ಪಿಯುಸಿ ವಿದ್ಯಾರ್ಥಿ ಮತ್ತೊಬ್ಬ ಬಿಎ ಪದವೀಧರ ಡಾಕ್ಟರ್ ಕೆಲಸ ಮಾಡುವುದಕ್ಕೆ ಹೋಗಿ ತಾಯಿಯೊಬ್ಬಳ ಅಮೂಲ್ಯ ಜೀವವನ್ನು ಬಲಿ ಪಡೆದಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದ್ದು, ಈಗ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆಗೆ ಸಿ ಸೆಕ್ಷನ್ ಮಾಡಿದ ನಕಲಿ ಡಾಕ್ಟರ್; ಮಹಿಳೆ ಸಾವು
ಲಕ್ನೋ: ವೈದ್ಯರಾಗುವುದು ಎಂದರೆ ಅದೇನು ಕಡಿಮೆ ಸಾಹಸವಲ್ಲ, ಕನಿಷ್ಟ ಐದಾರು ವರ್ಷಗಳ ನಿರಂತರ ಅಧ್ಯಯನ ಹಾಗೂ ಪರಿಶ್ರಮ ಇದಕ್ಕೆ ಬೇಕು. ಆದರೆ ಇಲ್ಲಿಬ್ಬರು ಖದೀಮರು ಅದರಲ್ಲೊಬ್ಬ ಪಿಯುಸಿ ವಿದ್ಯಾರ್ಥಿ ಮತ್ತೊಬ್ಬ ಬಿಎ ಪದವೀಧರ ಡಾಕ್ಟರ್ ಕೆಲಸ ಮಾಡುವುದಕ್ಕೆ ಹೋಗಿ ತಾಯಿಯೊಬ್ಬಳ ಅಮೂಲ್ಯ ಜೀವವನ್ನು ಬಲಿ ಪಡೆದಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದ್ದು, ಈಗ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಸೆ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸುವುದಕ್ಕೆ ಹೋಗಿ ಆಕೆಯ ಜೀವ ತೆಗೆದಿದ್ದಾರೆ. ಇವರ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಪ್ರಾಣ ಬಿಟ್ಟಿದ್ದಾರೆ. ತನಿಖೆ ವೇಳೆ ಈ ಆಸ್ಪತ್ರೆಯೇ ಅಕ್ರಮವಾಗಿದೆ ಎಂಬುದು ತಿಳಿದು ಬಂದಿದ್ದು, ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಇನ್ನೂ ವಿಪರ್ಯಾಸವೆಂದರೆ ಕಳೆದ ಐದು ವರ್ಷಗಳಿಂದ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಹೀಗೆ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಮಾಡಿ ಆಕೆಯ ಸಾವಿಗೆ ಕಾರಣರಾದ ಆರೋಪಿಗಳನ್ನು ಮಾಲಿಪುರದ ಬಿಎ ಪದವೀಧರ 32 ವರ್ಷದ ಯೋಗೇಶ್ ವರ್ಮಾ ಮತ್ತು ಸುಲ್ತಾನ್ಪುರದ ಪಿಯುಸಿ ವಿದ್ಯಾರ್ಥಿ 19 ವರ್ಷದ ಶುಭಂ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಷ್ಕರಿಯ ಈ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ನವಜೀವನ್ ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಅರ್ಹತೆ ಪಡೆಯದೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರಿಂದ ಗರ್ಭಿಣಿ ಪ್ರಿಯಾಂಕಾ ಹೆರಿಗೆ ವೇಳೆ ಸಾವನ್ನಪ್ಪಿದ್ದಾರೆ.
ಮೃತ ಪ್ರಿಯಾಂಕಾ ಅವರನ್ನು ಫೆಬ್ರವರಿ 5 ರಂದು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರ ಪ್ರಕಾರ, ಆರೋಪಿಗಳು ಪ್ರಿಯಾಂಕಾಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಪ್ರಿಯಾಂಕಾಗೆ ಶಸ್ತ್ರಚಿಕಿತ್ಸೆ ವೇಳೆ ಅತಿಯಾದ ರಕ್ತಸ್ರಾವವಾಗಿದ್ದು, ಮರಳಿ ಪ್ರಜ್ಞೆ ಬಂದಿಲ್ಲ, ಆಕೆಯ ಸ್ಥಿತಿ ಹದಗೆಟ್ಟಾಗ, ಆಕೆಯನ್ನು ಲಕ್ನೋದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಅವರು ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಪ್ರಿಯಾಂಕಾ ಕುಟುಂಬದವರು ಆಸ್ಪತ್ರೆ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಜೋರಾಗುತ್ತಿದ್ದಂತೆ ಆಸ್ಪತ್ರೆಯ ನಿರ್ವಾಹಕಿ ರೂಬಿ ಸ್ಥಳದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ರೂಬಿಯನ್ನು ಪತ್ತೆಗೆ ಬಲೆ ಬೀಸಿದ್ದಾರೆ. ತನಿಖೆಯ ನೇತೃತ್ವ ವಹಿಸಿರುವ ಬಾಷ್ಕರಿಯ ಎಸ್ಎಚ್ಒ ಸುನಿಲ್ ಕುಮಾರ್ ಪಾಂಡೆ ಮಾತನಾಡಿ, ಶಸ್ತ್ರಚಿಕಿತ್ಸೆ ನಡೆಸಲು ಇಬ್ಬರು ವೈದ್ಯರು ಎಂದು ಕರೆಯಲ್ಪಡುವವರನ್ನು ಕರೆಸಲಾಯಿತು. ಹೀಗೆ ವೈದ್ಯರೆಂದು ಕರಸಿದ ಯೋಗೇಶ್ ವರ್ಮಾ ಕೇವಲ ಪದವೀಧರ, ಆತನ ತಂದೆ ಜಲಾಲ್ಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ತನ್ನ ತಂದೆಗೆ ಸಹಾಯ ಮಾಡುತ್ತಾ ಆತ ಮೂಲಭೂತ ವೈದ್ಯಕೀಯ ವಿಧಾನಗಳನ್ನು ಕಲಿತಿದ್ದಾನೆ. ಆತ ಹಲವಾರು ವರ್ಷಗಳ ಕಾಲ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ ಎಂದು ವರದಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ : 7 ಕಾರ್ಮಿಕರು ಸಜೀವ ದಹನ
ಎರಡನೇ ಆರೋಪಿ ಶುಭಂ ವಿಶ್ವಕರ್ಮ, ಸುಲ್ತಾನಪುರ ಜಿಲ್ಲೆಯ ಅಖಂಡನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವಾಯ್ನಲ್ಲಿರುವ ಬಜರಂಗ್ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ. ವಿಚಾರಣೆಯ ಸಮಯದಲ್ಲಿ, ಅವನು ತನ್ನ ಪಿಯುಸಿ ಮುಗಿಸಿದ ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ವೈದ್ಯರ ಕಾರ್ಯವಿಧಾನಗಳನ್ನು ಗಮನಿಸುವ ಮೂಲಕ ಅನುಭವವನ್ನು ಗಳಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರೂ ಆರೋಪಿಗಳು ಸುಮಾರು 5 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ನವಜೀವನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಲ್ಲಿದ ಅಧಿಕಾರಿಗಳ ಕರೆಯ ಮೇರೆಗೆ ಬಂದಿದ್ದರು ಎನ್ನಲಾಗಿದೆ.
ಪೊಲೀಸ್ ಮೂಲಗಳು ಬಹಿರಂಗಪಡಿಸಿರುವ ಪ್ರಕಾರ, ಇಬ್ಬರೂ ಪ್ರತಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ 3,000 ರಿಂದ 5,000 ರೂ.ಗಳವರೆಗೆ ಶುಲ್ಕ ವಿಧಿಸುತ್ತಿದ್ದರು . ಇದು ಅರ್ಹ ಶಸ್ತ್ರಚಿಕಿತ್ಸಕರಿಗಿಂತ ಗಮನಾರ್ಹವಾಗಿ ಕಡಿಮೆ. ಹೀಗಾಗಿ ಇದು ಬಡ ರೋಗಿಗಳನ್ನು ಕೈಗೆಟುಕುವ ಚಿಕಿತ್ಸೆಗಾಗಿ ತೀವ್ರವಾಗಿ ಆಕರ್ಷಿಸಿತು.
ಆದರೆ ಪ್ರಿಯಾಂಕಾ ಸಾವಿನ ನಂತರ ಘಟನೆ ಬೆಳಕಿಗೆ ಬಂದಿದ್ದು,ಮುಖ್ಯ ವೈದ್ಯಾಧಿಕಾರಿಯ ನಿರ್ದೇಶನಗಳನ್ನು ಅನುಸರಿಸಿ, ಫೆಬ್ರವರಿ 8 ರ ರಾತ್ರಿ ಸಿಎಚ್ಸಿ ಸೂಪರಿಂಟೆಂಡೆಂಟ್, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ತಾಂಡಾ ಮತ್ತು ಬಾಸ್ಖರಿ ಪೊಲೀಸರು ಜಂಟಿ ತಪಾಸಣೆ ನಡೆಸಿದ್ದು, ತಪಾಸಣೆಯ ಸಮಯದಲ್ಲಿ, ಆಸ್ಪತ್ರೆಯು ವಸತಿ ಕಟ್ಟಡದ ನಾಲ್ಕು ಕೊಠಡಿಗಳಲ್ಲಿ ಯಾವುದೇ ನೋಂದಣಿ ಪ್ರಮಾಣಪತ್ರ, ಬಯೋಮೆಡಿಕಲ್ ತ್ಯಾಜ್ಯ ದ(ಬಿಎಂಡಬ್ಲ್ಯು) ಅನುಮತಿ, ಅಗ್ನಿಶಾಮಕ ಎನ್ಒಸಿ ಅಥವಾ ಮಾನದಂಡಗಳ ಪ್ರಕಾರ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ: ಅಮ್ಮ ಮಗ ಸಾವು
ಫೆಬ್ರವರಿ 9 ರಂದು ಸಿಎಚ್ಸಿ ಸೂಪರಿಂಟೆಂಡೆಂಟ್ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯ ಅಕ್ರಮ ಕಾರ್ಯಾಚರಣೆ ಮತ್ತು ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳು ಶಸ್ತ್ರಚಿಕಿತ್ಸೆ ಮಾಡಿರಬಹುದು ಎಂದು ಭಾವಿಸಲಾದ ಇತರ ಆಸ್ಪತ್ರೆಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ದಾಖಲೆಗಳ ಪರಿಶೀಲನೆಗೆ ಅಧಿಕಾರಿಗಳು ಆದೇಶಿಸಿದ್ದಾರೆ ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಆರೋಗ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಪ್ರಿಯಾಂಕಾ ಅವರ ಪತಿ ಸಂದೀಪ್ ಅವರು ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

