ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ 'ಕದನವಿರಾಮ'ದ ಸುಳಿವು. ಎಪ್ಸ್ಟೀನ್ ಹಗರಣದ ಕುರಿತಾದ ವಿವಾದಾತ್ಮಕ ಟ್ವೀಟ್ ಅನ್ನು ಮಸ್ಕ್ ಅಳಿಸಿದ್ದಾರೆ. ರಷ್ಯಾದ ಮಾಜಿ ಅಧ್ಯಕ್ಷ ಮೆಡ್ವೆಡೇವ್ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ.

ವಾಷಿಂಗ್ಟನ್ (ಜೂ.8): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಸ್ನೇಹ ಮುರಿದುಬಿದ್ದ ಬೆನ್ನಲ್ಲೇ, ‘ಕದನವಿರಾಮ’ ಏರ್ಪಟ್ಟಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಅಮೆರಿಕದಲ್ಲಿ ಕುಖ್ಯಾತಿ ಪಡೆದಿರುವ ಎಪ್ಸ್ಟೀನ್ ಲೈಂಗಿಕ ಹಗರಣದ ಕಡತಗಳಲ್ಲಿ ಟ್ರಂಪ್‌ ಹೆಸರಿದೆ ಎಂಬ ಟ್ವೀಟರ್‌ ಪೋಸ್ಟ್‌ ಅನ್ನು ಮಸ್ಕ್‌ ಶನಿವಾರ ಅಳಿಸಿ ಹಾಕಿದ್ದಾರೆ.

‘ನಿಜವಾಗಿಯೂ ದೊಡ್ಡ ಬಾಂಬ್ ಹಾಕುವ ಸಮಯ. ಡೊನಾಲ್ಡ್ ಟ್ರಂಪ್ ಎಪ್ಸ್ಟೀನ್ ಫೈಲ್‌ಗಳಲ್ಲಿದ್ದಾರೆ. ಅವುಗಳನ್ನು ಸಾರ್ವಜನಿಕಗೊಳಿಸದೇ ಇರಲು ಅದೇ ನಿಜವಾದ ಕಾರಣ’ ಎಂದು ಮಸ್ಕ್‌ ಪೋಸ್ಟ್ ಮಾಡಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

ಆದರೆ ಶನಿವಾರ ಈ ಪೋಸ್ಟ್‌ ಅನ್ನು ಮಸ್ಕ್ ಅಳಿಸಿ ಹಾಕಿದ್ದಾರೆ. ಈ ಮೂಲಕ ಕದನವಿರಾಮದ ಸುಳಿವು ನೀಡಿದ್ದಾರೆ.

ಎಪ್ಸ್ಟೀನ್‌ ಎಂಬಾತ ಅಮೆರಿಕದ ಫೈನಾನ್ಷಿಯರ್‌ ಆಗಿದ್ದು, ಆತನ ವಿರುದ್ಧ ಲೈಂಗಿಕ ಹಗರಣ ಆರೋಪವಿದೆ. ಆದರೆ ಆತನ ಲೈಂಗಿಕ ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಕೋರ್ಟ್‌ ದಾಖಲೆಗಳು, ಸಾಕ್ಷ್ಯಗಳು ಮತ್ತು ಮೊಹರು ಮಾಡಿದ ದಾಖಲೆಗಳು ಈವರೆಗೂ ಬಹಿರಂಗವಾಗಿಲ್ಲ. ಹೀಗಾಗಿ ಇದರಲ್ಲಿ ಅಂಶಗಳ ಬಗ್ಗೆ ಬಹಳ ಹಿಂದಿನಿಂದಲೂ ಊಹಾಪೋಹಗಳಿವೆ.

ಕದನ ಬೇಡ- ರಷ್ಯಾ ಮಾಜಿ ಅಧ್ಯಕ್ಷ ಮನವಿ:

ಈ ನಡುವೆ, ‘ಕದನ ಬೇಡ.. ಹುಡುಗರೇ...ನಾನು ನಿಮ್ಮ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಶನಿವಾರ ಟ್ವೀಟ್ ಮಾಡಿದ್ದಾರೆ.