗುಂಡಿ ತೋಡಿ ಶ್ರೀನಾಥ್ ಅವರ ಮೃತದೇಹವನ್ನು ಹೊರತೆಗೆದರು.
ಅತ್ತಿಬೆಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸಂಬಂಧಿಯೊಬ್ಬರನ್ನು ಕೊಂದ ಈ ಪಾಪಿಗಳ ಕೃತ್ಯ ಅತ್ತಿಬೆಲೆ ಮತ್ತು ನೆರಳೂರು ಭಾಗದಲ್ಲಿ ಆಘಾತ ಮೂಡಿಸಿದೆ.


