ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ, ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರವು ವೈರಲ್ ಆಗಿದ್ದ ಅಯ್ಯಪ್ಪನ ಭಕ್ತಿಗೀತೆಯ пародия ವಿರುದ್ಧ ಪ್ರಕರಣ ದಾಖಲಿಸಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣವನ್ನು ಆಧರಿಸಿದ ಈ ಗೀತೆಯು ಧಾರ್ಮಿಕ ನಂಬಿಕೆಗೆ ವಿರುದ್ಧ ಎಂದು ಸರ್ಕಾರ ಆರೋಪ.
ತಿರುವನಂತಪುರ (ಡಿ.19): ಶಬರಿಮಲೆ ಚಿನ್ನ ಕಳವು ಪ್ರಕರಣದಿಂದಾಗಿ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನಗಾದ ಹಿನ್ನಡೆಯಿಂದ ಹತಾಶೆಗೊಂಡಿರುವ ಕೇರಳದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ, ಚುನಾವಣೆ ವೇಳೆ ವೈರಲ್ ಆಗಿದ್ದ ಅಯ್ಯಪ್ಪನ ಭಕ್ತಿಗೀತೆ ಹೋಲುವ ವೈರಲ್ ಗೀತೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿ ಗೀತೆ ಸೃಷ್ಟಿಸಿದವರ ವಿರುದ್ಧ ಪ್ರಕರಣವನ್ನೂ ದಾಖಲಿಸಿದೆ.
ಅಯ್ಯಪ್ಪನ ಗೀತೆ ನಕಲಿನ ಬಗ್ಗೆ ಆಕ್ಷೇಪ
ಭಕ್ತಿಗೀತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಿಪಿಎಂ ನಾಯಕ ಹಾಗೂ ಎಲ್‌ಡಿಎಫ್ ಸಮನ್ವಯಕಾರ ಟಿ.ಪಿ.ರಾಮಕೃಷ್ಣನ್ ಆರೋಪಿಸಿದ್ದಾರೆ.
ಚುನಾವಣೆ ವೇಳೆ ಭಾರೀ ಸಂಚಲನ ಮೂಡಿಸಿದ್ದ ಈ ‘ಕೇಟಿಯೇ’ ಹಾಡಿನ ವಿಡಿಯೋದಲ್ಲಿ ಚಿನ್ನಕದ್ದ ಆರೋಪ ಎದುರಿಸುತ್ತಿರುವ ಉನ್ನಿಕೃಷ್ಣನ್ ಪೊಟ್ಟಿ ಅವರು ಶಬರಿಮನೆಯಲ್ಲಿರುವ ಚಿನ್ನ ಕದ್ದು ತಾಮ್ರವನ್ನು ಇಡುತ್ತಿರುವ ರೀತಿಯಲ್ಲಿ ಸೃಷ್ಟಿಸಲಾಗಿದೆ. ಈ ಗೀತೆ ಎಷ್ಟು ವೈರಲ್ ಆಗಿತ್ತೆಂದರೆ ಸದನದಲ್ಲೂ ಈ ಗೀತೆ ವಿಚಾರ ಪ್ರಸ್ತಾಪವಾಗಿತ್ತು. ಹೀಗಾಗಿ ಇದೀಗ ಅಯ್ಯಪ್ಪನ ಬಗ್ಗೆ ಮಾತನಾಡುವ ಮೂಲಕ ಭಕ್ತರ ಓಲೈಕೆಗೆ ಸಿಪಿಎಂ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ.


