ಕೆಲ ದಿನಗಳ ಹಿಂದೆಯಷ್ಟೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಕ್ರಂ ಭಟ್ ಪ್ರತಿಕ್ರಿಯೆ ನೀಡಿದ್ದರು. ‘ಎಲ್ಲವೂ ಆಧಾರರಹಿತ, ನಮ್ಮ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರ ನನಗೆ ಗೊತ್ತಾಗಿದೆ, ಪೊಲೀಸರಿಗೆ ತಪ್ಪು ಮಾಹಿತಿ ನೀಡಲಾಗಿದೆ’ ಎಂದಿದ್ದರು.
ಬಾಲಿವುಡ್ ಹಿರಿಯ ನಿರ್ದೇಶಕ ವಿಕ್ರಂ ಭಟ್ (Vikram Bhatt) ಅರೆಸ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಪತ್ನಿ ಶ್ವೇತಾಂಬರಿ ಭಟ್ (Shwetambari Bhatt) ಕೂಡ ಅರೆಸ್ಟ್ ಅಗಿದ್ದಾರೆ. ಬರೋಬ್ಬರಿ ಮೂವತ್ತು ವರ್ಷಗಳ ಕಾಲ ಮಾಡಿರುವ ಸಾಧನೆ ಇದೀಗ ಮಣ್ಣುಪಾಲು ಆಗಿದೆ. ಹಣ ಕಂಡರೆ ಹೆಣವೂ ಬಾಯಿಬಾಯಿ ಬಿಡುತ್ತದೆ ಎನ್ನುವ ಈ ಕಾಲದಲ್ಲಿ ತಮ್ಮ ಇಳಿವಯಸ್ಸಿನಲ್ಲಿ ಹಣದ ವ್ಯಾಮೋಹಕ್ಕೆ ಒಳಗಾಗಿ ಈ ಹಿರಿಯ ವ್ಯಕ್ತಿಗಳು ಜೈಲುಪಾಲು ಆಗಿರೋದು ಹಲವರಿಗೆ ಅಚ್ಚರಿ ತಂದಿದೆ. ಹೌದು, ಆದರೆ ಇದು ನಿಜ..!
ಕೆಲವರು ತಾವು ದೀಢೀರ್ ಶ್ರೀಮಂತರಾಗಬೇಕು ಎನ್ನುವ ಕಾರಣಕ್ಕೆ ತಮ್ಮದಲ್ಲದ ಅಡ್ಡದಾರಿ ಹಿಡಿಯುತ್ತಾರೆ. ಹಲವರಿಗೆ ಮೋಸ ಮಾಡುತ್ತಾರೆ. ಇನ್ನೂ ಕೆಲವರು ಕಾನೂನು, ಪೊಲೀಸ್ ಅಂತ ಕೂಡ ಭಯವನ್ನು ಪಡದೇ ನಿರ್ಭೀತಿಯಿಂದ ಅಪರಾಧ ಎಸಗುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ, ಏನೆನೋ ಮಾಡುತ್ತಾರೆ. ಆದರೆ ಇದೀಗ ಈ ಸಾಲಿಗೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಕೂಡ ಸೇರಿಕೊಂಡಿದ್ದು ಭಾರೀ ದುರಂತ ಎನ್ನಬಹುದು.
ಹೌದು, ವಿಕ್ರಮ್ ಭಟ್ ಅವರು ಬಾಲಿವುಡ್‌ನ ಸ್ಟಾರ್ ನಿರ್ದೇಶಕರು. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ ಇರುವವರು. ಕಸೂರ್, ಫರೇಬ್, ಗುಲಾಮ್, ಆಪ್ ಮುಝೇ ಅಚ್ಚೆ ಲಗನೇ ಲಗೇ, ಆವಾರಾ ಪಾಗಲ್ ದಿವಾನಾ, ದಿವಾನೆ ಹುಯೇ ಪಾಗಲ್, ರಾಝ್ ಹೀಗೆ ಹಲವು ಸಿನಿಮಾಗಳನ್ನು ಬ್ಲಾಕ್ ಬಸ್ಟರ್ ಚಿತ್ರಗಳನ್ನು ಭಾರತೀಯ ಪ್ರೇಕ್ಷಕರಿಗೆ ಕೊಟ್ಟವರು. ತಮ್ಮ ಸದಭಿರುಚಿ ಚಿತ್ರಗಳ ಮೂಲಕ ಚಿತ್ರೋದ್ಯಮದಲ್ಲಿಯೇ ಹೊಸ ಅಲೆ ಎಬ್ಬಿಸಿದ್ದ ನಿರ್ದೇಶಕರು. ವಿಕ್ರಂ ಭಟ್ ನಿರ್ದೇಶನದ ಬ್ಲಾಕ್‌ಬಸ್ಟರ್ ಸಿನಿಮಾ "ರಾಝ್' ಚಿತ್ರರಂಗದಲ್ಲಿ ಭಾರೀ ಹವಾ ಎಬ್ಬಿಸಿತ್ತು.
1920, ಶಾಪಿತ್, ಹಾಟೆಂಡ್, ರಾಝ್, ರಾಝ್ 3D, ರಾಝ್ ರೀಬೂಟ್, ಹೀಗೆ ಹಲವಾರು ಪ್ರೇತಾತ್ಮದ ಕಥೆಯನ್ನೊಂದಿರುವ ಹಾರರ್ ಚಿತ್ರಗಳನ್ನು ಈ ನಿರ್ದೇಶಕರು ತೆರೆಗೆ ತಂದಿದ್ದಾರೆ. ಇಂಥ ಗ್ರೇಟ್ ಡೈರೆಕ್ಟರ್ ವಿಕ್ರಂ ಭಟ್ ಅವರನ್ನು ಸದ್ಯ ರಾಜಸ್ಥಾನದ ಪೊಲೀಸರು ಮುಂಬೈಗೆ ಬಂದು ಬಂಧಿಸಿದ್ದಾರೆ. ಮುಂಬೈನ ವೆರ್ಸೋವಾ, ಅಂಧೇರಿ ಪಶ್ಚಿಮದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ವಿಕ್ರಮ್ ಭಟ್ ಅವರನ್ನು ವಶಕ್ಕೆ
ಪಡೆದಿದ್ದಾರೆ. ಅವರ ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದು ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಉದಯಪುರಕ್ಕೆ ಕರೆದೊಯ್ದಿದ್ದಾರೆ.
ಬರೋಬ್ಬರಿ 30 ಕೋಟಿ ವಂಚನೆ ಪ್ರಕರಣ ವಿಕ್ರಮ್ ಭಟ್ ವಿರುದ್ಧ ದಾಖಲಾಗಿದೆ. ಉದಯಪುರದ ಇಂದಿರಾ ಗ್ರೂಫ್ ಆಫ್ ಕಂಪನಿಯ ಮಾಲೀಕ ಡಾ. ಅಜಯ್ ಮುರ್ದಿಯಾ ಅವರು ವಿಕ್ರಮ್ ಭಟ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಡಾ ಅಜಯ್ ಮುರ್ದಿಯಾ ಇಹಲೋಕ ತ್ಯಜಿಸಿದ ತಮ್ಮ ಪತ್ನಿಯ ಜೀವನಾಧಾರಿತ ಚಿತ್ರವನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಮೆಹಬೂಬ್ ಮತ್ತು ದಿನೇಶ್ ಕಠಾರಿಯಾ ನೆರವು ಪಡೆದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ವಿಕ್ರಂ ಭಟ್ ಅವರನ್ನು ಮುಂಬೈನ ವೃಂದಾವನ ಸ್ಟುಡಿಯೋದಲ್ಲಿ ಭೇಟಿಯಾಗಿದ್ದರು.
ಈ ಮಾತುಕತೆ ಸಮಯದಲ್ಲಿ 200 ಕೋಟಿ ರೂ. ಲಾಭದ ಆಸೆ ತೋರಿಸಿದ್ದ ವಿಕ್ರಂ ಭಟ್ ಅವರು ಡಾ.ಅಜಯ್ ಮುರ್ದಿಯಾ ಅವರಿಂದ 30 ಕೋಟಿ ಹಣವನ್ನು ಪಡೆದಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿಯಷ್ಟೇ ಉಳಿಯಿತೇ ಹೊರತೂ ಸಿನಿಮಾ ಆಗಲೇ ಇಲ್ಲ. ಈ ಹಿನ್ನೆಲೆ ಡಾ ಅಜಯ್ ಮುರ್ದಿಯಾ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದರು. ಡಾ ಅಜಯ್ ಮುರ್ದಿಯಾ ನೀಡಿದ ದೂರಿನ ಅನ್ವಯ ಉದಯಪುರ ಪೊಲೀಸರು ವಿಕ್ರಂ ಭಟ್ ಹಾಗೂ ಅವರ ಪತ್ನಿ ಶ್ವೇತಾಂಬರಿ ಭಟ್ ಹಾಗೂ ಇತರ ಆರು ಜನರ ವಿರುದ್ಧ ಏಳು ದಿನಗಳ ಹಿಂದೆಯೇ ಲೂಕೌಟ್ ನೋಟಿಸ್ ಜಾರಿಗೊಳಿಸಿದ್ದು, ಈಗ ಅರೆಸ್ಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಕ್ರಂ ಭಟ್ ಪ್ರತಿಕ್ರಿಯೆ ನೀಡಿದ್ದರು. 'ಎಲ್ಲವೂ ಆಧಾರರಹಿತ' ಎಂದು ಹೇಳಿದ್ದರು. 'ನಮ್ಮ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಚಾರ ನನಗೆ ಗೊತ್ತಾಗಿದೆ, ಪೊಲೀಸರಿಗೆ ತಪ್ಪು ಮಾಹಿತಿ ನೀಡಲಾಗಿದೆ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಸತ್ಯಕ್ಕೆ ದೂರವಾಗಿವೆ' ಎಂದು ಹೇಳಿದ್ದರು. 'ಪೊಲೀಸರನ್ನು ನಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿರಬೇಕು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ' ಎಂದಿದ್ದ ವಿಕ್ರಂ ಭಟ್ ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು. ನನ್ನ ಹೇಳಿಕೆಗಳಿಗೆ ಪೂರಕವಾಗಿ ನನ್ನ ಬಳಿ ಸಂಪೂರ್ಣ ಪುರಾವೆಗಳಿವೆ. ಪೊಲೀಸರಿಗೆ ಸಾಕ್ಷಿಗಳು ಬೇಕಾದರೆ, ನಾನು ಎಲ್ಲವನ್ನೂ ತೋರಿಸುತ್ತೇನೆ' ಎಂದು ಕೂಡ ಹೇಳಿದ್ದರು. ಆದರೆ ಇದೀಗ ಅರೆಸ್ಟ್ ಆಗಿ ತನಿಖೆಗೆ ಒಳಪಟ್ಟಿದ್ದಾರೆ.


