ದೆಹಲಿಯ ಅಯಾ ನಗರದಲ್ಲಿ, ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ದ್ವೇಷವು 52 ವರ್ಷದ ರತನ್ ಲೋಹಿಯಾ ಅವರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. 

ಹತ್ಯೆಯಾದ ವ್ಯಕ್ತಿಯ ದೇಹದಲ್ಲಿತ್ತು 69 ಬುಲೆಟ್:

ನವದೆಹಲಿ: ಎರಡು ಕುಟುಂಬಗಳ ನಡುವಿನ ಸುದೀರ್ಘ ಕಾಲದ ಜಗಳವೊಂದು 52 ವರ್ಷದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ದಕ್ಷಿಣ ದೆಹಲಿಯ ಅಯಾ ನಗರದಲ್ಲಿಈ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು ರತನ್ ಲೋಹಿಯಾ ಎಂದು ಗುರುತಿಸಲಾಗಿದೆ. ಅವರ ದೇಹದಿಂದ 69 ಬುಲೆಟ್‌ಗಳನ್ನು ಹೊರತೆಗೆಯಲಾಗಿದ್ದು, ಕಾರಿನಲ್ಲಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಆದರೆ ಈ ಕೊಲೆಗೆ ಭಾರತದ ಹೊರಗೆ ಇರುವ ಗ್ಯಾಂಗ್‌ಸ್ಟಾರ್‌ಗಳಿಗೆ ಕೊಲೆ ಮಾಡುವುದಕ್ಕೆ ಸುಪಾರಿ ನೀಡಲಾಗಿತ್ತು ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ನವೆಂಬರ್ 30 ರಂದು ಈ ಕೊಲೆ ಪ್ರಕರಣ ನಡೆದಿತ್ತು. ರತನ್ ಲೋಹಿಯಾ ಅವರು ಮುಂಜಾನೆ ಏನೋ ಕೆಲಸಕ್ಕೆಂದು ಮನೆಯಿಂದ ಹೊರ ಬರುತ್ತಿದ್ದಂತೆ ಗುಂಪೊಂದು ಅವರನ್ನು ಸುತ್ತುವರೆದು ಹಲವು ಸುತ್ತುಗಳ ಗುಂಡಿನ ದಾಳಿ ನಡೆಸಿತ್ತು. ಈ ಗುಂಡಿನ ದಾಳಿಯಿಂದ ರತನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸರಿಗೆ ಅಲ್ಲಿ ಖಾಲಿಯಾದ ಶೆಲ್ ಹಾಗೂ ಮೂರು ಸಜೀವ ಗುಂಡುಗಳು ಸಿಕ್ಕಿದ್ದವು. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ನವೆಂಬರ್ 30ರಂದು ಮುಂಜಾನೆ 6 ಗಂಟೆಯ ಹೊತ್ತಿಗೆ ಮೂವರು ದುಷ್ಕರ್ಮಿಗಳು ಅವರಿಗಾಗಿ ಕಾರಿನಲ್ಲಿ ಕುಳಿತು ಕಾಯುತ್ತಿರುವುದು ಕಂಡು ಬಂದಿದೆ. ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೆಟ್ ಕಾರಿನಲ್ಲಿ ಆಯಾ ನಗರದ ಸಂಡೇ ಮಾರ್ಕೆಟ್ ಸಮೀಪ ಅವರು ರತನ್‌ಗಾಗಿ ಕಾಯುತ್ತಿದ್ದರು.

ಇದನ್ನೂ ಓದಿ: 2ನೇ ಪತ್ನಿಯ ಸಾಕುವ ತಾಕತ್ತಿರುವವ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ:ಹೈಕೋರ್ಟ್ ತೀರ್ಪು

ಸಿಸಿಟಿವಿಯನ್ನು ಮತ್ತಷ್ಟು ಪರಿಶೀಲಿಸಿದಾಗ ಈ ಕಾರಿನ ನಂಬರ್ ಪ್ಲೇಟ್‌ನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿರುವುದು ತಿಳಿದು ಬಂತು. ರತನ್ ಅವರ ಕುಟುಂಬದವರ ಪ್ರಕಾರ ಈ ಕೊಲೆಯನ್ನು ರಂಬೀರ್ ಲೋಹಿಯಾ ಹಾಗೂ ಅವರ ಸಂಬಂಧಿಕರು ಮಾಡಿದ್ದಾರೆ. ರಂಬೀರ್ ಅವರ ಮಗ ಅರುಣ್‌ ಅವರ ಸಾವಿಗೆ ಪ್ರತೀಕಾರವಾಗಿ ಈ ಹತ್ಯೆ ಮಾಡಿದ್ದಾರೆ. ಕಳೆದ ಮೇ 15ರಂದು ಅರುಣ್ ತನ್ನ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅರುಣ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದುರಂತದಲ್ಲಿ ಅರುಣ್ ಸಾವನ್ನಪ್ಪಿದ್ದ. ಅರುಣ್‌ ಕೊಲೆ ಪ್ರಕರಣದಲ್ಲಿ ರತನ್ ಅವರ ಹಿರಿಯ ಪುತ್ರ ದೀಪಕ್‌ನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಮತಾಂತರವಾದ ವ್ಯಕ್ತಿ ಸಮಾಧಿ ವಿಚಾರಕ್ಕೆ ಗಲಾಟೆ: ಮತಾಂತರಿಗಳ ಬೆನ್ನಟ್ಟಿ ಚರ್ಚ್‌ಗೆ ಬೆಂಕಿ ಹಚ್ಚಿದ ಬುಡಕಟ್ಟು ಜನರು

ರಾಂಬೀರ್ ಹಾಗೂ ಆತನ ಸಂಬಂಧಿಕರು ಬಹಳ ಹಿಂದಿನಿಂದಲೂ ನನ್ನ ತಂದೆಗೆ ಜೀವ ಬೆದರಿಕೆ ಹಾಕುತ್ತಿದ್ದರು. ಆದರೆ ನಮ್ಮ ತಂದೆಗೆ ಅವರು ಸೇರಿದಂತೆ ಯಾರ ಜೊತೆಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ ಎಂದು ರತನ್ ಅವರ ಪುತ್ರಿ ಹೇಳಿದ್ದಾರೆ. ಈ ಕುಟುಂಬಗಳ ನಡುವಿನ ಈ ಕಲಹವು ಈಗ ಮುಂದಿನ ತಲೆಮಾರಿಗೂ ವ್ಯಾಪಿಸಿದೆ.