ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ ಆರಂಭಿಸಿದ್ದಾರೆ. 21 ವರ್ಷಗಳ ಕಾಲ ಕಂಪನಿಗಾಗಿ ದುಡಿದಿರುವ ಈ ಉದ್ಯೋಗಿ, ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿಕೊಂಡ ತಕ್ಷಣ ಕೆಲಸದಿಂದ ತೆಗೆದಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಪುಣೆ (ಡಿ.08) ಕಳೆದ 21 ವರ್ಷದಿಂದ ಕಂಪನಿಗಾಗಿ ದುಡಿದಿರುವ ಉದ್ಯೋಗಿಗೆ ಕ್ಯಾನ್ಸರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಒಂದೆಡೆ ಕ್ಯಾನ್ಸರ್ ಶಾಕ್‌ನಿಂದ ಚೇತರಿಸಿಕೊಳ್ಳುವ ಮೊದಲೇ ಕಂಪನಿ ಅತೀ ದೊಡ್ಡ ಹೊಡೆತ ನೀಡಿದೆ. ಉದ್ಯೋಗಿಯನ್ನು ದಿಢೀರ್ ಕೆಲಸದಿಂದ ತೆಗೆದು ಹಾಕಿದ ಗಂಭೀರ ಆರೋಪ ಕೇಳಿಬಂದಿದೆ. ಕಳೆದ 21 ವರ್ಷದಿಂದ ಕಂಪನಿಗಾಗಿ ದುಡಿಯುತ್ತಿರುವ ಉದ್ಯೋಗಿ ಇದೀಗ ತನಗೆ ಆಗಿರುವ ಅನ್ಯಾಯದ ವಿರುದ್ದ ಮೌನವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಕಂಪನಿಯ ಗೇಟಿನ ಮುಂಭಾಗ ಮೌನವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಘಟನೆ ಕಾಮರ್ಸ್‌ಝೋನ್ ಕಂಪನಿಯಲ್ಲಿ ನಡೆದಿದೆ
ಗೇಟಿನ ಮುಂಭಾಗದಲ್ಲೇ ಹೋರಾಟ ಆರಂಭ
ಸಂತೋಷ್ ಜಿ ಅನ್ನೋ ಉದ್ಯೋಗಿ ಕಳೆದ 21 ವರ್ಷದಿಂದ ದುಡಿಯುತ್ತಿದ್ದಾರೆ. ಇದರ ನಡುವೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಪಾಸಣೆ ನಡೆಸಿದಾಗ ಕ್ಯಾನ್ಸರ್ ಪತ್ತೆಯಾಗಿದೆ. ವೈದ್ಯರ ಮಾತುಗಳು ಕೇಳುತ್ತಿದ್ದಂತೆ ಸಂತೋಷ್ ಜಿ ಕುಸಿದಿದ್ದಾರೆ. ತನಗೆ ಕ್ಯಾನ್ಸರ್ ಬಾಧಿಸಿದೆ ಎಂದು ಕುಗ್ಗಿದ್ದಾರೆ. ಆದರೆ ಆಪ್ತರು, ಕುಟುಂಬಸ್ಥರ ನೆರವಿನಿಂದ ಕ್ಯಾನ್ಸರ್ ವಿರುದ್ದ ಹೋರಾಟ ಆರಂಭಿಸಿದ್ದಾರೆ. ಆದರೆ ಕ್ಯಾನ್ಸರ್ ವಿರುದ್ದ ಹೋರಾಟ ಆರಭಿಸುತ್ತಿದ್ದಂತೆ ಇತ್ತ ಕೆಲಸ ಕಳೆದುಕೊಂಡಿದ್ದಾರೆ.ದಿಢೀರ್ ಸಂತೋಷ್ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಧರಣಿ
ಕಾಮರ್ಸ್‌ಝೋನ್ ಕಂಪನಿಯ ಮುಖ್ಯ ಗೇಟಿನ ಮುಂಭಾಗದಲ್ಲಿ ಸಂತೋಷ್ ಉಪವಾಸ ಧರಣಿ ಆರಂಭಿಸಿದ್ದಾರೆ. ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತನಗೆ ನ್ಯಾಯ ಸಿಗಬೇಕು ಎಂದು ಹೋರಾಟ ಆರಂಭಿಸಿದ್ದಾರೆ. ನನಗೆ ನ್ಯಾಯಬೇಕು, ಸರಿಯಾದ ರೀತಿಯಲ್ಲಿ ಕಂಪನಿ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ನಾನು ಯಾರನ್ನು ತಡೆಯುತ್ತಿಲ್ಲ, ಯಾರ ವಿರುದ್ದವೂ ಕೂಗಾಡುತ್ತಿಲ್ಲ. ಮೌನವಾಗಿ ನನ್ನ ಹಕ್ಕುಗಳಿಗೆ ನ್ಯಾಯ ಕೇಳುತ್ತಿದ್ದೇನೆ ಎಂದು ಸಂತೋಷ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಕಂಪನಿಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೆ. ನಾನು ಮೌನವಾಗಿ ನ್ಯಾಯಕ್ಕಾಗಿ ಇಲ್ಲಿನಿಂತಿದ್ದೇನೆ. ಯಾರೆಲ್ಲಾ ಮಾನವೀಯತೆ ಹಾಗೂ ನ್ಯಾಯದ ಪರವಾಗದ್ದಾರೆ, ನಿಮ್ಮೆಲ್ಲರ ನೆರವು ಬಯಸುತ್ತೇನೆ ಎಂದು ಸಂತೋಷ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಮೊದಲ ದಿನ ಉಪವಾಸ
ಸಂತೋಷ್ ತಮ್ಮ ಮೊದಲ ದಿನ ಉಪವಾಸ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಕಚೇರಿ ಮುಂಭಾಗ ಮೌನವಾಗಿ ಪ್ರತಿಭಟನೆ ನಡೆಸಲಿದ್ದರೆ. ತನಗೆ ನ್ಯಾಯ ಸಿಗುವವರಗೂ ಹೋರಾಡುವುದಾಗಿ ಹೇಳಿದ್ದಾರೆ. ಹಲವರು ಸಂತೋಷ್‌ಗೆ ಸಲಹೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಬೆಂಬಲ ಸೂಚಿಸಿದ್ದಾರೆ. ಈ ಪೈಕಿ ಕೆಲವರು, ಈ ವಿಚಾರವನ್ನು ಕೋರ್ಟ್ ಮೂಲಕ ಹೋರಾಡಲು ಸೂಚಿಸಿದ್ದರೆ. ಕಂಪನಿ ನಿಮ್ಮ ಬದಲು ಮತ್ತೊಬ್ಬನ ಆಯ್ಕೆ ಮಾಡಲಿದೆ. ಆದರೆ ಕುಟುಂಬ ಹಾಗಲ್ಲ. ಕುಟುಂಬಕ್ಕೆ ನೀವು ಮುಖ್ಯ. ಹೀಗಾಗಿ ಮೊದಲು ಆರೋಗ್ಯ ನೋಡಿಕೊಳ್ಳಿ, ಬಳಿಕ ಹೋರಾಟ ಮಾಡಿ. ಜೀವ ಇದ್ದರೆ ಮಾತ್ರ ಜೀವನ ಎಂದು ಹಲವರು ಸಲಹೆ ನೀಡಿದ್ದಾರೆ.


