ಕುಡಿದ ಅಮಲಿನಲ್ಲಿದ್ದ ಯುವತಿಯೊಬ್ಬಳು ರಾಪಿಡೋ ಬೈಕ್ ಹತ್ತುವಾಗ ಕೆಳಗೆ ಬಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಯುವ ಸಮೂಹದ ನಡವಳಿಕೆ ಮತ್ತು ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
ಎಳೆ ಪ್ರಾಯದ ಯುವತಿಯೊಬ್ಬಳು ಕುಡಿದ ಅಮಲಿನಲ್ಲಿ ರಾಪಿಡೋದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಕೆಳಗೆ ಬಿದ್ದಂತಹ ಘಟನೆಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದು, ಯುವ ಸಮೂಹ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿದೆ. @rose_k01ಎಂಬ ಎಕ್ಸ್ ಖಾತೆಯಿಂದ ಈ 37 ಸೆಕೆಂಡ್‌ಗಳ ವೀಡಿಯೋವೊಂದು ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಯುವತಿಯೊಬ್ಬಳ ಒಂದು ಕಾಲು ಹಾಗೂ ಕೈ ಬೈಕ್‌ನ ಮೇಲಿದ್ದರೆ ಮತ್ತೊಂದು ಕೈ ಹಾಗೂ ಕಾಲು ನೆಲಕ್ಕೆ ಮುಟ್ಟಿದೆ. ರಾಪಿಡೋ ಚಾಲಕ ಬೈಕಿನ ಜೊತೆಗೆ ಒಂದು ಕೈನಲ್ಲಿ ಆಕೆಯನ್ನು ಹಿಡಿದುಕೊಂಡು ನಿಧಾನಕ್ಕೆ ಕೆಳಗೆ ಬಿಡುವುದನ್ನು ಕಾಣಬಹುದಾಗಿದೆ. ವೀಡಿಯೋಲ್ಲಿ ಕಾಣುವಂತೆ ಆ ಹುಡುಗಿ ಸ್ಪಷ್ಟವಾಗಿ ಮೈಮೇಲಿನ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಗೆ ಏನಾಗುತ್ತಿದೆ ಎಂಬುದೇ ತಿಳಿದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ವೀಡಿಯೋ ಪೋಸ್ಟ್ ಮಾಡಿದ @rose_k01 ಎಂಬ ಖಾತೆದಾರರು, ಈಗಿನ ಯುವತಿಯರಿಗೆ ಏನಾಗುತ್ತಿದೆ?? ದೆಹಲಿಯ ನೈಟ್ ಕ್ಲಬ್ ಹೊರಗೆ ಕುಡಿದ ಅಮಲಿನಲ್ಲಿ ಒಬ್ಬ ಹುಡುಗಿ ರಾಪಿಡೋ ಬೈಕ್ ನಿಂದ ಬಿದ್ದಿದ್ದಾಳೆ. ಅವಳನ್ನು ನೋಡಿ ಅವಳು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ ಎಂದು ಅವರು ಬರೆದಿದ್ದಾರೆ. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಹಲವು ಕಾಮೆಂಟ್ ಮಾಡಿದ್ದಾರೆ.
ಈಗ ಕೆಲವರು ಹೇಳುತ್ತಾರೆ ಡ್ರೈವರ್ ಆಕೆಯ ಅನುಮತಿ ಇಲ್ಲದೇ ಆಕೆಯನ್ನು ಟಚ್ ಮಾಡ್ಬಿಟ್ಟ ಎಂದು ಹೇಳ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಏಕೆ ಆತ ಅನುಮತಿ ಇಲ್ಲದೇ ಆಕೆಯನ್ನು ಟಚ್ ಮಾಡಿದ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. ನಾನು ಬೆಟ್ ಕಟ್ಟಿ ಹೇಳುತ್ತೇನೆ ಅವಳು ಯಾರದಾದರು ಗಮನಕ್ಕೆ ಬಾರದೆ ಇರುತ್ತಿರಲಿಲ್ಲ ಮತ್ತು ಪೊಲೀಸರು, ಸ್ನೇಹಿತರು ಅಥವಾ ಯಾರಾದರೂ ಅವಳಿಗೆ ಸಹಾಯ ಮಾಡಿರುತ್ತಾರೆ. ಆದರೆ ಸಂಪೂರ್ಣವಾಗಿ ಕುಡಿದ ಪುರುಷರು ಯಾರಾದರು ಹೀಗೆ ಮಾಡಿದನೆಂದು ಊಹಿಸಿಕೊಳ್ಳಿ, ಆತ ಅಲ್ಲೇ ಇರುತ್ತಿದ್ದ ತನ್ನ ಹ್ಯಾಂಗೊವರ್ ಮುಗಿದ ನಂತರ ನೋಡುಗರು ಆತನನ್ನು ದೋಚಿ ಜೇಬು ಖಾಲಿ ಮಾಡಿದ ನಂತರ ಎಚ್ಚರಗೊಳ್ಳುತ್ತಿದ್ದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಯಾರಿಗೂ ಬೇಡದ ಕಲ್ಲಿನಿಂದಲೂ ಹಣ ಮಾಡ್ಬಹುದು ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್
ಹೇಯ್, ನೀವು ಕುಡಿಯುವುದು ನಿಮಗೆ ಸಂಬಂಧಿಸಿದ ವಿಷಯ, ಆದರೆ ಕನಿಷ್ಠ ನಿಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ, ಜನರು ಕೆಟ್ಟದಾಗಿ ವರ್ತಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ನೀವು ನಿಮ್ಮ ಸ್ಥಳದಲ್ಲಿ ಕುಡಿಯಿರಿ, ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಬನ್ನಿ, ಪ್ರಿಯತಮೆ, ಪತಿ, ಯಾರೇ ಇರಲಿ. ಆದರೆ ಇದು ಸುರಕ್ಷಿತವಲ್ಲ, ದೇವರ ದಯೆಯಿಂದ ನೀವು ಬದುಕುಳಿದಿದ್ದರೆ ಅದು ಜೀವನಪರ್ಯಂತ ಕೊರಗುವ ಆಘಾತವನ್ನು ನೀಡುತ್ತದೆ ಎಂದು ಒಬ್ಬರು ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಇವಳು ಯಾರೋ ಒಬ್ಬರ ಭವಿಷ್ಯದ ಪತ್ನಿ ಈಕೆಯನ್ನು ಮದುವೆಯಾಗುತ್ತಿರುವ ಸೋದರನ ಬಗ್ಗೆ ಬೇಸರವೆನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ 5000 ಹಣದಲ್ಲ ಕುಡಿದು ನಂತರ ಟ್ಯಾಕ್ಸಿ ಬುಕ್ ಮಾಡೋಕು ಹಣ ಇಲ್ಲದೇ ಆಗಿರಬೇಕು ಅದಕ್ಕೆ 100 ರೂಪಾಯಿ ರಾಪಿಡೋ ಬುಕ್ ಮಾಡಿ ಹೀಗಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರಾಪಿಡೋ ಚಾಲಕ ಪೊಲೀಸರನ್ನು ಕರೆಯಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬೇಟಿ ಬಚಾವೋ ಬೇಟಿ ಪಡವೋ ಬಸ್ ಸಂಸ್ಕಾರ್ ಮತ್ ದೊ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದರೆ ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಆದರೆ ಸಂಸ್ಕಾರ ನೀಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಅದೇನೆ ಇರಲಿ ಹೆಣ್ಣು ಎಷ್ಟೇ ಕಲಿತರು ಎಷ್ಟೇ ಬುದ್ಧಿವಂತೆಯಾದರೂ ತನ್ನ ಮಿತಿಯಲ್ಲಿ ತಾನಿದ್ದರೆ ಚೆಂದ ಇಲ್ಲದೇ ಹೋದರೆ ಬೀದಿಯಲ್ಲಿ ಆಹಾರವಾಗುವಂತಹ ಸ್ಥಿತಿ ಬಂದರೆ ಯಾರನ್ನೂ ದೂರಿ ಪ್ರಯೋಜನವಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.


