ಡಿಸೆಂಬರ್ 20 ರಂದು ವಿವಾಹವಾಗಬೇಕಿದ್ದ ಭಾವಿ ದಂಪತಿ, ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಕೊಪ್ಪಳದ ಗಂಗಾವತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಲಾರಿ ಅವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಸಾವು. ಮದುವೆ ಮನೆಯಲ್ಲಿ ಸೂತಕ.

ಕೊಪ್ಪಳ (ಡಿ.8): ಇದೇ ಡಿಸೆಂಬರ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದ ಭಾವಿ ದಂಪತಿಗಳು, ಮದುವೆಗೆ ಮುನ್ನ ತೆಗೆಸುವ 'ಪ್ರಿ-ವೆಡ್ಡಿಂಗ್ ಶೂಟಿಂಗ್' ಮುಗಿಸಿ ವಾಪಸಾಗುತ್ತಿದ್ದ ವೇಳೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬೆಣಕಲ್ ಗ್ರಾಮದ ಬಳಿ ನಡೆದಿದೆ.

ಮದುವೆ ಸಂಭ್ರಮದ ಮನೆಯಲ್ಲೀಗ ಸೂತಕ:

ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ನಿವಾಸಿ ಕರಿಯಪ್ಪ‌ ಮಡಿವಾಳ (26) ಮತ್ತು ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮದ ಕವಿತಾ ಪವಾಡೆಪ್ಪ ಮಡಿವಾಳ (19) ಮೃತ ದುರ್ದೈವಿಗಳು. ಈ ಜೋಡಿಯ ಮದುವೆಗೆ ಸಕಲ ಸಿದ್ಧತೆಗಳು ನಡೆದಿತ್ತು. ಹೊಸಪೇಟೆ, ಪಂಪಾವನ, ಮತ್ತು ಮುನಿರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಮದುವೆಯ ಪ್ರಿವೆಡ್ಡಿಂಗ್ ಫೋಟೋಶೂಟ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಇಬ್ಬರೂ ಸ್ಥಳದಲ್ಲೇ ದುರ್ಮರಣ:

ಭಾವಿ ದಂಪತಿಗಳು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ವೇಗವಾಗಿ ಬಂದ ಲಾರಿಯೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಿಂದಾಗಿ ಎರಡೂ ಕುಟುಂಬಗಳಲ್ಲಿ ದುಃಖ ಮಡುವುಗಟ್ಟಿದೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.