ಫೆಬ್ರವರಿ 13 ರಿಂದ 15ರವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ. ಈ ಬಾರಿಯ ಉತ್ಸವದಲ್ಲಿ ತಾರೆಯರ ಕಳೆ, ಅದ್ಭುತ ಸಂಗೀತ ಕಾರ್ಯಕ್ರಮಗಳ ಜೊತೆಗೆ, ಸಾವಿರಕ್ಕೂ ಅಧಿಕ ಡ್ರೋನ್ಗಳನ್ನು ಬಳಸಿ ಹಂಪಿಯ ಗತವೈಭವವನ್ನು ಆಗಸದಲ್ಲಿ ಚಿತ್ರಿಸುವ ವಿಶೇಷ ಡ್ರೋನ್ ಶೋ ಪ್ರಮುಖ ಆಕರ್ಷಣೆ.
ಹೊಸಪೇಟೆ (ಫೆ.10): ಹಂಪಿ ಉತ್ಸವವು ಫೆ.13ರಿಂದ 15ರವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಜಯನಗರ ಸಾಮ್ರಾಜ್ಯದ ಗತವೈಭವ, ಸುವರ್ಣಯುಗ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಂಪಿ ಉತ್ಸವಕ್ಕೆ ಐದು ವೇದಿಕೆ ನಿರ್ಮಾಣ
ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಫೆ.13ರಂದು ಅಧಿಕೃತವಾಗಿ ಚಾಲನೆ ನೀಡುವರು. ಉತ್ಸವದ ಅಂಗವಾಗಿ 5 ವೇದಿಕೆ ನಿರ್ಮಿಸಲಾಗಿದ್ದು, ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಅದರಂತೆ ಫೆ.7ರಿಂದಲೇ ಈಗಾಗಲೇ ಹಲವು ಕಾರ್ಯಕ್ರಮ ಆರಂಭವಾಗಿವೆ. ಫೆ.10ರಂದು ಬೆಳಿಗ್ಗೆ 8ಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನದವರೆಗೆ ಬೈಕ್ ರ್ಯಾಲಿ, ಫೆ.11ರಂದು ಸಂಜೆ 6ಕ್ಕೆ ತುಂಗಾ ಆರತಿ, ಫೆ,12ರಂದು ಬೆಳಗ್ಗೆ 10 ಗಂಟೆಗೆ ಮಯೂರ ಭುವನೇಶ್ವರಿ ಹೋಟೆಲ್ ಆವರಣದಲ್ಲಿ ಹಂಪಿ ಬೈಸ್ಕೆಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ3ಕ್ಕೆ ವಡಕರಾಯನ ದೇವಸ್ಥಾನದಿಂದ ಪುನೀತ್ ರಾಜ್ ಕುಮಾರ್ ವೃತ್ತದವರೆಗೆ ವಸಂತ ವೈಭವ ಮೆರವಣಿಗೆ ನಡೆಯಲಿದೆ. ಅದೇ ದಿನದಂದು ವಿಶೇಷವಾಗಿ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ವಸಂತ ಆರತಿ ಹಮ್ಮಿಕೊಳ್ಳಲಾಗಿದೆ ಎಂದರು.
ಫೆ.3ರಂದು ವಿಶ್ವಪಾರಂಪರಿಕ ತಾಣವಾದ ಹಂಪಿ ನಿರ್ವಹಣಾ ಪ್ರಾಧಿಕಾರ ಕಚೇರಿ ಹಿಂಭಾಗ ವಿವಿಧ ತಳಿಗಳ ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಬೋಟಿಂಗ್, ಹಂಪಿ ವಿಚಾರ ಕುರಿತು ವಿಚಾರ ಸಂಕಿರಣ ಹಾಗೂ ಆಹಾರ ಮೇಳ ಆಯೋಜಿಸಲಾಗಿದೆ. ಫೆ.14ರಂದು ಗ್ರಾಮೀಣ ಕ್ರೀಡೆ, ಸಾಹಸ ಕ್ರೀಡೆಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಅವರು ವಿವರಿಸಿದರು.
ಹಂಪಿ ಉತ್ಸವಕ್ಕೆ ಸ್ಟಾರ್ ನಟರು
ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಉತ್ಸವಕ್ಕೆ ಚಾಲನೆ ನೀಡುವರು. ಮುಖ್ಯ ವೇದಿಕೆಯಾದ ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಗಣ್ಯರೊಂದಿಗೆ ನಟ ಶಿವರಾಜಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ರುಕ್ಮಿಣಿ ವಸಂತ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ಗಾಯಕ ವಿಜಯ್ ಪ್ರಕಾಶ್ ಮತ್ತು ಹರಿಹರನ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ಶಮಿತಾ ಮಲ್ನಾಡ್ ತಂಡ, ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಕಲಾವತಿ ದಯಾನಂದ್ ತಂಡದಿಂದ ಸುಮಧುರ ಗೀತಗಾಯನ ನಡೆಸಿಕೊಡಲಿದ್ದಾರೆ.
ಫೆ.14ರಂದು ಮುಖ್ಯ ವೇದಿಕೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಾಜ್ ಬಿ. ಶೆಟ್ಟಿ, ಸಪ್ತಮಿ ಗೌಡ, ಝೈದ್ ಖಾನ್, ಗಿಲ್ಲಿ ಮತ್ತು ಕಾವ್ಯ ಅವರ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ನವೀನ್ ಸಜ್ಜು, ಅರ್ಜುನ್ ಜನ್ಯ ತಂಡದಿಂದ ಗೀತಗಾಯನ ಪ್ರಸ್ತುತಿ. ಶ್ರೀಕೃಷ್ಣದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ಎಂ.ಡಿ. ಪಲ್ಲವಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ. ವಿರೂಪಾಕ್ಷೇಶ್ವರ ವೇದಿಕೆಯ ಬಳಿ ಹೊಸಪೇಟೆಯ ಸ್ವರಾರ್ಥ ಬ್ಯಾಂಡ್ ವತಿಯಿಂದ ಸುಮಧುರ ಗೀತೆ ಗಾಯನ ಪ್ರಸ್ತುತಪಡಿಸಲಿದ್ದಾರೆ.
ಫೆ.15ರಂದು ಮುಖ್ಯ ವೇದಿಕೆಯಲ್ಲಿ ನಟರಾದ ಡಾಲಿ ಧನುಂಜಯ್, ಧ್ರುವ ಸರ್ಜಾ, ರಚಿತಾರಾಮ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ನಂತರ ರಘು ದೀಕ್ಷಿತ್, ಮಂಗಲಿ, ಮಣಿಕಾಂತ್ ಖದ್ರಿ ತಂಡದಿಂದ ಗಾಯನ ಏರ್ಪಡಿಸಲಾಗಿದೆ. ಶ್ರೀಕೃಷ್ಣ ದೇವರಾಯ (ಎದುರು ಬಸವಣ್ಣ) ವೇದಿಕೆಯಲ್ಲಿ ವಾಸುಕಿ ವೈಭವ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ. ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಬಿಗ್ಬಾಸ್ ವಿಜೇತ ತಂಡ ಹನುಮಂತ ಮತ್ತು ತಂಡದಿಂದ ಗೀತ ಗಾಯನದೊಂದಿಗೆ ಜನಮನ ರಂಜಿಸಲಿದ್ದಾರೆ ಎಂದರು.
ವಿಶೇಷ ಡ್ರೋನ್ ಶೋ:
ಈ ಬಾರಿಯ ವಿಶೇಷವಾಗಿ ಒಂದು ಸಾವಿರಕ್ಕೂ ಅಧಿಕ ಡ್ರೋನ್ ಬಳಸಿ ಹಂಪಿ ಗತವೈಭವ ಸಾರುವ 12 ಹಂಪಿಯ ಚಿತ್ರಗಳು ಆಗಸದಲ್ಲಿ ಮೂಡಿಬರಲಿವೆ. ಇದು ಹಂಪಿ ಉತ್ಸವದ ವಿಶೇಷವಾಗಿದ್ದು, ಪ್ರಮುಖ ವೇದಿಕೆ ಬಳಿ ಮೂರು ದಿನಗಳ ಕಾಲ ಡ್ರೋನ್ ದೀಪಗಳಲ್ಲಿ ಮಿಂದೇಳಲಿವೆ.
ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ: ಹಂಪಿ ಉತ್ಸವದ ಮೆರಗು ಕಣ್ತುಂಬಿಕೊಳ್ಳಲು ಜಿಲ್ಲೆಯ ಎಲ್ಲ ತಾಲೂಕಿಗೆ ಮೂರು ದಿನಗಳ ಕಾಲ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವವರಿಗೆ ಹಾಗೂ ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಉತ್ಸವ ಯಶಸ್ವಿಗೊಳಿಸಬೇಕು ಎಂದರು.
ಜಿಪಂ ಸಿಇಒ ನೋಂಗ್ಜಾಯ್ ಮೊಹ್ಮದ್ ಅಲಿ ಅಕ್ರಂ ಷಾ, ಎಸ್ಪಿ ಎಸ್.ಜಾಹ್ನವಿ, ಕನ್ನಡ- ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



