ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಮತ್ತು ಸ್ಟ್ರೆಚರ್ ಲಭ್ಯವಿಲ್ಲದ ಕಾರಣ, ಮೂರ್ಛೆ ರೋಗದಿಂದ ಬಳಲುತ್ತಿದ್ದ ರೋಗಿಯನ್ನು ಅವರ ಸಂಬಂಧಿಕರೇ ಮೂರನೇ ಮಹಡಿಯಿಂದ ಹೊತ್ತುಕೊಂಡು ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿದ್ದಾರೆ. ಈ ಅಮಾನವೀಯ ಘಟನೆಯು ಆಸ್ಪತ್ರೆಯ ತೀವ್ರ ಅವ್ಯವಸ್ಥೆಯನ್ನು ತೋರಿಸಿದೆ.
ಕೊಪ್ಪಳ (ನ.22): ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂಬಂತೆ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಹಾಗೂ ಸ್ಟ್ರೆಚರ್ ಇಲ್ಲದ ಕಾರಣ, ಅಸ್ವಸ್ಥ ರೋಗಿಯನ್ನು ಸಂಬಂಧಿಕರೇ ಹೊತ್ತುಕೊಂಡು ಓಡಾಡಿದ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ:
ಕೊಪ್ಪಳ ತಾಲೂಕಿನ ಇಂದ್ರಾನಗರ ತಾಂಡಾ ನಿವಾಸಿಯೊಬ್ಬರು ಕಳೆದ ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಏಕಾಏಕಿ ರೋಗಿಗೆ ಮೂರ್ಛೆ ಬಂದು ನರಳಾಡಲು ಪ್ರಾರಂಭಿಸಿದ್ದಾರೆ. ರೋಗಿ ಮೂರನೇ ಮಹಡಿಯಲ್ಲಿದ್ದರೂ, ತುರ್ತು ಪರಿಸ್ಥಿತಿಯಲ್ಲಿ ತಪಾಸಣೆ ನಡೆಸಲು ಯಾವೊಬ್ಬ ವೈದ್ಯರೂ ಸ್ಥಳಕ್ಕೆ ಬರಲಿಲ್ಲ ಎನ್ನಲಾಗಿದೆ.
ವೈದ್ಯರು ಬಾರದ ಹಿನ್ನೆಲೆಯಲ್ಲಿ, ಗಾಬರಿಗೊಂಡ ಸಂಬಂಧಿಕರು ರೋಗಿಯನ್ನು ತಾವೇ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ಅಲ್ಲಿ ರೋಗಿಯನ್ನು ಕರೆದೊಯ್ಯಲು ವ್ಹೀಲ್ ಚೇರ್ ಆಗಲಿ ಅಥವಾ ಸ್ಟ್ರೆಚರ್ ಆಗಲಿ ಲಭ್ಯವಿರಲಿಲ್ಲ. ಅಂತಿಮವಾಗಿ ಬೇರೆ ದಾರಿ ಕಾಣದೆ, ಸಂಬಂಧಿಕರೇ ರೋಗಿಯನ್ನು ಮೂರನೇ ಮಹಡಿಯಿಂದ ಎತ್ತಿಕೊಂಡು ಕೆಳಗಿನ ಎಮರ್ಜೆನ್ಸಿ ವಾರ್ಡ್‌ಗೆ ಓಡಿ ಬಂದಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಜಿಲ್ಲಾ ಕೇಂದ್ರದ ದೊಡ್ಡ ಆಸ್ಪತ್ರೆಯಲ್ಲೇ ಕನಿಷ್ಠ ಮೂಲಭೂತ ಸೌಕರ್ಯಗಳಾದ ವ್ಹೀಲ್ ಚೇರ್ ಮತ್ತು ಸ್ಟ್ರೆಚರ್ ಕೊರತೆ ಎದುರಾಗಿರುವುದು ಸಾರ್ವಜನಿಕರ ಮತ್ತು ರೋಗಿಗಳ ಸಂಬಂಧಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹ ಕೇಳಿಬಂದಿದೆ.


