ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ತಮ್ಮ ಸಹ ಕೈದಿಗಳ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ಹಿಂಸೆ ತಾಳಲಾರದೆ, ಇಬ್ಬರು ಸಹ ಕೈದಿಗಳು ತಮ್ಮನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು (ಡಿ.08): ನಟ ದರ್ಶನ್ ಜೈಲಿಗೆ ಹೋದ ನಂತರವೂ ತಮ್ಮ ಹಳೆಯ ವರ್ತನೆಯನ್ನು ಮುಂದುವರಿಸಿದ್ದು, ಇದರಿಂದ ಅವರ ಸೆಲ್‌ನಲ್ಲಿರುವ ಇತರ ಸಹ ಕೈದಿಗಳು ವಿಲವಿಲ ಒದ್ದಾಡುತ್ತಿದ್ದಾರೆ ಎಂಬ ಗಂಭೀರ ಮಾಹಿತಿ ಲಭ್ಯವಾಗಿದೆ. ತನ್ನೊಂದಿಗೆ ಇರುವ ಸಹ ಕೈದಿಗಳು ಮಲಗಿದ್ದ ವೇಳೆ ಕಾಲಿನಿಂದ ಒದೆಯುವುದು, ದೌರ್ಜನ್ಯ ಮಾಡುವುದು, ಅವ್ಯಾಚ್ಯ ಪದಗಳಿಂದ ನಿಂದನೆ ಮಾಡುವುದನ್ನು ಮಾಡುತ್ತಿದ್ದಾರಂತೆ. ವಿಶೇಷವಾಗಿ, ಇತ್ತೀಚೆಗೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಹೊಸ ಮತ್ತು ಕಠಿಣ ನಿಯಮಗಳು ಜಾರಿಯಾದ ಬಳಿಕ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ದರ್ಶನ್ ವಿರುದ್ಧ ಅವರೊಂದಿಗೆ ಜೈಲಲ್ಲಿರುವ ಕೈದಿಗಳು ತಮ್ಮನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಕಠಿಣ ನಿಯಮಗಳಿಂದ ದರ್ಶನ್ ಸ್ಥಿಮಿತ ಕಳೆದುಕೊಂಡ ಆರೋಪ

ಜೈಲಿನಲ್ಲಿ ಕೆಲವು ಫೋಟೋಗಳು ವೈರಲ್ ಆದ ನಂತರ, ಆಡಳಿತವು ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕವಾದ ನಂತರ, ಜೈಲಿನ ನಿಜವಾದ ಕಠಿಣ ರೂಲ್ಸ್‌ಗಳು ಜಾರಿಗೆ ಬಂದಿವೆ. ಹೊಸ ನಿಯಮಗಳ ಪ್ರಕಾರ, ಆರೋಪಿಗಳು ತಮ್ಮ ಸೆಲ್ ಮತ್ತು ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವುದು ಕಡ್ಡಾಯವಾಗಿದೆ. ಈ ಕಟ್ಟುನಿಟ್ಟಿನ ನಿಯಮಗಳಿಂದ ನಟ ದರ್ಶನ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಒಂದು ಕಡೆ ಬೇಲ್ ಸಿಗದ ಚಿಂತೆ, ಮತ್ತೊಂದೆಡೆ ಜೈಲಿನ ಕಠಿಣ ಶಿಸ್ತು, ಜೊತೆಗೆ ಸಹ ಕೈದಿಗಳ ಮೇಲಿನ ದೌರ್ಜನ್ಯ ಇವೆಲ್ಲ ಸೇರಿ ಸೆಲ್‌ನಲ್ಲಿನ ವಾತಾವರಣ ಸಂಪೂರ್ಣ ಹದಗೆಟ್ಟಿದೆ.

ಸೆಲ್‌ನಲ್ಲಿ ದೊಡ್ಡ ಜಗಳ; ದೈಹಿಕ ಮತ್ತು ಮಾನಸಿಕ ಹಿಂಸೆ

ದರ್ಶನ್ ಇರುವ ಸೆಲ್‌ನಲ್ಲಿ ಒಟ್ಟು ಐವರು ಆರೋಪಿಗಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಇತರೆ ಆರೋಪಿಗಳಾದ ಅನುಕುಮಾರ್, ಜಗ್ಗ, ನಾಗರಾಜ್, ಪ್ರದೋಶ್ ಮತ್ತು ಲಕ್ಷ್ಮಣ್ ದರ್ಶನ್ ಜೊತೆಗಿದ್ದಾರೆ. ಇದರಲ್ಲಿ ಆರೋಪಿ ನಾಗರಾಜ್ ಹೊರತುಪಡಿಸಿ ಉಳಿದವರಿಗೆ ದರ್ಶನ್ ಅವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ದರ್ಶನ್ ಸೆಲ್‌ನಲ್ಲಿ ದೊಡ್ಡ ಜಗಳ ನಡೆದಿದೆ. ಜಗ್ಗ ಮತ್ತು ದರ್ಶನ್ ನಡುವೆ ಗಲಾಟೆ ಜೋರಾಗಿದ್ದಾಗ, ಜೈಲಧಿಕಾರಿಗಳು ಮಧ್ಯ ಪ್ರವೇಶಿಸಿ ಅದನ್ನು ತಿಳಿಗೊಳಿಸಿದ್ದಾರೆ. ಅಲ್ಲದೆ, ದರ್ಶನ್ ಮಲಗಿದ್ದವರನ್ನು ಕಾಲಿನಿಂದ ಒದ್ದು ಎಬ್ಬಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ. ವಕೀಲರ ನೇಮಕದ ವಿಚಾರವಾಗಿಯೂ ಸೆಲ್‌ನಲ್ಲಿ ನಿರಂತರವಾಗಿ ಜಗಳಗಳು ನಡೆಯುತ್ತಿವೆ.

ಬೇರೆ ಜೈಲಿಗೆ ವರ್ಗಾವಣೆಗೆ ಮನವಿ

ದರ್ಶನ್ ಅವರ ಈ ಚಿತ್ರಹಿಂಸೆಯನ್ನು ಸಹಿಸಲಾಗದೆ ಇಬ್ಬರು ಸಹ ಕೈದಿಗಳು ಬೇರೆ ಜೈಲಿಗೆ ವರ್ಗಾವಣೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ (ಜಗ್ಗ) ಅವರು ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಿದ್ದಾರೆ. ನಾನು ಇಲ್ಲೇ ಇದ್ದರೆ ಸಾಯುತ್ತೇನೆ, ದರ್ಶನ್ ಹಿಂಸೆ ತಡೆಯಲಾಗುತ್ತಿಲ್ಲ' ಎಂದು ಅನುಕುಮಾರ್ ಅವರು ಜೈಲಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿರುವ ಜೈಲು ಅಧಿಕಾರಿಗಳು, ದರ್ಶನ್ ಸೆಲ್‌ನ ಬಳಿ ಸಿಸಿ ಕ್ಯಾಮರಾ ಅಳವಡಿಸಿ ತೀವ್ರ ನಿಗಾ ವಹಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಜೈಲಿನಲ್ಲಿ ನಡೆಸುತ್ತಿರುವ ಈ ದರ್ಬಾರ್‌ನ ಸುದ್ದಿ ರಾಜ್ಯ ರಾಜಕೀಯ ಮತ್ತು ಚಿತ್ರರಂಗದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಇನ್ನು ಮನೆಯಲ್ಲಿದ್ದಾಗಲೂ ನಟ ದರ್ಶನ್ ಹೆಂಡತಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದು ಹಳೆಯ ವಿಚಾರವಾಗಿದೆ.